- ಸದ್ಗುರು ಶ್ರೀ ಮಧುಸೂದನ ಸಾಯಿ
ಈ ಜಗತ್ತಿನಲ್ಲಿ ಹಲವು ಮಕ್ಕಳು ದೈನಂದಿನ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಾವು ಮೊದಲು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಅವರಿಗೆ ಆಹಾರದ ಕೊರತೆಯಿದ್ದರೆ, ನಾವು ಅವರಿಗೆ ಆಹಾರ ಕೊಡಬೇಕು. ಹಸಿವಿನಿಂದ ಬಳಲುತ್ತಿರುವವರಿಗೆ ದೇವರೇ ಆಹಾರ. ಹೊದೆಯಲು ಬಟ್ಟೆಯಿಲ್ಲದೆ ಚಳಿಯಲ್ಲಿ ನಡುಗುತ್ತಿರುವವರಿಗೆ ದೇವರೇ ಉಡುಪಾಗಿ ಬರಬೇಕು. ಯಾರಿಗೆ ಮನೆಯಿಲ್ಲವೋ, ಆಶ್ರಯದ ಸಮಸ್ಯೆ ಇದೆಯೋ, ಅವರಿಗೆ ದೇವರು ಮನೆಯಾಗಿ ಬರಬೇಕು. ವಿದ್ಯೆ ಇಲ್ಲದವರಿಗೆ ದೇವರು ಶಿಕ್ಷಣದ ರೂಪದಲ್ಲಿ ಬರಬೇಕು (Spoorthi Vani Column). ಅನಾರೋಗ್ಯಪೀಡಿತರಿಗೆ ದೇವರು ಆರೋಗ್ಯದ ರೂಪದಲ್ಲಿ ಬರಬೇಕು. ಮೊಟ್ಟ ಮೊದಲಿಗೆ, ದೇವರು ಅವರೆಲ್ಲರ ಅಗತ್ಯಗಳನ್ನು ಪೂರೈಸುವ ದೇವತೆಯಾಗಿ ಬರಬೇಕು. ಹೀಗಾದ ನಂತರವೇ ಅವರು ದೇಹ ಮತ್ತು ಮನಸ್ಸುಗಳನ್ನು ಮೀರಿ ಮೇಲೇರಬಹುದು ಮತ್ತು ದೇವರು ಯಾರು ಎಂದು ಅರಿಯಬಹುದು. ಅವರಿಗೆ ದೈಹಿಕವಾಗಿ ಏನು ಕೊರತೆಯಿದೆಯೋ ಅದನ್ನು ನಾವು ಮೊದಲು ಪೂರೈಸಬೇಕು.
ತನ್ನ ತಂದೆ ತಾಯಿಯರು ಚೆನ್ನಾಗಿ ನೋಡಿಕೊಳ್ಳಲಾರದ ಕಾರಣದಿಂದ ಗ್ರಾಮೀಣ ವಲಯದ ಒಬ್ಬ ಹೆಣ್ಣು ಮಗಳು ತೊಂದರೆ ಪಡುತ್ತಿದ್ದಾಳೆ ಎಂದು ಅಂದುಕೊಳ್ಳೋಣ. ಅವರಿಗೆ ಅವಳನ್ನು ಓದಿಸಲು ಮತ್ತು ಊಟ ಕೊಟ್ಟು ಸಾಕಲು ಸಾಧ್ಯವಿಲ್ಲದ ಕಾರಣ ಅವಳು ಕಿರಿಯಳಾಗಿದ್ದಾಗಲೇ ಇವರ ಇಚ್ಛೆಯ ವಿರುದ್ಧವಾಗಿ ಮದುವೆ ಮಾಡಿಕೊಡುತ್ತಾರೆ. ಅಂಥ ಒಬ್ಬ ಬಾಲಕಿ ಗೋಪಿಕೆಯಾಗಲು ಹೇಗೆ ಸಾಧ್ಯ? ಅಂಥ ಬಾಲಕಿಗೆ ನಮ್ಮ ಸಹಾಯದ ಕೈಚಾಚಿ, "ನಮ್ಮಲ್ಲಿ ಬಾ! ನಾವು ನಿನ್ನನ್ನು ನೋಡಿಕೊಳ್ಳುತ್ತೇವೆ! ನಿನ್ನ ಇಹದ (ಪ್ರಾಪಂಚಿಕ ಕಲ್ಯಾಣ) ಜೊತೆಗೇ ನಿನ್ನ ಪರದ (ಆತ್ಮ ಕಲ್ಯಾಣ) ಕುರಿತೂ ನಾವು ನೋಡಿಕೊಳ್ಳುತ್ತೇವೆ" ಎಂದು ಹೇಳುವುದು ನಮ್ಮ ಕರ್ತವ್ಯವಾಗುವುದಿಲ್ಲವೇ? ನಮ್ಮ ವಿದ್ಯಾಸಂಸ್ಥೆಗಳ ಹಿಂದಿನ ತತ್ತ್ವವೇ ಇದು.
