ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spoorthivani Column: ಎಲ್ಲೆಡೆ ಕೃಷ್ಣನನ್ನೇ ಕಂಡ ಗೋಪಿಕೆಯರ ಭಕ್ತಿಗೆ ಹೋಲಿಕೆಯೇ ಇಲ್ಲ, ಭಕ್ತಿಯ ಭಾವನೆಗೆ ಯಾವುದೂ ಸರಿಸಾಟಿಯಲ್ಲ

ಕೃಷ್ಣನು ಬೃಂದಾವನವನ್ನು ತೊರೆದ ನಂತರ ಗೋಪಿಕೆಯರು ಕೃಷ್ಣನ ಅಸ್ತಿತ್ವವನ್ನು ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಕಂಡು ಅನುಭವಿಸಿದರು. ಇದು ತಾವೆಲ್ಲರೂ ಕೃಷ್ಣನ ಪ್ರತಿರೂಪಗಳೇ, ಅವನ ಹೊರತಾಗಿ ಬೇರೇನೂ ಅಲ್ಲ ಎಂದು ಅರಿಯಲು ನೆರವಾಯಿತು. ಅಂತಿಮವಾಗಿ ಅವರು ಕೃಷ್ಣನನ್ನು ಯಾವ ಮಟ್ಟದಲ್ಲಿ ಪ್ರೇಮಿಸಿದರೋ ಅದರಿಂದ ಅವರ ಮನಸ್ಸುಗಳು ಪರಿಶುದ್ಧವಾದವು.

  • ಸದ್ಗುರು ಶ್ರೀ ಮಧುಸೂದನ ಸಾಯಿ

ಕೃಷ್ಣನು ಬೃಂದಾವನವನ್ನು ತೊರೆದ ನಂತರ ಗೋಪಿಕೆಯರು ಕೃಷ್ಣನ ಅಸ್ತಿತ್ವವನ್ನು ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಕಂಡು ಅನುಭವಿಸಿದರು. ಎಲ್ಲವೂ ಕೃಷ್ಣನೇ ಎಂದೂ ಅರಿತರು; ಅವನು ಅವರೊಳಗೆ, ಅವರ ಮೇಲೆ, ಅವರ ಕೆಳಗೆ, ಅವರ ಸುತ್ತಲೂ, ಅವರಲ್ಲಿಯೇ ಇದ್ದನು. ಅವರಿಗೆ ಯಾವುದೇ ವಿದ್ಯೆಯಿಲ್ಲದಿದ್ದರೂ, ಅವರಲ್ಲಿ ಸ್ಪಷ್ಟವಾದ, ಪರಿಶುದ್ಧವಾದ ಮತ್ತು ಪವಿತ್ರವಾದ ಭಕ್ತಿಯಿತ್ತು. ಇದು ತಾವೆಲ್ಲರೂ ಕೃಷ್ಣನ ಪ್ರತಿರೂಪಗಳೇ, ಅವನ ಹೊರತಾಗಿ ಬೇರೇನೂ ಅಲ್ಲ ಎಂದು ಅರಿಯಲು ನೆರವಾಯಿತು. ಅಂತಿಮವಾಗಿ ಅವರಿಗೇನಾಯಿತು? ಅವರು ಕೃಷ್ಣನನ್ನು ಯಾವ ಮಟ್ಟದಲ್ಲಿ ಪ್ರೇಮಿಸಿದರೋ ಅದರಿಂದ ಅವರ ಮನಸ್ಸುಗಳು ಪರಿಶುದ್ಧವಾದವು ಮತ್ತು ಅವರ ಹೃದಯಗಳ ಈ ಪರಿಶುದ್ಧತೆಯಿಂದ ಅವರು ದೈವತ್ವವನ್ನು ಹೊಂದಿದರು. ಆದ್ದರಿಂದಲೇ ಕೃಷ್ಣನ ಮೇಲಿನ ಗೋಪಿಕೆಯರ ಭಕ್ತಿಯು ಯಾವುದೇ ಹೋಲಿಕೆಗೆ ನಿಲುಕುವಂಥದ್ದಲ್ಲ ಎಂದು ಹೇಳಲಾಗಿದೆ.

