ಬೆಂಗಳೂರು: ಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಹೀಗಾಗಿಯೇ ಪ್ರತಿ ಮನೆಯಲ್ಲೂ ಮಗಳು, ಸೊಸೆಯನ್ನು ಲಕ್ಷ್ಮೀ ದೇವಿಯ ರೂಪ ಎನ್ನಲಾಗುತ್ತದೆ. ಯಾಕೆಂದರೆ ಲಕ್ಷ್ಮೀ (Laxmi Devi) ಎಂದರೆ ಸಂಪತ್ತಿನ ದೇವತೆ ಎನ್ನುವ ನಂಬಿಕೆ. ಈ ದೇವಿಯು ನಮ್ಮ ಎಲ್ಲ ಕಷ್ಟಗಳನ್ನು ಕಳೆದು, ಸುಖ, ಸಂಪತ್ತನ್ನು ಕರುಣಿಸಲಿ ಎನ್ನುವ ಅಭಿಲಾಷೆಯಿಂದ ಪ್ರತಿ ವರ್ಷ ಶ್ರಾವಣ ಮಾಸದ (Shravana month) ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು (Varamahalaxmi festival 2025) ಬಹುತೇಕ ಮಹಿಳೆಯರು ಅದರಲ್ಲೂ ಮುಖ್ಯವಾಗಿ ವಿವಾಹಿತ ಸ್ತ್ರೀಯರು ತಮ್ಮ ಪತಿ, ಕುಟುಂಬದ ಸುಖ, ಸಂತೋಷಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ ಎಂಬುದು ವಿಶೇಷ.
ಲಕ್ಷ್ಮೀ ದೇವಿಯನ್ನು ಎಂಟು ರೂಪಗಳಲ್ಲಿ ಪೂಜಿಸಲಾಗುತ್ತದೆ. ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ. ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಪಾರಾಣಿಕ ಕಥೆ
ದೂರ್ವಾಸ ಮಹರ್ಷಿಗಳ ಶಾಪಕ್ಕೆ ಗುರಿಯಾದ ಇಂದ್ರ ಮತ್ತು ಸ್ವರ್ಗವನ್ನು ಬಿಟ್ಟು ಲಕ್ಷ್ಮಿ ದೇವಿ ವೈಕುಂಠ ಸೇರುತ್ತಾಳೆ. ಇದರಿಂದ ದುಃಖಿತರಾದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ದಾನವರೊಡನೆ ಸೇರಿಕೊಂಡು ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು ಸೂಚಿಸುತ್ತಾನೆ. ಸಮುದ್ರ ಮಂಥನದ ವೇಳೆ ಮಹಾಲಕ್ಷ್ಮಿಯು ಕ್ಷೀರ ಸಮುದ್ರದಿಂದ ಹೊರಬಂದು ದೇವತೆಗಳನ್ನು ಮತ್ತೆ ಸಂಪದ್ಭರಿತರನ್ನಾಗಿ ಮಾಡುತ್ತಾಳೆ. ಬಳಿಕ ಮಹಾವಿಷ್ಣುವನ್ನು ಆಕೆ ವಿವಾಹವಾಗುತ್ತಾಳೆ. ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮೀಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ.
ವರಮಹಾಲಕ್ಷ್ಮಿ ವ್ರತದ ಹಿನ್ನೆಲೆ
ವರಲಕ್ಷ್ಮಿ ವ್ರತಾಚರಣೆಯ ಹಿಂದೆ ಹಲವು ಕಥೆಗಳಿವೆ. ಅವುಗಳಲ್ಲಿ ಈ ಎರಡು ಕಥೆಗಳು ಹೆಚ್ಚು ಪ್ರಚಲಿತದಲ್ಲಿದೆ. ಈ ಕಥೆಗಳನ್ನು ಪಾರ್ವತಿ ದೇವಿಗೆ ಶಿವನೇ ಹೇಳಿದ್ದ ಎನ್ನುವ ನಂಬಿಕೆ ಇದೆ.
