ದುಬೈ: ಏಷ್ಯಾಕಪ್ ಟಿ20 ಟೂರ್ನಿಯಲ್ಲಿ(Asia Cup 2025) ಭಾನುವಾರ ರಾತ್ರಿ ದುಬೈನಲ್ಲಿ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಪಾಕಿಸ್ತಾನವನ್ನು(IND vs PAK) ಭಾರತ ಬಗ್ಗುಬಡಿಯಿತು. ಪಂದ್ಯ ಮುಕ್ತಾಯದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ(Salman Agha) ಪಾಲ್ಗೊಂಡಿರಲಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ತಂಡದ ಕೋಚ್ ಮೈಕ್ ಹಸನ್ ಬಹಿರಂಗಪಡಿಸಿದ್ದಾರೆ.
"ಪಂದ್ಯಕ್ಕೂ ಮುನ್ನ, ರವಿಶಾಸ್ತ್ರಿ ನಡೆಸಿದ ಟಾಸ್ ಸಮಯದಲ್ಲಿ, ಸಲ್ಮಾನ್ ಮತ್ತು ಸೂರ್ಯಕುಮಾರ್ ಕೈಕುಲುಕಲಿಲ್ಲ. ಪಂದ್ಯದ ನಂತರ, ಪಾಕಿಸ್ತಾನ ಆಟಗಾರರು ಕೈಕುಲುಕಲು ಸಾಲಾಗಿ ನಿಂತರು, ಆದರೆ ಭಾರತೀಯ ಆಟಗಾರರು ಹಾಜರಿರಲಿಲ್ಲ. ಇದು ಪಾಕ್ ನಾಯಕನಿಗೆ ನಿರಾಸೆ ಉಂಟು ಮಾಡಿತು" ಹೀಗಾಗಿ ಅವರು ಪಂದ್ಯ ಮುಕ್ತಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಹಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಯಾವ ಹಂತದಲ್ಲೂ ಮಾತನಾಡಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅಲ್ಲದೆ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು. ಬಹುಮಾನ ವಿತರಣೆ ವೇಳೆ ಪಾಕಿಸ್ತಾನ ಪರ ಪ್ರಾಯೋಜಕರಿಗೆ ಹ್ಯಾಂಡ್‌ಶೇಕ್ ಮಾಡಲು ಭಾರತ ಆಟಗಾರರು ಹತ್ತಿರವೂ ಸುಳಿಯಲಿಲ್ಲ. ಈ ಮೂಲಕ ಪಾಪಿ ಪಾಕಿಸ್ತಾನಿಗಳಿಗೆ ಭಾರತೀಯ ಆಟಗಾರರು ಛಡಿ ಏಟು ಕೊಟ್ಟರು.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಭಾರತಕ್ಕೆ ಗೆಲುವಿನ 'ಸಿಂಧೂರ'; 7 ವಿಕೆಟ್ ಭರ್ಜರಿ ಜಯ
ಬಹುಮಾನ ವಿತರಣೆ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ‘ಗೆಲುವನ್ನು ಪಹಲ್ಗಾಂ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ’ ಎನ್ನುವ ಮೂಲಕ ಭಾರತೀಯರ ಮನ ಗೆದ್ದರು.