ಬೆಂಗಳೂರು: ಆರ್‌ಸಿಬಿ ಕಪ್ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಹಲವು ಕ್ರೀಡಾಕೂಟಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದೆ. ಇತ್ತೀಚೆಗಷ್ಟೇ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯವನ್ನು ನವೀ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಅಕ್ಟೋಬರ್ 14ರಂದು ನಡೆಯಲಿರುವ ಎಎಫ್‌ಸಿ(AFC) ಏಷ್ಯನ್ ಕಪ್ 2027ರ ಕ್ವಾಲಿಫೈಯರ್ ಪಂದ್ಯದ ಆತಿಥ್ಯದ ಅವಕಾಶವನ್ನು ಕಂಠೀರವ ಕ್ರೀಡಾಂಗಣ(Sree Kanteerava) ಕಳೆದುಕೊಂಡಿದೆ. ಆದರೆ ಇದಕ್ಕಕೆ ಕಾಲ್ತುಳಿತ ದುರಂತ ಕಾರಣವಲ್ಲ.
ಹೌದು, ಈ ಕ್ರೀಡಾಂಗಣದ ಹುಲ್ಲಿನಂಕಣ ಮತ್ತಿತರ ಸೌಲಭ್ಯಗಳ ಕೊರತೆಯ ಕಾರಣಕ್ಕೆ ಏಷ್ಯನ್ ಫುಟ್‌ಬಾಲ್ ಒಕ್ಕೂಟ (ಎಎಫ್‌ಸಿ) ಅನುಮತಿ ನಿರಾಕರಿಸಿದೆ. ಭಾರತ ಮತ್ತು ಸಿಂಗಪುರ ನಡುವೆ ಇಲ್ಲಿ ಪಂದ್ಯ ನಡೆಯಬೇಕಿತ್ತು. ಈ ಪಂದ್ಯಕ್ಕಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಕಂಠೀರವ ಕ್ರೀಡಾಂಗಣವನ್ನು ಎಎಫ್‌ಸಿಗೆ ಶಿಫಾರಸು ಮಾಡಿತ್ತು. ಅದನ್ನು ಎಎಫ್‌ಸಿ ತಿರಸ್ಕರಿಸಿರುವ ಕಾರಣ ಪರ್ಯಾಯ ತಾಣಕ್ಕೆ ಹುಡುಕಾಟ ನಡೆಯುತ್ತಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಹಲವು ಸೌಲಭ್ಯಗಳ ಕೊರತೆಯಿದೆ. ಹೀಗಾಗಿ, ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಈ ತಾಣ ಅನುಕೂಲಕರವಾಗಿಲ್ಲ ಎಂದು ಕ್ರೀಡಾಂಗಣ ಪರಿಶೀಲನೆಗೆ ಬಂದಿದ್ದ ಸಮಿತಿಯು ಎಎಫ್‌ಸಿಗೆ ವರದಿ ಮಾಡಿತ್ತು ಎನ್ನಲಾಗಿದೆ. ಸಾಮಾನ್ಯವಾಗಿ ಬೆಂಗಳೂರು ಎಫ್‌ಸಿ ಕ್ಲಬ್ ಕಂಠೀರವ ಕ್ರೀಡಾಂಗಣದ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ಸದ್ಯ ಐಎಸ್‌ಎಲ್ ಸ್ಥಗಿತಗೊಂಡಿದ್ದರಿಂದ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ M.Chinnaswamy Stadium: ಚಿನ್ನಸ್ವಾಮಿಯಲ್ಲಿ ಮತ್ತೆ ಕ್ರಿಕೆಟ್ ಪಂದ್ಯ ನಡೆಸಲು 17 ಷರತ್ತು!