ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ(Chinnaswamy Stadium)ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್(RCB vs KKR) ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ(Virat Kohli) ಪಂದ್ಯದ ಕೇಂದ್ರಬಿಂದು ಆಗಿದ್ದಾರೆ. ಹೀಗಾಗಿ ಹಿಂದೆಂದಿಗಿಂತಲೂ ಈ ಬಾರಿ ಇಡೀ ಕ್ರೀಡಾಂಗಣದಲ್ಲಿ ಕೇಕೆ, ಚಪ್ಪಾಳೆಗಳ ಸದ್ದಿನಿಂದ ಕೊಹ್ಲಿ..ಕೊಹ್ಲಿ.. ಕೂಗು ಪ್ರತಿಧ್ವನಿಸುವುದು ಖಚಿತ. ಈಗಾಗಲೇ ಅಭಿಮಾನಿಗಳು ಕೂಡ ನೆಚ್ಚಿನ ಆಟಗಾರನಿಗೆ ಬಿಳಿ ಬಣ್ಣದ ಜೆರ್ಸಿ ನಂಬರ್ 18 ಧರಿಸಿ ವಿಶೇಷ ಗೌರವ ಸೂಚಿಸಲು(Virat Kohli tribute) ಸಜ್ಜಾಗಿ ನಿಂತಿದ್ದಾರೆ.
ಕಳೆದ ಎರಡು ದಿನಗಳಿಂದಲೇ ಚಿನ್ನಸ್ವಾಮಿ ಮೈದಾನದ ಆವರಣದಲ್ಲಿ ವಿರಾಟ್ 18 ಎಂದು ಬರೆದಿರುವ ಬಿಳಿ ಜೆರ್ಸಿಗಳ ಮಾರಾಟದ ಭರಾಟೆ ಜೋರಾಗಿತ್ತು.11 ರನ್ ಬಾರಿಸಿದರೆ ಸೂರ್ಯಕುಮಾರ್ ಯಾದವ್(110) ಹಿಂದಿಕ್ಕಿ ಅಗ್ರಸ್ಥಾನದ ಜತೆಗೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳಲಿದ್ದಾರೆ. ಜತೆಗೆ ಕೆಕೆಆರ್ ಎದುರು ಸಾವಿರ ಪ್ಲಸ್ ರನ್ ಗಳಿಸುವ ಅವಕಾಶ ಕೂಡ ಇದೆ.
ಪ್ಲೇ ಆಫ್ ಹೊಸ್ತಿಲಲ್ಲಿ ನಿಂತಿರುವ ಆರ್‌ಸಿಬಿ ಸದ್ಯ 11 ಪಂದ್ಯಗಳಲ್ಲಿ 8 ಗೆಲುವುಗಳ ಮೂಲಕ 16 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಇಂದು ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಒಂದೊಮ್ಮೆ ಇಂದಿನ ಪಂದ್ಯ ಸೋತು ಉಳಿದ 2ರಲ್ಲಿ ಗೆದ್ದರೂ ತಂಡ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲಿದೆ. ಆರ್‌ಸಿಬಿ ಕೊನೆಯ ಬಾರಿಗೆ ಅಗ್ರ-2ರಲ್ಲಿ ಸ್ಥಾನ ಪಡೆದಿದ್ದು 2016ರಲ್ಲಿ. ಆ ವರ್ಷ ತಂಡ ರನ್ನರ್-ಅಪ್ ಆಗಿತ್ತು. ಕೊನೆಯ ಮೂರು ಪಂದ್ಯ ಸೋತರೆ ಆರ್‌ಸಿಬಿ ಹೊರ ಬೀಳುವ ಅಪಾಯ ಕೂಡ ಇದೆ.
ಉದ್ಯಾನನಗರಿಯಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಮಳೆಯಾಗಿದ್ದು, ಶನಿವಾರವೂ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯದ ಸಮಯದಲ್ಲಿ ಶೇ. 65 ರಷ್ಟು ಮಳೆಯಾಗುವ ಸಾಧ್ಯತೆ ಇರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ IPL 2025: ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್, ಬೆಂಗಳೂರಿಗೆ ಸ್ಟಾರ್ ವೇಗಿಯ ಆಗಮನ!
ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಕಳೆದ ಕೆಲ ಆವೃತ್ತಿಗಳಲ್ಲಿ ಬ್ಯಾಟಿಂಗ್ ಸ್ನೇಹಿಯಾಗಿ ರನ್ಮಳೆಗೆ ಸಾಯಾಗುತಿತ್ತು. ಆದರೆ ಈ ಬಾರಿ ಕೇವಲ 2 ಬಾರಿ ಮಾತ್ರ 200 ಪ್ಲಸ್ ಮೊತ್ತ ದಾಖಲಾಗಿದೆ. ಉದ್ಯಾನನಗರಿಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾದ ಕಾರಣ ಪಂದ್ಯದ ವೇಳೆ ಪಿಚ್ ಸಂಪೂರ್ಣ ಬೌಲಿಂಗ್ ಸ್ನೇಹಿಯಾಗುವ ಸಾಧ್ಯತೆ ಇದೆ.