- ಸದ್ಗುರು ಶ್ರೀ ಮಧುಸೂದನ ಸಾಯಿ
ವಿಜ್ಞಾನಿಗಳು ಸಮಯ ಸರಿದಂತೆ ಗತಕಾಲಕ್ಕೆ ಸೇರುತ್ತಾರೆ. ಅವರು ಈಗ ಮಾಡುತ್ತಿರುವ ಹೊಸ ಸಂಶೋಧನೆಗಳ ಫಲಿತಗಳು ನಾಳೆ ಇದಕ್ಕೂ ಹೆಚ್ಚಿನ ಸತ್ಯಗಳ ಶೋಧನೆ ಮಾಡಿದವನಿಂದ ಹಳತಾಗುತ್ತವೆ ಮತ್ತು ಮರೆಯಾಗುತ್ತವೆ. ಉದಾಹರಣೆಗೆ, ಒಂದು ಕಾಲದಲ್ಲಿ, ಹಲವಾರು ಸಂಶೋಧನೆಗಳ ತರುವಾಯ, ಭೂಮಿಯು ಸಮತಟ್ಟಾಗಿದೆ ಎಂದು ತೀರ್ಮಾನಿಸಲಾಗಿತ್ತು. ಇದನ್ನು ಪ್ರಮಾಣೀಕರಿಸಲು ಯುದ್ಧಗಳೇ ನಡೆದವು. ಆಗ, ಇನ್ನೊಬ್ಬ ಬಂದು ಈ ತೀರ್ಮಾನವನ್ನು ತಿರಸ್ಕರಿಸಿ ಭೂಮಿಯು ಗೋಳಾಕಾರದಲ್ಲಿದೆ ಎಂದು ಸ್ಪಷ್ಟಪಡಿಸಿದ.
ಆದರೆ ಅಧ್ಯಾತ್ಮ ವಿದ್ಯೆಯು ಹಾಗಲ್ಲ. ಅದು ಆತ್ಮದ ಕುರಿತು ಚಿಂತನೆ ಮಾಡುತ್ತದೆ. ಎಲ್ಲರಲ್ಲಿಯೂ ಆತ್ಮವು ಒಂದೇ ಆಗಿರುವುದರಿಂದ ಯಾರೂ ಉಳಿದವರಿಗಿಂತ ಹೆಚ್ಚು ಅಥವಾ ಕಡಿಮೆ ಎಂದು ಯೋಚಿಸಬಾರದು. ನೀವು ನಿಮ್ಮ ವಯಸ್ಸಿನ, ಶಿಕ್ಷಣ ಅಥವಾ ಹುದ್ದೆ ಅಧಿಕಾರಿಗಳ ಕಾರಣದಿಂದ ಜಗತ್ತಿನ ಕಣ್ಣಿಗೆ ದೊಡ್ಡವರು ಅಥವಾ ಕಡಿಮೆಯವರು ಎಂದು ಬಾಹ್ಯವಾಗಿ ಗುರುತಿಸಲ್ಪಡಬಹುದು. ಆದರೆ, ನಿಮ್ಮ ದೃಷ್ಟಿಯಲ್ಲಿ, ಎಲ್ಲರೂ ಸಮಾನರಾಗಿಯೇ ಇರಬೇಕು. ‘ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ’ (ಈಶಾವಾಸ್ಯೋಪನಿಷದ್ ಶಾಂತಿ ಮಂತ್ರ), ಅದು ಪೂರ್ಣ, ಇದೂ ಪೂರ್ಣ, ಪೂರ್ಣದಿಂದಲೇ ಪೂರ್ಣವು ಹೊರಹೊಮ್ಮಿದೆ. ನೀವೆಲ್ಲ ಸಂಪೂರ್ಣರಾಗಿದ್ದೀರಿ, ಎಲ್ಲವೂ ಪೂರ್ಣವಾಗಿದೆ, ಎಲ್ಲವೂ ಸಂಪನ್ನವಾಗಿದೆ. ಎಲ್ಲವೂ ಪರಿಪೂರ್ಣವಾಗಿದೆ. ಯಾರೂ ಕಡಿಮೆಯಿಲ್ಲ, ಹೆಚ್ಚೂ ಇಲ್ಲ. ಸಾಮಾಜಿಕ ಸ್ಥಾನಕ್ಕಾಗಿ ಮತ್ತು ಲೋಕ ಪ್ರವರ್ತನೆಗಾಗಿ (ಸಮಾಜದಲ್ಲಿ ವರ್ತಿಸುವ ಪರಿ) ನೀವು ಕೆಲವು ನಿರ್ದಿಷ್ಟವಾದ ರೀತಿಗಳಲ್ಲಿ ನಡೆದುಕೊಳ್ಳಬೇಕು.
ಯಾರೋ ಒಬ್ಬರು ಪ್ರಾಂಶುಪಾಲರಾಗಿಯೂ, ಇನ್ನೊಬ್ಬರು ವಾರ್ಡನ್ನರಾಗಿಯೂ ಮತ್ತೊಬ್ಬರು ಶಿಕ್ಷಕರಾಗಿಯೂ ನಡೆದುಕೊಳ್ಳಬೇಕು. ಇವೆಲ್ಲ ಆಯಾ ಪಾತ್ರಗಳ ಅಗತ್ಯಗಳಿಗನುಸಾರವಾಗಿ ಬೇಕೇ ಬೇಕು. ಆದರೆ, ಆಂತರಿಕವಾಗಿ, ಎಲ್ಲರೂ ಸಮಾನ, ನೀವೆಲ್ಲರೂ ಒಂದೇ. ಬೇರೆಯಲ್ಲ ಎಂದು ಭಾವಿಸಿರಬೇಕು. ಅದೇ ವಿಚಾರಗಳಿಂದ ನೀವೆಲ್ಲರೂ ಬೆಳೆಯಬೇಕು.
