ಬೆಂಗಳೂರು: ಅವರಿಬ್ಬರ ಮಧ್ಯೆ ಸದಾ ಜಗಳವಿದ್ದರೂ ಪ್ರೀತಿ ಬೆಟ್ಟದಷ್ಟಿರುತ್ತದೆ. ಕಷ್ಟ ಬಂದಾಗ ತನ್ನನ್ನು ತಾನು ಲೆಕ್ಕಿಸದೇ ಒಬ್ಬರಿಗೊಬ್ಬರು ಜೀವ ಕೊಡಲು ಸಿದ್ಧರಾಗುತ್ತಾರೆ. ಅಂತಹ ಒಂದು ಸಂಬಂಧವೇ ಸಹೋದರ, ಸಹೋದರಿಯರದ್ದು (Brother and sister). ಯಾವಾಗಲೂ ಜಗಳವಾಡುವ ಇವರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಯಾಕೆಂದರೆ ಸಮಸ್ಯೆಗಳು ಬಂದಾಗಲೇ ಅವರು ತಮ್ಮ ಜವಾಬ್ದಾರಿಯನ್ನು ತೋರ್ಪಡಿಸುವುದು, ಪ್ರೀತಿಯನ್ನು ವ್ಯಕ್ತಪಡಿಸುವುದು. ತಂದೆಯ ಬಳಿಕ ಹೆಣ್ಣು ಅತ್ಯಂತ ಗೌರವ, ಪ್ರೀತಿಯನ್ನು ಕೊಡುವುದು ತನ್ನ ಸಹೋದರನಿಗೆ. ಅಂತೆಯೇ ತಾಯಿಯ ಬಳಿಕ ಗಂಡು ಹೆಚ್ಚು ಪ್ರೀತಿ ಮತ್ತು ಗೌರವವನ್ನು ಕೊಡುವುದು ಸಹೋದರಿಗೆ. ತಂಗಿಯ ರಕ್ಷಣೆ (Raksha Bandhan) ಅಣ್ಣನ ಭರವಸೆಯಾದರೆ, ಅಣ್ಣನ ಪ್ರೀತಿ ನನಗೆ ವಿಶ್ವವನ್ನೇ ಗೆಲ್ಲುವ ಶಕ್ತಿ ಕೊಡುತ್ತೆ ಎನ್ನುವ ವಿಶ್ವಾಸ ತಂಗಿಯದ್ದು. ಇದನ್ನೇ ಸಾರುವ ಹಬ್ಬ ರಕ್ಷಾಬಂಧನ (Raksha Bandhan 2025).
ರಕ್ಷಾ ಬಂಧನದ ಆಚರಣೆ ಪ್ರಾರಂಭವಾಗಿದ್ದು ಇಂದು ನಿನ್ನೆಯಿಂದ ಅಲ್ಲ. ಇದಕ್ಕೆ ಸಹಸ್ರಾರು ವರ್ಷಗಳ ಇತಿಹಾಸವೇ ಇದೆ. ಈ ದಿನ ಸಹೋದರಿಯು ಸಹೋದರನ ಮುಂಗೈಗೆ ರಕ್ಷೆಯನ್ನು ಕಟ್ಟಿ ಆರತಿ ಮಾಡಿ ಸಹೋದರನಿಂದ ಆಶೀರ್ವಾದವನ್ನು ಬೇಡುತ್ತಾರೆ. ಸಹೋದರನು ಸದಾ ನಿನ್ನ ಜೊತೆ ಇರುತ್ತೇನೆ ಎನ್ನುವ ಭರವಸೆಯನ್ನು ನೀಡುತ್ತಾರೆ. ಪರಸ್ಪರ ಭ್ರಾತೃತ್ವದ ಭಾವನೆಯನ್ನು ತೋರ್ಪಡಿಸುವ ಹಬ್ಬವೇ ರಕ್ಷಾ ಬಂಧನ.