ಒಮ್ಮೆ ನೀವು ಇಂಥ ಭಕ್ತಿಯನ್ನು ವೃದ್ಧಿಸಿಕೊಂಡರೆ, ಜಗತ್ತಿನ ಯಾವ ವಸ್ತುವೂ ಆ ಭಾವನೆಗೆ ಸರಿಸಾಟಿಯಾಗುವುದಿಲ್ಲ. ಜಗತ್ತಿನ ಅತ್ಯಂತ ಹಿರಿಯದಾದ ಆನಂದವನ್ನು ಈ ಭಕ್ತಿಯ ಆನಂದಕ್ಕೆ ಹೋಲಿಸಿದರೆ, ಅದು ಸೂರ್ಯನ ಮುಂದೆ ಒಂದು ದೀಪವನ್ನಿಟ್ಟು ಸೂರ್ಯನನ್ನು ವರ್ಣಿಸಿದಂತೆ. ಎಲ್ಲ ಸಂಪತ್ತುಗಳಲ್ಲಿ ಭಕ್ತಿಯು ಅತ್ಯಂತ ದೊಡ್ಡ ಸಂಪತ್ತು. ಅದನ್ನು ಸಾಧಿಸಿದ ನಂತರ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ನೀವು ಈ ರೀತಿಯ ತೀವ್ರವಾದ ಭಕ್ತಿಯನ್ನು ವೃದ್ಧಿಸಿಕೊಂಡಿದ್ದೇ ಆದರೆ, ಯಾವಾಗಲೂ ದೇವರ ಕುರಿತಾಗಿಯೇ ಚಿಂತನೆ ನಡೆಸುತ್ತಿರುವ ನಿಮ್ಮ ಸಂತೋಷ, ಆನಂದದಿಂದ ಹೊಳೆಯುತ್ತಿರುವ ಮುಖಾರವಿಂದನನ್ನು ನೋಡಿ, ಉಳಿದವರು ಕೂಡ ಸ್ಫೂರ್ತಿ ಹೊಂದುತ್ತಾರೆ. ಅವರೂ ಸಹ ನಿಮ್ಮ ಹಾಗೆಯೇ ಆಗಲು ಬಯಸುತ್ತಾರೆ.

ಈ ಸುದ್ದಿಯನ್ನೂ ಓದಿ: Spoorthivani Column: ಈಗಾಗಲೇ ತುಂಬಿರುವ ಬಾವಿಯಲ್ಲಿ ನೀವು ಹೆಚ್ಚು ನೀರನ್ನು ಹೇಗೆ ತುಂಬಲು ಸಾಧ್ಯ?

ನಮ್ಮ ಮಕ್ಕಳ ಅಂತರಂಗದೊಂದಿಗೆ ಏನು ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದೇ ನಮ್ಮ ಸಂಸ್ಥೆಗಳಿಗೆ ಅತ್ಯಂತ ನಿರ್ಣಾಯಕ, ಕಠಿಣವಾದ ಕೆಲಸ. ಅವರಲ್ಲಿ ಭಕ್ತಿಯು ವೃದ್ಧಿಯಾಗುತ್ತದೆಯೇ? ಅವರಲ್ಲಿ ದೇವರ ಕುರಿತಾಗಿ ಪ್ರೇಮವು ಬೆಳೆಯುತ್ತಿದೆಯೇ? ಅವರು ತಮ್ಮ ಅಂತರಂಗದಲ್ಲಿ ಪ್ರಗತಿ ಹೊಂದುತ್ತಿದ್ದಾರೆಯೇ? ನಮ್ಮ ಉದ್ದೇಶ (ಮಿಷನ್) ಅವರೇ; ವಿದ್ಯೆಯಲ್ಲ, ಆಸ್ಪತ್ರೆಗಳಲ್ಲ ಮತ್ತು ಸೇವಾ ಚಟುವಟಿಕೆಗಳಲ್ಲ. ಅಂತಿಮವಾಗಿ, ನಿಮ್ಮಲ್ಲಿ ಎಲ್ಲರೂ ದೇವರಾಗಬೇಕು. ಅದೇ ನಮ್ಮ ಕಡೆಯ ಗುರಿ. ಅದು ಈಡೇರದೆ ಉಳಿದೆಲ್ಲವೂ ಸಾಧಿಸಲ್ಪಟ್ಟರೆ, ನಮ್ಮ ಗುರಿಯು ವಿಫಲವಾದಂತೆ.