ಈ ಜಗತ್ತನ್ನು ಸುಧಾರಿಸುವ ಪ್ರಯತ್ನವನ್ನು ಮಾಡಿದ ಹಲವಾರು ಸಮಾಜ ಸುಧಾರಕರು ಆಗಿಹೋಗಿದ್ದಾರೆ. ಕಾಲಕ್ಕೆ ತಕ್ಕಂತೆ ಸಮಾಜವು ಬದಲಾದಂತೆ, ಸಾಮಾಜಿಕ ತತ್ತ್ವಗಳೂ ಬದಲಾಗುತ್ತವೆ. ಪರಿಣಾಮವಾಗಿ, ಅವರ ಪ್ರಯತ್ನಗಳಿಂದ ಉಂಟಾಗಿರುವ ಬದಲಾವಣೆಗಳು ಕೂಡ ಕಾಲ ಕಳೆದಂತೆ ಮಾಯವಾಗುತ್ತವೆ. ಬದಲಾಗದೇ ಉಳಿದಿರುವ ಏಕೈಕ ವಿಷಯ ಎಂದರೆ ಅದು ಅಧ್ಯಾತ್ಮಿಕತೆ ಮಾತ್ರ.
ದೇವರಿಗಾಗಿ ಮಾಡುವ ಪ್ರೇಮವು ಅತ್ಯಂತ ಶ್ರೇಷ್ಠವಾದುದು. ದೇವರು ಎಂದರೆ ಯಾರು? ಎಲ್ಲರಲ್ಲಿಯೂ ಮತ್ತು ಎಲ್ಲದರಲ್ಲಿಯೂ ಇರುವ ಆತ್ಮವೇ ದೇವರು. ಅಂಥ ಆಧ್ಯಾತ್ಮಿಕತೆಗೆ ಬಾಗಿದ ಮನಸ್ಸು ಮತ್ತು ಪರಿಶುದ್ಧ ಬುದ್ಧಿಶಕ್ತಿಗಳನ್ನು ನೀವು ಹೊಂದಿದ್ದರೆ, ನೀವು ಚೆನ್ನಾಗಿರುತ್ತೀರಿ. ನೀವು ಏನನ್ನು ಸ್ಪರ್ಶಿಸುತ್ತಿರೋ ಅದು ಬಂಗಾರವಾಗುತ್ತದೆ. ನೀವು ವಿಜ್ಞಾನವನ್ನು ಮುಟ್ಟಿರಿ, ನೀವು ಅದರಲ್ಲಿರುವ ಎಲ್ಲವನ್ನೂ ತಿಳಿಯುತ್ತೀರಿ. ನೀವು ಕಲಾವಿಭಾಗವನ್ನು ಸ್ಪರ್ಶಿಸಿದಾಗ, ಅದರಲ್ಲಿಯೂ ಕೂಡ ನೀವು ಪ್ರಭುತ್ವ ಸಾಧಿಸುತ್ತೀರಿ. ಲಲಿತಕಲೆಗಳನ್ನು ಅಭ್ಯಸಿಸಿದಾಗ, ಆ ಕ್ಷೇತ್ರದಲ್ಲಿಯೂ ಸಫಲತೆ ಹೊಂದುತ್ತೀರಿ. ನೀವು ಕ್ರೀಡಾಲೋಕಕ್ಕೆ ಹೋದರೆ, ಅದರಲ್ಲೂ ಶ್ರೇಷ್ಠತೆಯನ್ನು ಪಡೆಯುತ್ತೀರಿ. ವಿವೇಕಾನಂದರಿಗೆ ಪರಿಶುದ್ಧವಾದ ಮತ್ತು ಸ್ವಚ್ಛವಾದ ಮನಸ್ಸು ಇದ್ದ ಕಾರಣ ಅವರಿಗೆ ಅತ್ಯಂತ ಪ್ರಖರವಾದ ಬುದ್ಧಿಶಕ್ತಿಯಿತ್ತು. ಅವರಿಗೆ ಪುಸ್ತಕವೊಂದನ್ನು ಸಂಪೂರ್ಣ ಓದಿದ ನಂತರ ಅದರಲ್ಲಿನ ಪ್ರತಿಯೊಂದು ವಿಷಯವೂ ನೆನಪಿರುತ್ತಿತ್ತು. ಅವರು ಇಂಥ ಬುದ್ಧಿಶಕ್ತಿಯನ್ನು ಹೇಗೆ ಬೆಳೆಸಿಕೊಂಡಿದ್ದರು? ಅವರಿಗೆ ಆಧ್ಯಾತ್ಮಿಕ ಪರಿಶುದ್ಧತೆ ಇದ್ದುದರಿಂದಲೇ ಇದು ಅವರಿಗೆ ಸಾಧ್ಯವಾಗಿತ್ತು.
ಆಳವಾಗಿ ಆಧ್ಯಾತ್ಮಿಕತೆಯಲ್ಲಿ ಮುಳುಗಿಹೋದರೆ ನಿಮ್ಮ ವಿದ್ಯೆಗೆ ಏನಾದರೂ ತೊಂದರೆಯಾಗುವುದೋ ಎಂದು ನೀವು ಚಿಂತಿಸುವ ಅಗತ್ಯವಿಲ್ಲ. ಅದು ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಇದಕ್ಕೆ ಪ್ರತಿಯಾಗಿ ನಿಮ್ಮ ಓದಿನಲ್ಲಿ ಇನ್ನಷ್ಟು ಸುಧಾರಿಸುತ್ತೀರಿ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಸೇವಾ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.