ಬಿಹಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ಬರು ಮಹಿಳೆಯರ ಹೆಸರಿರುವ, ಅವರಿಬ್ಬರೂ ದಶಕಗಳಿಂದ ಹತ್ತಾರು ಚುನಾವಣೆಗಳಲ್ಲಿ ಮತದಾನ ಮಾಡಿರುವ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಇವರಿಬ್ಬರ ಬಳಿ ಮತದಾರರ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿಗಳೂ ಇವೆಯಂತೆ.
1958ರಲ್ಲಿ 3 ತಿಂಗಳ ಅವಧಿಯ ಪ್ರವಾಸಿ ವೀಸಾ ಪಡೆದು ಭಾರತವನ್ನು ಪ್ರವೇಶಿಸಿದ್ದ ಈ ಮಹಿಳೆ ಯರು, ವೀಸಾ ಅವಧಿ ಮುಗಿದ ಮೇಲೂ ತಮ್ಮ ದೇಶಕ್ಕೆ ಮರಳದೆ ಬಿಹಾರದ ಹಳ್ಳಿಯೊಂದರಲ್ಲಿ ಉಳಿದು, ಮದುವೆಯಾಗಿ ಕುಟುಂಬವನ್ನೂ ಕಟ್ಟಿಕೊಂಡವರು ಎಂಬುದು ಲಭ್ಯ ಮಾಹಿತಿ.
ಇದನ್ನೂ ಓದಿ: Vishwavani Editorial: ಸಮನ್ವಯತೆ ಸಾಧಿಸಬೇಕು
ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ವೇಳೆಯೂ ಪತ್ತೆಯಾಗದ ಈ ಅಪಸವ್ಯವು, ಕೇಂದ್ರದ ಗೃಹ ಸಚಿವಾಲಯವು ಇತ್ತೀಚೆಗೆ ನಡೆಸಿದ ದತ್ತಾಂಶ ಪರಿಶೀಲನೆ ವೇಳೆ ಬಯಲಾಗಿದೆ. ಮೇಲ್ನೋಟಕ್ಕೆ ಇದು ‘ಲಘು ಪ್ರಸಂಗ’ದಂತೆ ಕಂಡಿರಬಹುದು; ಆದರೆ ಇದರ ಹಿನ್ನೆಲೆ ಯಲ್ಲಿ ಕೆಲವರ ‘ಕರ್ತವ್ಯ ಲೋಪ’ವೂ ಅಡಗಿರುವುದನ್ನು ತಳ್ಳಿ ಹಾಕಲಾಗದು.
ಅಖಂಡವಾಗಿರುವ ಈ ಭೂಖಂಡದ ಮೇಲೆ ‘ದೇಶಗಳ’ ಹೆಸರಿನಲ್ಲಿ ಆಗಿರುವ ವಿಭಜನೆಯು ಮಾನವ ನಿರ್ಮಿತವೇ ಆಗಿದ್ದಿರಬಹುದು; ಆದರೆ ದೇಶವೊಂದರ ಏಕತೆ-ಸಮಗ್ರತೆ-ಸಾರ್ವಭೌಮತೆ-ಭದ್ರತೆ ಮುಂತಾದ ಮಹತ್ತರ ವಿಷಯಗಳು ಪರಿಗಣನೆಗೆ ಬಂದಾಗ, ಈ ‘ಮಾನವನಿರ್ಮಿತ ಬೇಲಿ’ ಯನ್ನು ನಿರ್ಲಕ್ಷಿಸಲಾಗದು.
ಈಗ ಭಾರತದಲ್ಲಿ ಅಕ್ರಮವಾಗಿ ಹೀಗೆ ನೆಲೆಸಿರುವ ಪಾಕಿಸ್ತಾನದ ಈ ಇಬ್ಬರು ಮಹಿಳೆಯರು ಭಾರತದ ಭದ್ರತೆಗೆ ಧಕ್ಕೆಯಾಗುವಂಥ ಕೆಲಸ ಮಾಡಿದ್ದಾರೆ ಎಂದು ಇಲ್ಲಿ ಹೇಳುತ್ತಿಲ್ಲ. ಆದರೆ, ಅಂಥ ಜಾಲಗಳು ಭಾರತದೊಳಗೆ ಸಕ್ರಿಯವಾಗಿದ್ದುಕೊಂಡು ಒಳ ಸಂಚು ಹೂಡುವುದಕ್ಕೆ, ತನ್ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸುವುದಕ್ಕೆ ನಮ್ಮವರ ಕರ್ತವ್ಯಲೋಪ ಹೇಗೆಲ್ಲಾ ಕಾರಣವಾಗ ಬಲ್ಲದು ಎಂಬುದಕ್ಕೆ ಈ ನಿದರ್ಶನ ಸಾಕ್ಷಿಯಾಗಬಲ್ಲದು. ದೇಶದ ಉದ್ದಗಲಕ್ಕೂ ಜಾಲಾಡುತ್ತಾ ಹೋದರೆ ಇಂಥ ಅಕ್ರಮ ನಿವಾಸಿಗಳು ಅದೆಷ್ಟು ಸಿಕ್ಕಾರೋ?!