ಭಾರತದ ಸ್ವಾತಂತ್ರ್ಯಕ್ಕೆ ಇಂದು 79ನೇ ಸಂಭ್ರಮ. ದೇಶಕ್ಕಾಗಿ ನಮ್ಮ ಹಿರಿಯರ ಬಲಿದಾನ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು. ಜತೆಗೆ ದೇಶವು ಸಾಗಬೇಕಾದ ಹಾದಿಯನ್ನು ಮತ್ತೊಮ್ಮೆ ಅವಲೋಕನ ಮಾಡಿಕೊಳ್ಳುವ ಸಂದರ್ಭ. ಕವಿ ಸಿದ್ದಲಿಂಗಯ್ಯ ಹಿಂದೊಮ್ಮೆ, ‘ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ?’ ಎಂದು ಗುಡುಗಿದ್ದರು.
ಇಂದೂ ಕೆಲವರು ಇದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 78 ವರ್ಷಗಳ ಸುದೀರ್ಘ ಅವಧಿ ಕಳೆದರೂ ಇನ್ನೂ ಕೆಲವು ದೇಶವಾಸಿಗಳು ಸ್ವಾತಂತ್ರ್ಯದ ಬೆಳಕು ಕಂಡಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಈ ರೀತಿಯ ಭಿನ್ನ ಕೂಗುಗಳು ಕೇಳಿ ಬರುವುದು ಸಹಜ. ಅಪವಾದಗಳ ಹೊರತಾಗಿಯೂ ದೇಶ ಇಂದು ಸಾಕಷ್ಟು ಮುನ್ನಡೆದಿದೆ.
ಇದನ್ನೂ ಓದಿ: Vishwavani Editorial: ಈ ಸಹಯೋಗ ಅನಿವಾರ್ಯ
ಭಾರತೀಯರ ಹೃದಯದಲ್ಲಿ ಇಂದು ಕನಸುಗಳಿವೆ. ಕಣ್ಣಲ್ಲಿ ಬೆಳಕಿದೆ. ವಿಶ್ವಕ್ಕೆ ಬೆಳಕು ತೋರುವ ಭರವಸೆಗಳಿವೆ. ಸರಕಾರ ದೇಶದ ಯುವಶಕ್ತಿಯ ಆಶೋತ್ತರಗಳಿಗೆ ಒತ್ತಾಸೆಯಾಗಿ ನಿಂತರೆ ಈ ದೇಶವನ್ನು ಉನ್ನತಿಯ ಶೃಂಗಕ್ಕೆ ಒಯ್ಯುವುದು ಕಷ್ಟವೇನಲ್ಲ. ಆದರೆ ಅದಕ್ಕೆ ಮುನ್ನ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ದಿನದ ಮಹತ್ವ ಅರಿವಾಗಬೇಕು. ಇದು ಕೇವಲ ಬಾವುಟ ಹಾರಿಸುವ ದಿನವಲ್ಲ. ಪ್ರತಿಯೊಬ್ಬ ಭಾರತೀಯ ದೇಶಕ್ಕಾಗಿ ಮರು ಸಮರ್ಪಣೆ ಮಾಡಿಕೊಳ್ಳುವ ದಿನ.
ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ನಮ್ಮ ಹಕ್ಕುಗಳ ಜತೆ, ಕರ್ತವ್ಯಗಳನ್ನು, ಹೊಣೆಗಾರಿಕೆಯನ್ನು ಅರಿತು ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಿದರೆ ನಾವೂ ಸ್ವಾತಂತ್ರ್ಯ ಯೋಧರ ಸಾಲಿಗೆ ಸೇರುತ್ತೇವೆ. ವಸಾಹ ತುಶಾಹಿ ಅಳಿದರೂ ಜಗತ್ತು ಮತ್ತೊಮ್ಮೆ ಈ ಶಕ್ತಿಗಳ ಬೆದರಿಕೆ ಎದುರಿಸುತ್ತಿದೆ. ಅಮೆರಿಕ ಸುಂಕದ ಹೆಸರಿನಲ್ಲಿ ನಮ್ಮನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ. ಭಾರತೀಯರರೆಲ್ಲರೂ ಒಟ್ಟಾಗಿ ನಿಂತರೆ ವಿಶ್ವದ ಯಾವ ಶಕ್ತಿಯೂ ನಮ್ಮನ್ನು ಮಣಿಸಲಾಗದು. ಸ್ವಾತಂತ್ರ್ಯದ ಹಣತೆ ನಮ್ಮ ಹೃದಯದಲ್ಲಿ ಸದಾ ಬೆಳಗುತ್ತಿರಲಿ.