ಕೋಸಲ ರಾಜ್ಯದಲ್ಲಿ ಧರ್ಮ ಮತ್ತು ಕರ್ತವ್ಯ ನಿಷ್ಠೆ ಹೊಂದಿದ್ದ ಪತಿವ್ರತೆ ಪದ್ಮಾವತಿ ಎಂಬ ಬ್ರಾಹ್ಮಣ ಮಹಿಳೆ ಸದಾ ರೋಗಿಗಳು, ಬಡವರು ಮತ್ತು ನಿರ್ಗತಿಕರಿಗೆ ತನ್ನಿಂದಾದ ಸಹಾಯ ಮಾಡುತ್ತಿದ್ದಳು. ಇದರಿಂದ ಸಂತೋಷಗೊಂಡ ಲಕ್ಷ್ಮಿ ದೇವಿಯು ಒಂದು ಬಾರಿ ಆಕೆಯ ಕನಸಿನಲ್ಲಿ ಕಾಣಿಸಿಕೊಂಡು ನೀನು ಮೋಕ್ಷವನ್ನು ಪಡೆಯಬೇಕಾದರೆ ಶ್ರಾವಣ ಮಾಸದ ನಿರ್ದಿಷ್ಟ ದಿನದಂದು ವರಮಹಾಲಕ್ಷ್ಮಿ ವ್ರತವನ್ನು ಮಾಡುವಂತೆ ಸೂಚಿಸಿದಳು. ಬಳಿಕ ಪದ್ಮಾವತಿಯು ಈ ವ್ರತವನ್ನು ಆಚರಿಸಲು ಪ್ರಾರಂಭಿಸಿದಳು.
ಇನ್ನೊಂದು ಕತೆಯಲ್ಲಿ ವಿದರ್ಭ ದೇಶದ ಕುಂಡಿನಾಪುರದಲ್ಲಿ ಚಾರುಮತಿ ಎಂಬ ಪತಿವ್ರತೆ ಇದ್ದಳು. ಆಕೆಯ ಮನೆಯಲ್ಲಿ ತುಂಬ ಬಡತನವಿತ್ತು. ಆದರೂ ಆಕೆ ಎಲ್ಲರಿಗೂ ತನ್ನಿಂದಾಗುವ ಸಹಾಯ ಮಾಡುತ್ತಿದ್ದಳು. ಪತಿ ಮತ್ತು ಧರ್ಮಕ್ಕೆ ನಿಷ್ಠಳಾಗಿದ್ದಳು. ಅವಳ ಸೇವೆಯನ್ನು ಮೆಚ್ಚಿದ ಲಕ್ಷ್ಮಿ ದೇವಿಯು ಆಕೆಯ ಕನಸಿನಲ್ಲಿ ಕಾಣಿಸಿಕೊಂಡು ಶ್ರಾವಣ ಮಾಸದ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ, ಈ ಕಥೆಯ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿಸು. ಇದರಿಂದ ನಿನ್ನ ಕಷ್ಟಗಳು ದೂರವಾಗುವುದು ಎಂದು ಹೇಳಿದಳು. ಅದರಂತೆ ಚಾರುಮತಿ ಊರಿನವರನ್ನೆಲ್ಲ ಸೇರಿಸಿಕೊಂಡು ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದಳು. ಇದರಿಂದ ಅವಳ ದಾರಿದ್ರ್ಯ ದೂರವಾಯಿತು.
ವ್ರತ ಆಚರಣೆ ಹೇಗೆ?
ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಶುದ್ಧತೆಯಿಂದ ಆಚರಿಸಬೇಕು. ಲಕ್ಷ್ಮಿ ದೇವಿಯು ಶುದ್ಧತೆಯ ಸಂಕೇತ. ಮುಂಜಾನೆ ಬೇಗ ಎದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯ ತಯಾರಿಸಬೇಕು.
ಇದನ್ನೂ ಓದಿ: Varamahalaxmi festival 2025: ಹಬ್ಬಕ್ಕೆ ಮನೆಗೆ ಬರಲು ಸಿದ್ಧ ರೆಡಿಮೇಡ್ ವರಮಹಾಲಕ್ಷ್ಮಿ
ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ, ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಿ ಪೂಜಿಸಲಾಗುತ್ತದೆ. ಪೂಜೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ, ಅರಿಶಿಣ-ಕುಂಕುಮ ಸವರಿದ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಪೂಜೆಯ ವೇಳೆ ದೇವಿಗೆ ಕುಂಕುಮಾರ್ಚನೆ ಮಾಡಿಸಿ 12 ಗಂಟಿನ ಕೆಂಪು ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ಮುತ್ತೈದೆಯರು ಸೇರಿ ಆಚರಿಸುವ ಈ ಪೂಜೆಯ ಕೊನೆಯಲ್ಲಿ ಅವರಿಗೆ ಅರಶಿಣ ಕುಂಕುಮದೊಂದಿಗೆ ಬಾಗಿನ ಕೊಡುವ ಪದ್ಧತಿಯೂ ಇದೆ. ಈ ವ್ರತಾಚರಣೆ ಮಾಡುವವರು ಈ ದಿನ ಪೂರ್ತಿ ಉಪವಾಸ ಇದ್ದು, ಪೂಜೆ ಮುಗಿದ ಬಳಿಕ ಆಹಾರವನ್ನು ಸೇವಿಸುತ್ತಾರೆ.