ಒಂದು ಹಬ್ಬ ಹಲವು ಹೆಸರು
ದೇಶಾದ್ಯಂತ ಆಚರಿಸಲಾಗುವ ಈ ಹಬ್ಬಕ್ಕೆ ರಾಖಿ, ಸಾಲುನೊ, ಸಿಲೋನೋ, ರಾಕ್ರಿ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಹಬ್ಬವನ್ನು ಶ್ರಾವಣ ಪೂರ್ಣಿಮೆ ಹುಣ್ಣಿಮೆಯ ದಿನ ಆಚರಿಸಲಾಗುವುದು. ಕೆಲವೆಡೆ ಇದನ್ನು ಭಾಯಿ ದುಜ್, ಭಾಯಿ ಟಿಕಾ, ಸಾಮಾ ಚ ಎಂದು ಬೇರೆಬೇರೆ ಸಮಯದಲ್ಲಿ ಆಚರಿಸಲಾಗುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನ ಆಚರಣೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಹಬ್ಬವನ್ನು ಈಗ ದೇಶಾದ್ಯಂತ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಯಜುರ್ ಉಪಕರ್ಮ ಎಂದು ಸಹಸ್ರಾರು ವರ್ಷಗಳಿಂದ ಆಚರಿಸಲಾಗುತ್ತಿದೆ. ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಆಚರಿಸುವ ಈ ಹಬ್ಬದ ದಿನ ದಕ್ಷಿಣ ಭಾರತದಲ್ಲಿ ಬ್ರಾಹ್ಮಣರು ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವವರು ತಮ್ಮ ಪವಿತ್ರ ದಾರವನ್ನು ಬದಲಾಯಿಸುತ್ತಾರೆ.

ಆಚರಣೆ ಹೇಗೆ?
ರಕ್ಷಾ ಬಂಧನವನ್ನು ಬಹುತೇಕ ಮನೆಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ಸಾಮಾನ್ಯವಾಗಿ ತಮ್ಮ ಸಹೋದರರ ಹಣೆಗೆ ತಿಲಕವಿಟ್ಟು ರಕ್ಷೆ ಎನ್ನುವ ಪವಿತ್ರ ದಾರವನ್ನು ಸಹೋದರರ ಮಣಿಕಟ್ಟಿಗೆ ಕಟ್ಟುತ್ತಾರೆ. ಬಳಿಕ ಆರತಿ ಮಾಡಿ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರನು ತನ್ನ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾನೆ ಮತ್ತು ಅವಳ ರಕ್ಷಣೆ ಮಾಡುವುದಾಗಿ ಭರವಸೆ ನೀಡುತ್ತಾನೆ. ಕೆಲವು ಕಡೆ ಸಹೋದರರ ಕೈಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ತುಳಸಿ ಗಿಡ, ಅಶ್ವತ್ಥ ಮರಕ್ಕೆ ರಕ್ಷೆ ಕಟ್ಟುವ ಸಂಪ್ರದಾಯವು ಇದೆ.
ರಕ್ಷಾ ಬಂಧನ ಹಬ್ಬವು ಕೇವಲ ಸಹೋದರ ಸಹೋದರಿಗೆ ಮಾತ್ರ ಸೀಮಿತವಲ್ಲ. ಹೆಂಡತಿ ತನ್ನ ಗಂಡನಿಗೆ, ಶಿಷ್ಯ ತನ್ನ ಗುರುವಿಗೆ ಕೂಡ ರಕ್ಷೆಯನ್ನು ಕಟ್ಟಬಹುದು. ರಕ್ಷಾ ಬಂಧನದ ಆಚರಣೆಯು ಸಂಬಂಧಗಳಲ್ಲಿ ಪ್ರೀತಿಯನ್ನು ಬಲಪಡಿಸುತ್ತದೆ. ಕುಟುಂಬದ ಗಡಿಗಳನ್ನು ಮೀರಿ ಆಚರಿಸಲಾಗುವ ಈ ಹಬ್ಬದಲ್ಲಿ ತಮ್ಮ ಆಪ್ತರು, ಸ್ನೇಹಿತರು, ನೆರೆಹೊರೆಯವರಿಗೆ ರಾಖಿ ಕಟ್ಟಿ ಅವರನ್ನು ತಮ್ಮ ಸಹೋದರರನ್ನಾಗಿ ಮಾಡಿಕೊಳ್ಳುವ ಸಂಪ್ರದಾಯವೂ ಇದೆ.