ಬೇರೆ ಎಲ್ಲ ಸೇವೆಗಳೂ ದೈನಂದಿನ ದಿನಚರಿಗಳು. ಆದರೆ, ನಿಜವಾದ ಗುರಿ ಏನೆಂದರೆ, ನೀವು ದೇವರಾಗುವುದು. ಇದು ದೇವರಂತಾಗುವುದಲ್ಲ. ದೇವರೇ ಆಗುವುದು. ನೀವು ದೇವರಂತಾಗುವುದು ಎಂದರೆ, ಅದರಲ್ಲಿ ಸ್ವಲ್ಪ ಭಾಗ ದೇವರು, ಇನ್ನೂ ಸ್ವಲ್ಪ ಭಾಗ ನೀವಾಗುತ್ತೀರಿ. ಅದು ದ್ವಿಮುಖವಾಗುತ್ತದೆ! ನಾವು, "ಈ ಬೆಳ್ಳಿಯ ಲೋಟವು ಆ ಬೆಳ್ಳಿಯ ಲೋಟದಂತಿದೆ" ಎಂದು ಹೇಳಿದರೆ ಏನರ್ಥ? ಆವರಡೂ ಬೆಳ್ಳಿ ಲೋಟಗಳು. ಎರಡೂ ಒಂದೇ ಥರ ಇವೆ. ಆದರೆ ಒಂದೇ ಅಲ್ಲ ಎಂದರ್ಥ. ಆದ್ದರಿಂದ, 'ಅದರಂತೆ' ಎನ್ನುವುದು ಹೋಗಬೇಕು. ಒಮ್ಮೆ ನೀವು ದೇವರಾದರೆ, ಎರಡು ರೂಪಗಳಿಗೆ ಅವಕಾಶವಿಲ್ಲ. ನದಿಯೊಂದು ಸಾಗರವಾಗಿದೆ. ನೀವು ದೇವರಲ್ಲಿ. "ನಾನು ನೀನಾಗಲು ಬಯಸುತ್ತೇನೆ; ನನಗೆ ಎರಡಾಗಿರುವುದು ಬೇಡ" ಎಂದು ಪ್ರಾರ್ಥಿಸಬೇಕು.

ಇದು ಹೇಗೆ ಸಾಧ್ಯವಾಗುತ್ತದೆ? ಇದು ಮನಸ್ಸಿನಲ್ಲಿ ಆಗುತ್ತದೆ. ನಿಮ್ಮ ಮನಸ್ಸುಗಳಲ್ಲಿ ನೀವು ಒಂದಾಗಬೇಕು; ನಿಮ್ಮ ಹೃದಯಗಳಲ್ಲಿ ನೀವು ಒಂದಾಗಬೇಕು; ನಿಮ್ಮ ಆತ್ಮಗಳಲ್ಲಿ ನೀವು ಒಂದಾಗಬೇಕು. ದೇಹಗಳು ಬೇರೆ ಬೇರೆಯಾಗಿರಬಹುದು. ಆದರೆ, ಮನಸ್ಸು ಮತ್ತು ಹೃದಯಗಳು ಒಂದಾಗಬೇಕು. ಅದೇ 'ಏಕೋಹಂ' ತತ್ತ್ವ. ಅಂದರೆ, ನಾನು ಒಂದೇ ಆಗಿದ್ದೇನೆ. ಅನೇಕ ರೂಪಗಳು ಇರಬಹುದು. ಅಂತಿಮವಾಗಿ ಒಂದೇ ಅಸ್ತಿತ್ವಕ್ಕೆ ಬರುವುದು. ಅದೇ ಭಕ್ತಿಯ ತತ್ತ್ವ. ಅದು ನಿಮ್ಮನ್ನು ದೇವರಂತೆ ಮಾಡಬಾರದು. ಅದು ನಿಮ್ಮನ್ನು ದೇವರಾಗಿಯೇ ಮಾಡಬೇಕು. ಈ ಗುರಿಯನ್ನು ಸೇರಲು ನೀವು ಇಲ್ಲಿದ್ದೀರಿ.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.