ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spoorthivani column: ದೇವರ ಮೇಲೆ ಪ್ರೇಮವಿದ್ದರೆ, ದೇವರು ಮೆಚ್ಚುವಂತೆ ಬದುಕಿದರೆ ಪಾಪಕ್ಕೆ ಹೆದರಬೇಕಿಲ್ಲ

ದೇವರು ಯಾರನ್ನೂ ಶಿಕ್ಷಿಸುವುದಿಲ್ಲ. ಅವನಿಗೆ ರಕ್ಷಿಸುವುದು ಮತ್ತು ಸಹಾಯ ಮಾಡುವುದಷ್ಟೇ ಗೊತ್ತು. ನಿಮಗೆ ನೋವಾಗಿದ್ದರೆ ಅದು ನಿಮ್ಮ ಕೃತಿಯಿಂದಲೇ ಆಗಿರುತ್ತದೆ; ಹಿಂದಿನ ಅಂಕಣದಲ್ಲಿ ಹೇಳಿದಂತೆ ದೇವರು ಕೇವಲ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದ್ದಾನೆ. ನೀವು ಈ ತತ್ವವನ್ನು ನಿಮ್ಮ ಜೀವನದಲ್ಲಿ ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ದೇವರನ್ನು ದೂರಬಾರದು.

ನಿಸರ್ಗದಲ್ಲಿ ಎಲ್ಲವೂ ಒಂದು ಸೂತ್ರ ಆಧರಿಸಿದಂತೆ ನಡೆಯುತ್ತಿದೆ ಅಲ್ಲವೇ? ಇದಕ್ಕೆ ಸಂಬಂಧಿಸಿದಂತೆ ತೈತ್ತಿರೀಯ ಉಪನಿಷತ್ ಹೀಗೆ ಹೇಳುತ್ತದೆ; 'ಅವನ (ದೇವರ) ಭಯದಿಂದಲೇ ಗಾಳಿಯು ಬೀಸುತ್ತದೆ. ಸೂರ್ಯ ಚಂದ್ರರು ಅವನ ಭಯದಿಂದಲೇ ಉದಯಿಸುತ್ತಾರೆ. ಅವನ ಭಯದಿಂದಲೇ ಇಂದ್ರ, ಅಗ್ನಿ ಮತ್ತು ಮೃತ್ಯುದೇವತೆಯಾದ ಯಮಧರ್ಮರಾಯ - ಇವರು ತಮ್ಮ ಕರ್ತವ್ಯಪಾಲನೆಗೆ ತೆರಳುತ್ತಾರೆ'. (ಭೀಶಾಸ್ಮಾದ್ವಾತಃ ಪಾವತೇ | ಭೀಶೋದೇತಿ ಸೂರ್ಯಃ | ಭೀಶಾಸ್ಮಾದಗ್ನಿಶ್ಚೇಂದ್ರಶ್ಚ | ಮೃತ್ಯುರ್ಧಾವತಿ ಪಂಚಮಾ ಇತಿ || -ತೈತ್ತಿರೀಯೋಪನಿಷದ್ 2.8.2.)

ಈ ಮಂತ್ರವನ್ನು ನಿಧಾನವಾಗಿ ಇನ್ನೊಮ್ಮೆ ಅವಲೋಕಿಸಿ. ನಿಸರ್ಗ ಮತ್ತು ದೇವತೆಗಳು ಕೂಡ ಅವನ ಮೇಲಿನ ಭಯದಿಂದಲ್ಲ; ಅವನ ಮೇಲಿನ ಅಪಾರವಾದ ಗೌರವದಿಂದ ತಮ್ಮ ಕೆಲಸಗಳನ್ನು ನೆರವೇರಿಸುತ್ತಾರೆ. ವೇದಗಳ ನುಡಿಯಾದ 'ಭೀಶಾಸ್ಮಾದ್ವಾತಃ ಪಾವತೇ' ಅವನ ಭಯದಿಂದಲೇ ಗಾಳಿಯು ಬೀಸುತ್ತದೆ ಎನ್ನುವುದರ ಅರ್ಥ ಸಹ ಇದೇ ಆಗಿದೆ. ದೇವರು ಗಾಳಿಯನ್ನು ಶಿಕ್ಷಿಸುತ್ತಾನೆ ಎಂದೇನಲ್ಲ. ದೇವರಿಗೆ ಏನಾದರೂ ಕಷ್ಟವಾದೀತು ಅಥವಾ ತೊಂದರೆಯಾದೀತು ಎಂದು ಗಾಳಿಗೆ ಹೆದರಿಕೆ ಅಥವಾ ಕಳವಳವಾಗುತ್ತದೆ. ಮಾರ್ಕಂಡೇಯನು ಶಿವನನ್ನು ಬೇಡಿಕೊಂಡಾಗ ಏನಾಯಿತು? ಯಮನು ಮಾರ್ಕಂಡೇಯನನ್ನು ಒಯ್ಯಲು ಪಾಶವನ್ನು ಬೀಸಿದ್ದ. ಆದರೆ, ಅವನು ತನ್ನ ಕೆಲಸದಿಂದ ಹಿಂದೆ ಸರಿಯಬೇಕಾಯಿತು. ಏಕೆಂದರೆ, ಅವನಿಗೆ ಶಿವನ ಮೇಲೆ ಅಷ್ಟು ಗೌರವವಿತ್ತು.