ರಕ್ಷಾ ಬಂಧನದ ಮಹತ್ವ
ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಮಾರುಕಟ್ಟೆಯಲ್ಲಿ ಈಗ ತರಹೇವಾರಿ ರಕ್ಷೆಗಳಿದ್ದರೂ ರಕ್ಷಾ ಬಂಧನದ ವೇಳೆ ರೇಷ್ಮೆ ದಾರವನ್ನೇ ರಕ್ಷೆಯಾಗಿ ಕಟ್ಟುವುದು ವಾಡಿಕೆ. ಸಾಂಪ್ರದಾಯಿಕ ರಾಖಿಯು ಸಹೋದರ ಸಹೋದರಿಯ ಸಂಬಂಧವನ್ನು ಸಂಕೇತಿಸುವ ರೇಷ್ಮೆಯ ಒಂದು ಎಳೆಯಾಗಿದೆ. ರೇಷ್ಮೆ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಬಹುತೇಕ ಅಗೋಚರವಾಗಿರುತ್ತದೆ. ಆದರೆ ಹೆಚ್ಚು ಗಟ್ಟಿಯಾಗಿರುತ್ತದೆ. ಹೀಗಾಗಿ ಕೆಲವರು ರಕ್ಷಾ ಬಂಧನ ಆಚರಣೆಯ ವೇಳೆ ಈ ಪ್ರಾರ್ಥನೆಯನ್ನು ಹೇಳುತ್ತಾರೆ. "ಸೂರ್ಯನು ಬೆಳಕನ್ನು ಹೊರಸೂಸುತ್ತಾನೆ, ಮೂಲಂಗಿ ಬೀಜಗಳನ್ನು ಹರಡುತ್ತದೆ.. ಸಹೋದರ ನಾನು ನಿನಗೆ ರಕ್ಷೆಯನ್ನು ಕಟ್ಟುತ್ತೇನೆ.. ನೀನು ದೀರ್ಘಕಾಲ ಬಾಳು ಎಂದು ಹಾರೈಸುತ್ತೇನೆ..."
ಪುರಾಣದಲ್ಲೂ ಉಲ್ಲೇಖ
ಒಮ್ಮೆ ದೇವತೆಗಳ ರಾಜ ಇಂದ್ರನು ವೃತ್ರ ಅಸುರನ ಕೈಯಲ್ಲಿ ಸೋಲು ಅನುಭವಿಸುವುದರಲ್ಲಿ ಇರುತ್ತಾನೆ. ಆಗ ಗುರು ಬೃಹಸ್ಪತಿಯು ಇಂದ್ರನ ಪತ್ನಿ ಶಚಿ ದೇವಿಗೆ ರಾಕ್ಷಸರಿಂದ ರಕ್ಷಣೆಗಾಗಿ ಇಂದ್ರನಿಗೆ ರಕ್ಷೆಯನ್ನು ಕಟ್ಟುವಂತೆ ಹೇಳುತ್ತಾರೆ. ಅದರಂತೆ ಆಕೆ ಇಂದ್ರನಿಗೆ ರಕ್ಷೆಯನ್ನು ಕಟ್ಟುತ್ತಾಳೆ. ಬಳಿಕ ಇಂದ್ರನಿಗೆ ಜಯವಾಗುತ್ತದೆ.
ಇನ್ನೊಂದು ಕಥೆಯಲ್ಲಿ ಸಮುದ್ರ ದೇವರು, ವರುಣನ ಆರಾಧನೆ ವೇಳೆ ರಕ್ಷಣೆಗಾಗಿ ರಕ್ಷೆಯನ್ನು ಕಟ್ಟಲಾಗುತ್ತಿತ್ತು. ಹೀಗಾಗಿ ಈಗಲೂ ಈ ಹಬ್ಬದ ದಿನ ವರುಣನಿಗೆ ತೆಂಗಿನಕಾಯಿ ಅರ್ಪಿಸುವುದು, ಧಾರ್ಮಿಕ ಸ್ನಾನ ಮತ್ತು ಕರಾವಳಿಯಲ್ಲಿ ಜಾತ್ರೆಗಳು ನಡೆಯುತ್ತವೆ. ಈ ಹಬ್ಬವನ್ನು ನಾರಿಯಲ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಮೀನುಗಾರರು ಸಮುದ್ರ ದೇವರು ವರುಣನಿಗೆ ತೆಂಗಿನಕಾಯಿ ಮತ್ತು ರಕ್ಷೆಯನ್ನು ಸಮರ್ಪಿಸುತ್ತಾರೆ.
