- ಸದ್ಗುರು ಶ್ರೀ ಮಧುಸೂದನ ಸಾಯಿ
ಕೇವಲ ಗ್ರಂಥಗಳನ್ನು ಓದುವುದರಿಂದ ಅಥವಾ ಉಪನ್ಯಾಸಗಳನ್ನು ಆಲಿಸುವುದರಿಂದ ದೇವರನ್ನು ಅರಿಯಲು ಸಾಧ್ಯವಾಗದು. ನಿಮ್ಮ ಸ್ವಂತ ಅನುಭವದಿಂದ ಮಾತ್ರ ದೇವರನ್ನು ತಿಳಿಯಲು ಸಾಧ್ಯವಾದೀತು. ನೀವು ಯಾವಾಗಲೂ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು. 'ಸರ್ವದಾ ಸರ್ವಕಾಲೇಷು ಸರ್ವತ್ರ ಹರಿಚಿಂತನಂ'- 'ಪ್ರತಿ ಗಳಿಗೆಯಲ್ಲೂ, ಎಲ್ಲೆಲ್ಲೂ ಮತ್ತು ಎಲ್ಲ ರೀತಿಗಳಿಂದಲೂ ದೇವರ ಕುರಿತು ಚಿಂತನೆ ಮಾಡು'. ನಿಮ್ಮ ಮನಸ್ಸಿನಲ್ಲಿ, 'ನಾನು ದೇವರಿಗಾಗಿ ಏನು ಮಾಡಬಲ್ಲೆ? ಇನ್ನೂ ಹೆಚ್ಚಾಗಿ ನಾನೇನು ದೇವರಿಗಾಗಿ ಮಾಡಬಲ್ಲೆ?' ಎಂಬ ಒಂದೇ ಒಂದು ಯೋಚನೆಯು ಸತತವಾಗಿ ಇರಬೇಕು. ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುತ್ತಲೇ ಇದ್ದರೆ ಮುಂದೆ ಒಂದು ದಿನ ನೀವು ಆತ್ಮತತ್ತ್ವವನ್ನು ಅರಿಯುವಿರಿ.
ಇದು ದೇವರ ಅನುಗ್ರಹದಿಂದಲೇ ಘಟಿಸುತ್ತದೆ. ನಿಮ್ಮ ಮೇಲೆ ಯಾವಾಗ ಅನುಗ್ರಹದ ಮಳೆಯನ್ನು ಸುರಿಸಬೇಕೆಂದು ದೇವರೇ ನಿರ್ಧರಿಸುತ್ತಾನೆ. ನಿಮ್ಮ ಪ್ರಯತ್ನಗಳಿಂದಲೇ ಅವನನ್ನು ಪಡೆಯಬಹುದು ಎಂದು ಯೋಚಿಸುವುದು ಮೂರ್ಖತನವಾದೀತು. ದೇವರ ಕಡೆಯಿಂದ ಅನುಗ್ರಹ ಬರಬೇಕು. ದೇವರು ನಿಮಗಾಗಿ ಅವನ ಹೃದಯದಿಂದ, 'ಅವನು ಅಷ್ಟೊಂದು ನಿಸ್ವಾರ್ಥ ಕೆಲಸಗಳನ್ನು ಮಾಡುತ್ತಿದ್ದಾನೆ; ಅವನು ಸರಳ ಸಜ್ಜನಿಕೆಯ ಜೀವನ ನಡೆಸುತ್ತಿದ್ದಾನೆ; ಅವನು ಎಲ್ಲರಿಗೂ ಸೇವೆ ಸಲ್ಲಿಸುತ್ತಿದ್ದಾನೆ; ಅವನು ದೇವರ ಕೆಲಸವನ್ನೇ ಮಾಡುತ್ತಿದ್ದಾನೆ; ಅವನಿಗೆ ನಾನು ಆತ್ಮಾನುಭವವನ್ನು ನೀಡಬೇಕು' ಎಂದು ಯೋಚಿಸಿದಾಗ, ಅವನಿಂದ ಅನುಗ್ರಹದ ಮಹಾಪೂರವು ಹರಿದುಬರುತ್ತದೆ.