ಈ ಸುದ್ದಿಯನ್ನೂ ಓದಿ: Spoorthivani Column: ಎಲ್ಲೆಡೆ ಕೃಷ್ಣನನ್ನೇ ಕಂಡ ಗೋಪಿಕೆಯರ ಭಕ್ತಿಗೆ ಹೋಲಿಕೆಯೇ ಇಲ್ಲ, ಭಕ್ತಿಯ ಭಾವನೆಗೆ ಯಾವುದೂ ಸರಿಸಾಟಿಯಲ್ಲ
ಅವಕಾಶವಂಚಿತ ಹಾಗೂ ನಿರ್ಗತಿಕ ಮಕ್ಕಳು ಕೂಡ ದೇವರಿಗೆ ಹತ್ತಿರವಾಗುವ ಮತ್ತು ದೇವರ ಮೇಲೆ ಪ್ರೇಮವನ್ನು ಬೆಳೆಸಿಕೊಳ್ಳುವ ಅವಕಾಶಗಳನ್ನು ಅವರಿಗೆ ನೀಡಲು ನಮ್ಮ ಹತ್ತಿರ ಇರುವುದೆಲ್ಲವನ್ನೂ ಅವರೊಂದಿಗೆ ಹಂಚಿಕೊಳ್ಳಬೇಕು. ಆಗ ಅವರು ಯಾವಾಗಲೂ ಸಂತೋಷವಾಗಿ ಇರುತ್ತಾರೆ ಮತ್ತು ಅವರ ಎಲ್ಲ ತೊಂದರೆಗಳೂ ದೂರವಾಗುತ್ತವೆ. ನಾವು ಇಂಥ ಜನರಿಗೆ ಸಂತೋಷದಿಂದ ಸೇವೆ ಸಲ್ಲಿಸಬೇಕು. ಇದೂ ಕೂಡ ಭಕ್ತಿಯ ಒಂದು ರೂಪವೇ.
ಇದುವೇ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಉದ್ದೇಶ (ಮಿಷನ್) ಕೂಡ. ಅವರು ಭೂಮಿಯ ಮೇಲೆ ಅವತಾರ ತಾಳಿ ಬಂದ ಉದ್ದೇಶವನ್ನು ತಮ್ಮ ಮಾತುಗಳಲ್ಲೇ ವರ್ಣಿಸಿದ್ದಾರೆ.
‘ಅಖಿಲ ಮಾನುವುಲಕು ಆನಂದಮುನಗೂರ್ಚಿ ರಕ್ಷಿಂಚುಚುಂದುಟೇ ದೀಕ್ಷ ನಾಕು
ಸನ್ಮಾರ್ಗಮುನು ವೀಡಿ ಚರಿಯಿಂಚು ವಾರಲಪಟ್ಟಿ ಕಾಪಾಡುತೇ ವ್ರತಮು ನಾಕು
ಬೀದಸಾದಲಕೈನ ಪೆನುಬಾಧ ತೊಲಗಿಂಚಿ ಲೇಮಿನಿ ಬಾಪುತೇ ಪ್ರೇಮ ನಾಕು’
(ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರಚಿಸಿ ಹಾಡಿದ ತೆಲುಗು ಪದ್ಯ)
'ಇಡೀ ಮಾನವ ಕುಲಕ್ಕೆ ಆನಂದವನ್ನಿತ್ತು ಎಲ್ಲ ಮಾನವರನ್ನು ರಕ್ಷಿಸುವುದೇ ನನಗೆ ದೀಕ್ಷೆ; ಸನ್ಮಾರ್ಗ ಬಿಟ್ಟು ದೂರಸರಿದ ಜನರ ಕೈಹಿಡಿದು ಸರಿದಾರಿಯಲ್ಲಿ ಮುನ್ನಡೆಸಿ ಅವರನ್ನು ನೋಡಿಕೊಳ್ಳುವುದೇ ನನಗೆ ವ್ರತ; ಬಡವರು ಮತ್ತು ನಿರ್ಗತಿಕರಿಗೆ, ಜೀವನದ ಮೂಲಭೂತ ಅಗತ್ಯಗಳ ಕೊರತೆ ಇರುವವರಿಗೆ ಬೇಕಾದುದನ್ನು ಕೊಡುವುದೇ ನನಗೆ ಪ್ರೇಮ.'
ಹೀಗೆ ಮಾಡುವುದರಿಂದ, ಎಲ್ಲರೂ ಸಂತೋಷಪಡುತ್ತಾರೆ ಮತ್ತು ಜೀವನದ ಅತ್ಯುನ್ನತ ಆನಂದವನ್ನು ಅರಿಯುವ ಸಾಮರ್ಥ್ಯವನ್ನು ಪಡೆಯುತ್ತಾನೆ. ಪ್ರಾಪಂಚಿಕ ಖುಷಿಗಳು ತೀರಾ ತಾತ್ಕಾಲಿಕ ಮತ್ತು ಕ್ಷಣಿಕವಾದವು ಎಂಬುದನ್ನು ನೀವು ಅರಿಯುತ್ತೀರಿ. ಸೂರ್ಯನು ಹೊಳೆಯುತ್ತಿರುವಾಗ ನಕ್ಷತ್ರಗಳು ಕಾಣುವುದಿಲ್ಲ. ಅದರಂತೆ, ಒಮ್ಮೆ ನೀವು ದೇವರ ಕುರಿತಾದ ಪ್ರೇಮವನ್ನು ಅನುಭವಿಸಿದಾಗ ಪ್ರಾಪಂಚಿಕ ಸಂತೋಷಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ನೀವು ಈ ಆತ್ಮಾನಂದವನ್ನು ಹಾಗೂ ಭಕ್ತಿಯ ಆನಂದವನ್ನು ಅನುಭವಿಸಿದ ಮೇಲೆ ಆ ಸುಂದರವಾದ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.