ದೇವರು ಯಾರನ್ನೂ ಶಿಕ್ಷಿಸುವುದಿಲ್ಲ. ಅವನಿಗೆ ರಕ್ಷಿಸುವುದು ಮತ್ತು ಸಹಾಯ ಮಾಡುವುದಷ್ಟೇ ಗೊತ್ತು. ನಿಮಗೆ ನೋವಾಗಿದ್ದರೆ ಅದು ನಿಮ್ಮ ಕೃತಿಯಿಂದಲೇ ಆಗಿರುತ್ತದೆ; ಹಿಂದಿನ ಅಂಕಣದಲ್ಲಿ ಹೇಳಿದಂತೆ ದೇವರು ಕೇವಲ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದ್ದಾನೆ. ನೀವು ಈ ತತ್ವವನ್ನು ನಿಮ್ಮ ಜೀವನದಲ್ಲಿ ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ದೇವರನ್ನು ದೂರಬಾರದು. ಏಕೆಂದರೆ, ಅವನು ಕೇವಲ ಸಾಕ್ಷೀಭೂತನಾಗಿರುತ್ತಾನೆ. ಉದಾಹರಣೆಗಾಗಿ, ಭೂಮಿಯ ಮೇಲೆ ಧಾರಾಕಾರ ಮಳೆಯಾದರೆ, ವರುಣದೇವನು ಆ ಪ್ರದೇಶದ ಜನರನ್ನು ಶಿಕ್ಷಿಸುತ್ತಿದ್ದಾನೆ ಎಂದರ್ಥವಲ್ಲ. ಅವನು ನಿಯಮಗಳ ಪ್ರಕಾರ ತನ್ನ ಕರ್ತವ್ಯವನ್ನು ಮಾಡುತ್ತಿದ್ದಾನೆ ಅಷ್ಟೇ. ಸ್ವಾಮಿಯು ಏನಾದರೂ ಮಾಡಿದರೆ, ಅದು ನಿಮ್ಮನ್ನು ಸುಧಾರಿಸುವ, ಉತ್ತಮಗೊಳಿಸುವ ಉದ್ದೇಶಕ್ಕಾಗಿಯೇ ಇರುತ್ತದೆ. ಅದರಿಂದ ನೀವು ದೇವರಿಗೆ ಹತ್ತಿರವಾಗುತ್ತೀರಿ ಎನ್ನುವುದೇ ಅವನು ಉದ್ದೇಶ. ಇದಕ್ಕಿಂತ ಬೇರೆ ಯಾವುದೇ ಉದ್ದೇಶ ಅವನಿಗೆ ಇರುವುದಿಲ್ಲ.

ನೀವು ನಿಮ್ಮ ಕರ್ತವ್ಯಗಳನ್ನು ದೇವರ ಮೇಲಿನ ಪ್ರೇಮದಿಂದ ಮಾಡಬೇಕು. ಅಲ್ಲದೆ, ನಿಮ್ಮ ಯೋಜನೆ, ಕೃತಿ ಮತ್ತು ಮಾತುಗಳಿಂದ ಅವನಿಗೆಲ್ಲಿ ಬೇಸರವಾಗುತ್ತದೆಯೋ ಎನ್ನುವ ಭಯ ಇರಬೇಕು. ಅವನಿಗೆ ಸಂತೋಷವಾಗುವ ಹಾಗೆ ವರ್ತಿಸಲು ಯಾವಾಗಲೂ ಹಾತೊರೆಯಬೇಕು. ದೇವರ ಮೇಲಿನ ನಿಮ್ಮ ಪ್ರೇಮವು ಎಷ್ಟು ಉತ್ಕಟವಾಗಿರಬೇಕೆಂದರೆ ಅದು ನಿಮ್ಮನ್ನು, 'ನಾನು ನನ್ನ ಸ್ವಾಮಿಯ ಬೇಸರಕ್ಕೆ ಹಾಗೂ ತೊಂದರೆಗಳಿಗೆ ಕನಸು ಮನಸಿನಲ್ಲೂ ಕಾರಣವಾಗಬಾರದು' ಎಂದು ಯೋಚಿಸುವಂತೆ ಮಾಡಬೇಕು. ನಿಮಗೆ ದೇವರ ಮೇಲೆ ಪ್ರೇಮವಿದ್ದರೆ, ಪಾಪಭಯವಿರುವುದಿಲ್ಲ ಮತ್ತು ನೀವು ಎಂದಿಗೂ ಪಾಪದ ಕೆಲಸಗಳನ್ನು ಮಾಡಲಾರಿರಿ. ನಿಮಗೆ ಈ ವಿಷಯವು ಗೊತ್ತಿದ್ದರೆ, ನಿಮ್ಮ ಜೀವನದಲ್ಲಿ ಎಲ್ಲವೂ ಸುಗಮವಾಗಿಯೇ ಸಾಗುತ್ತದೆ ಮತ್ತು ನೀವು ಯಾವಾಗಲೂ ಸಂತೋಷವಾಗಿರುತ್ತೀರಿ. ಇಂತಹ ಅಗತ್ಯವಾದ ವಿದ್ಯೆಯು ನಿಮಗೆ ಕರಗತವಾಗಿರಬೇಕು. ಇದು ತುಂಬಾ ಮಹತ್ವವಾದ ವಿದ್ಯೆ. ಇದನ್ನು ನೀವು ಕಲಿತರೆ, ನಿಮಗೆ ಜೀವನದಲ್ಲಿ ಎಲ್ಲ ವಿದ್ಯೆಗಳು ತಂತಾನೇ ಬರುತ್ತವೆ. ದೇವರ ಇಚ್ಛೆಯಂತೆ ನಮ್ಮ ಬದುಕು ಇರಬೇಕು ಎನ್ನುವ ಮನೋಭಾವ ರೂಢಿಯಾಗಬೇಕು ಎನ್ನುವುದೇ ಈ ಮಾತಿನ ಒಟ್ಟು ತಾತ್ಪರ್ಯವಾಗಿದೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.