ದೇವರನ್ನು ಕಾಣುಬೇಕು ಎಂದುಕೊಳ್ಳುವ ನಿಮ್ಮ ಎಲ್ಲ ಪ್ರಯತ್ನಗಳು ನಿಮ್ಮನ್ನು ನಿಸ್ವಾರ್ಥಿಗಳನ್ನಾಗಿ ಮಾಡಬೇಕು. ಇದು ಸಾಧ್ಯವಾದಾಗ, ದೇವರು ನೀಡುವ ಅತ್ಯುನ್ನತವಾದ ಪುರಸ್ಕಾರಕ್ಕೆ ನೀವು ಅರ್ಹರಾಗಿದ್ದೀರಿ ಎಂದು ಅವನಿಗೆ ಅನ್ನಿಸುವ ತನಕ ಕಾಯಬೇಕು. ಅದು ನಿಮ್ಮ ಕೈಯಲ್ಲಿಲ್ಲ, ಅವನ ಕೈಯಲ್ಲಿದೆ; ನಿಮ್ಮ ಕೈಯಲ್ಲಿರುವುದು ಕೇವಲ ಶ್ರಮಿಸುವುದು ಮಾತ್ರ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ, "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ (ಭಗವದ್ಗೀತೆ 2.47)" -'ನಿಮಗೆ ಕೊಟ್ಟ ಕೆಲಸ ಮಾಡುವುದರಲ್ಲಿ ಮಾತ್ರ ನಿಮಗೆ ಅಧಿಕಾರವಿದೆಯೇ ಹೊರತು ಆ ಕೆಲಸಗಳ ಫಲಗಳ ಮೇಲೆ ಇಲ್ಲ'. ಎಲ್ಲ ಕೆಲಸಗಳನ್ನು ಯಾವುದೇ ನಿರೀಕ್ಷೆಗಳನ್ನಿಟ್ಟುಕೊಳ್ಳದೆ ಸ್ವಾರ್ಥರಹಿತವಾಗಿ ಮಾಡಿರಿ. ದೇವರು ನಿಮ್ಮನ್ನು ಆದರಿಸಿ ಪುರಸ್ಕರಿಸುತ್ತಾನೆ. ದೃಢವಾದ ವಿಶ್ವಾಸವನ್ನಿಟ್ಟು ನಿಸ್ವಾರ್ಥಿಗಳಾಗಿರಿ. ಮುಂದೊಂದು ದಿನ ದೇವರ ಹೃದಯವು ಕರಗಿ, ನಿಮ್ಮ ಮೇಲೆ ಆಶೀರ್ವಾದಗಳ ಮಳೆಯನ್ನೇ ಸುರಿಸುತ್ತಾನೆ. ಆಗ ನಿಮಗೆ ದೈವೀ ಅನುಭವವು ಆಗುತ್ತದೆ.
ಈ ಸುದ್ದಿಯನ್ನೂ ಓದಿ: Spoorthivani Column: ಚಿತ್ರಗುಪ್ತ ನಿಮ್ಮನ್ನು ಹೇಗೆ ಅಳೆಯುತ್ತಾನೆಂದು ತಿಳಿದರೆ ದೇವರು ಮೆಚ್ಚುವಂತೆ ಬದುಕುವುದು ಸುಲಭ
'ವಸುಧೈವ ಕುಟುಂಬಕಮ್- ಇಡೀ ಜಗತ್ತೇ ಒಂದು ಕುಟುಂಬ'. ಈ ಜಗತ್ತೇ ನಮ್ಮ ದೇವರ ಮನೆ; ನಾವೆಲ್ಲರೂ ಒಂದೇ ಕುಟುಂಬದವರು. ನಾವೆಲ್ಲ ವಿಶಾಲಮನಸ್ಕರಾಗಿ ಈ ರೀತಿ ಯೋಚಿಸಿದರೆ, ಎಲ್ಲರೂ ಸಂತೋಷದಿಂದ ಜೀವಿಸಬಹುದು. 'ಅತಿಥಿ ದೇವೋಭವ (ತೈತ್ತಿರೀಯೋಪನಿಷತ್ತು 1.11.2)' ಮನೆಗೆ ಬರುವ ಎಲ್ಲ ಅತಿಥಿಗಳನ್ನು ದೇವರೆಂದು ಭಾವಿಸಿರಿ. ನಮ್ಮ ಸಂಸ್ಕೃತಿಯೇ ಅಂಥದ್ದು. ಈ ಪವಿತ್ರವಾದ ಭಾರತದೇಶದಲ್ಲಿ ಜನಿಸಿರುವುದೇ ನಿಮ್ಮ ಭಾಗ್ಯ. ಈ ಭರತಭೂಮಿಯಲ್ಲಿ ಯಾವುದೇ ಪಕ್ಷಿಯಾಗಿ ಅಥವಾ ಯಾವುದೇ ಪ್ರಾಣಿಯಾಗಿ ಜನ್ಮತಾಳದೇ ಮನುಷ್ಯರಾಗಿ ಹುಟ್ಟಿಬಂದಿರುವುದು ಇನ್ನೂ ಹೆಚ್ಚಿನ ಭಾಗ್ಯ. ನೀವು ನಿಮ್ಮ ಕರ್ತವ್ಯವನ್ನು ದೇವರ ಸೇವೆಯೆಂದು ತಿಳಿದೇ ಮಾಡಬೇಕು ಮತ್ತು ಅವನಿಗೇ ಅರ್ಪಿಸಬೇಕು; ಇನ್ನೂ ಹತ್ತು ಜನರಿಗೆ ಸಹಾಯವಾಗುವ ಹಾಗೆ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸಬೇಕು. ದೇವರು ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆಗರೆದು ನಿಮಗೆ ಆತ್ಮಾನುಭವವನ್ನು (ಆತ್ಮಸಾಕ್ಷಾತ್ಕಾರ) ದಯಪಾಲಿಸುತ್ತಾನೆ. ಆ ಅಚಲವಾದ ವಿಶ್ವಾಸವನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿರಿ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.