ರಕ್ಷಾ ಬಂಧನದ ಆಚರಣೆಯು ಸಹಸ್ರಮಾನ ವರ್ಷಗಳ ಹಿಂದಿನದ್ದು ಎನ್ನಲಾಗುತ್ತದೆ. ಯಾಕೆಂದರೆ 16ನೇ ಶತಮಾನದಲ್ಲಿ ಇದು ಹೆಚ್ಚು ಜನಪ್ರಿಯವಾಗಿತ್ತು. ಕಥೆಗಳ ಪ್ರಕಾರ ಒಮ್ಮೆ ಗಾಳಿಪಟ ಹರಿಸುತ್ತಿದ್ದಾಗ ಶ್ರೀಕೃಷ್ಣನ ಕೈಗೆ ಗಾಯವಾಗುತ್ತದೆ. ಆಗ ಪಾಂಡವರ ಪತ್ನಿ ದ್ರೌಪದಿಯು ತುಂಬಾ ದುಃಖಿತಳಾಗಿ ತನ್ನ ಸೀರೆಯನ್ನು ಹರಿದು ಅದನ್ನು ಆತನ ಕೈಗೆ ಕಟ್ಟುತ್ತಾಳೆ. ಆಗ ಕೃಷ್ಣನು ಅವಳಿಗೆ ದುಷ್ಟರಿಂದ ರಕ್ಷಣೆ ನೀಡುವ ಭರವಸೆ ನೀಡುತ್ತಾನೆ ಮಾತ್ರವಲ್ಲ ಅದನ್ನು ಜೀವನ ಪೂರ್ತಿ ಪಾಲಿಸುತ್ತಾನೆ.
ಇದನ್ನೂ ಓದಿ: Raksha Bandhan 2025: ಈ ವರ್ಷದ ರಕ್ಷಾಬಂಧನ ಅತ್ಯಂತ ಶುಭದಾಯಕ; ಕಾರಣವೇನು?
ಇತಿಹಾಸದಲ್ಲೂ ಕಥೆಗಳಿವೆ
ಅಲೆಕ್ಸಾಂಡರ್ ಪಂಜಾಬ್ ನ ರಾಜ ಪುರುಷೋತ್ತಮನಿಂದ ಸೋತಾಗ ಅಲೆಕ್ಸಾಂಡರ್ ಪತ್ನಿ ತನ್ನ ಪತಿಯನ್ನು ಕೊಲ್ಲದಂತೆ ರಕ್ಷಿಸಲು ಪುರುಷೋತ್ತಮ ರಾಜನಿಗೆ ರಕ್ಷೆಯನ್ನು ಕಟ್ಟಿದಳು ಎನ್ನಲಾಗಿದೆ.
ಇನ್ನು ಚಿತ್ತೋರ್‌ನ ರಾಣಿ ಕರ್ಣಾವತಿಯು ತನ್ನ ರಾಜ್ಯದ ಮೇಲೆ ದಂಡೆತ್ತಿ ಬಂದ ಬಹದ್ದೂರ್ ಷಾನಿಂದ ರಕ್ಷಣೆಗಾಗಿ ಕೋರಿ ಚಕ್ರವರ್ತಿ ಹುಮಾಯೂನನಿಗೆ ರಕ್ಷೆಯನ್ನು ಕಳುಹಿಸಿದಳು. ಬಳಿಕ ಹುಮಾಯುನ್ ಚಿತ್ತೋರ್‌ನ ರಕ್ಷಣೆಗೆ ಧಾವಿಸಿದನು.