ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆ್ಯಂಡ್ರೆ ರಸೆಲ್‌ ವಿದಾಯ; ವಿಂಡೀಸ್, ಆಸೀಸ್ ಆಟಗಾರರಿಂದ ‘ಗಾರ್ಡ್ ಆಫ್ ಆನರ್’

Andre Russell: ಆ್ಯಂಡ್ರೆ ರಸೆಲ್‌ ಅವರು 2012 ಹಾಗೂ 2016ರಲ್ಲಿ ಟಿ–20 ವಿಶ್ವಕಪ್‌ ಗೆದ್ದ ವೆಸ್ಟ್‌ಇಂಡೀಸ್‌ ತಂಡದ ಭಾಗವಾಗಿದ್ದರು. 2019 ರಿಂದ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ರಸೆಲ್ ಆಡುತ್ತಿದ್ದರು. ವೆಸ್ಟ್ ಇಂಡೀಸ್ ಪರ 86 ಟಿ20 ಪಂದ್ಯಗಳನ್ನು ಆಡಿರುವ ರಸೆಲ್ 1122 ರನ್ ಗಳಿಸಿದ್ದಾರೆ. 71 ರನ್‌ಗಳು ಅವರ ವೈಯುಕ್ತಿಕ ಅತ್ಯಧಿಕ ಸ್ಕೋರ್.

ಕಿಂಗ್ಸ್ಟನ್: ಆಸ್ಟ್ರೇಲಿಯಾ(AUS vs WI) ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನಾಡುವ ಮೂಲಕ ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌(Andre Russell) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ತೆರೆ ಎಳೆದರು. ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್‌ ಹಾಗೂ ಆಸ್ಟ್ರೇಲಿಯಾ ಆಟಗಾರರು ‘ಗಾರ್ಡ್ ಆಫ್ ಆನರ್’(guard of honour) ಸಲ್ಲಿಸಿದರು. ವಿಂಡೀಸ್‌ ಪಂದ್ಯ ಸೋತ ಕಾರಣ ರಸೆಲ್‌ಗೆ ಸೋಲಿನ ವಿದಾಯ ಸಿಕ್ಕಂತಾಯಿತು.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನವೇ ರಸೆಲ್‌ ತಮ್ಮ ನಿವೃತ್ತಿ ಪ್ರಕಟಿಸಿದ್ದರು. ಅದರಂತೆ ತವರು ಮೈದಾನ ಜಮೈಕಾದ ಸಬೀನಾ ಪಾರ್ಕ್‌ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಪಂದ್ಯ ಆಡುವ ಮೂಲಕ ವಿದಾಯ ಹೇಳಿದ್ದಾರೆ. ಪಂದ್ಯದಲ್ಲಿ 15 ಎಸೆತಗಳಲ್ಲಿ 36 ರನ್‌ಗಳಿಸಿ ಔಟ್‌ ಆದ ಬಳಿಕ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದ ವೇಳೆಯಲ್ಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ತವರಿನ ಆಟಗಾರನಿಗೆ ಗೌರವ ಸಲ್ಲಿಸಿದರು.

ಆ್ಯಂಡ್ರೆ ರಸೆಲ್‌ ಅವರು 2012 ಹಾಗೂ 2016ರಲ್ಲಿ ಟಿ–20 ವಿಶ್ವಕಪ್‌ ಗೆದ್ದ ವೆಸ್ಟ್‌ಇಂಡೀಸ್‌ ತಂಡದ ಭಾಗವಾಗಿದ್ದರು. 2019 ರಿಂದ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ರಸೆಲ್ ಆಡುತ್ತಿದ್ದರು. ವೆಸ್ಟ್ ಇಂಡೀಸ್ ಪರ 86 ಟಿ20 ಪಂದ್ಯಗಳನ್ನು ಆಡಿರುವ ರಸೆಲ್ 1122 ರನ್ ಗಳಿಸಿದ್ದಾರೆ. 71 ರನ್‌ಗಳು ಅವರ ವೈಯುಕ್ತಿಕ ಅತ್ಯಧಿಕ ಸ್ಕೋರ್.

ವೇಗದ ಬೌಲರ್ ಆಗಿರುವ ರಸೆಲ್ 61 ವಿಕೆಟ್‌ಗಳನ್ನು ಪಡೆದಿದ್ದಾರೆ. ವೃತ್ತಿಜೀವನದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ರಸೆಲ್ ವೆಸ್ಟ್ ಇಂಡೀಸ್ ಪರ ಆಡಿದ್ದಾರೆ. 56 ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರ ಆಡಿರುವ ರಸೆಲ್ ನಾಲ್ಕು ಅರ್ಧಶತಕಗಳನ್ನು ಸೇರಿದಂತೆ 130 ಸ್ಟ್ರೈಕ್ ರೇಟ್‌ನಲ್ಲಿ ಮತ್ತು 27.21 ಸರಾಸರಿಯಲ್ಲಿ 1,034 ರನ್ ಗಳಿಸಿದ್ದಾರೆ. 92 ರನ್‌ಗಳು ಏಕದಿನದಲ್ಲಿ ಅವರ ಅತ್ಯಧಿಕ ಸ್ಕೋರ್. ಏಕದಿನ ಪಂದ್ಯಗಳಲ್ಲಿ 70 ವಿಕೆಟ್‌ಗಳನ್ನು ರಸೆಲ್ ಪಡೆದಿದ್ದಾರೆ.



"ವೆಸ್ಟ್ ಇಂಡೀಸ್ ಪರ ಆಡಲು ಸಾಧ್ಯವಾದದ್ದು ಹೆಮ್ಮೆಯ ಸಂಗತಿ. ಚಿಕ್ಕವನಿದ್ದಾಗ ವೆಸ್ಟ್ ಇಂಡೀಸ್ ಪರ ಆಡಬಹುದೆಂದು ಊಹಿಸಿಯೂ ಇರಲಿಲ್ಲ. ಯುವ ಆಟಗಾರರಿಗೆ ಸ್ಫೂರ್ತಿಯಾಗಿ ವೆಸ್ಟ್ ಇಂಡೀಸ್ ಜೆರ್ಸಿಯಲ್ಲಿ ನನ್ನನ್ನು ಗುರುತಿಸಿಕೊಳ್ಳಬೇಕೆಂಬುದು ನನ್ನ ಆಸೆ" ಎಂದು ರಸೆಲ್ ವಿದಾಯ ಭಾಷಣದಲ್ಲಿ ಹೇಳಿದ್ದರು.