ನವದೆಹಲಿ: ಸ್ಮೃತಿ ಮಧಾನಾ (Smriti Mandhana) ವೇಗದ ಶತಕದ ಹೊರತಾಗಿಯೂ ಭಾರತ ಮಹಿಳಾ ತಂಡ, ಮೂರನೇ ಏಕದಿನ ಪಂದ್ಯದಲ್ಲಿ (INDW vs AUSW) ಆಸ್ಟ್ರೇಲಿಯಾ ಎದುರು 43 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಆ ಮೂಲಕ ಮೂರು ಪಂದ್ಯಗಳ ಮಹಿಳಾ ಏಕದಿನ ಸರಣಿಯನ್ನು ಎದುರಾಳಿ ಆಸ್ಟ್ರೇಲಿಯಾ (Australia Women) ತಂಡಕ್ಕೆ 2-1 ಅಂತರದಲ್ಲಿ ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ಪರ ಭರ್ಜರಿ ಶತಕವನ್ನು ಬಾರಿಸಿದ ಬೆಥ್ ಮೂನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಈ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ, ತನ್ನ ಪಾಲಿನ 47.5 ಓವರ್‌ಗಳಿಗೆ 412 ರನ್‌ಗಳನ್ನು ಗಳಿಸಿ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 413 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಆಸ್ಟ್ರೇಲಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಬೆಥ್ ಮೂನಿ, 75 ಎಸೆತಗಳಲ್ಲಿ 138 ರನ್‌ಗಳನ್ನು ಗಳಿಸಿದರೆ, ಜಾರ್ಜಿಯಾ ವೊಲಿ 81 ರನ್ ಹಾಗೂ ಎಲಿಸ್ ಪೆರಿ 68 ರನ್‌ಗಳನ್ನು ಗಳಿಸಿದರ. ಭಾರತದ ಪರ ಅರುಂಧತಿ ರೆಡ್ಡಿ 3 ವಿಕೆಟ್ ಕಿತ್ತರೆ, ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಿತ್ತರು.
50 ಎಸೆತಗಳಲ್ಲಿ ಶತಕ ಬಾರಿಸಿ ತನ್ನದೇ ದಾಖಲೆಯನ್ನು ಮುರಿದ ಸ್ಮೃತಿ ಮಂಧಾನಾ!
ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ ಕೂಡ ಕಠಿಣ ಹೋರಾಟ ನಡೆಸಿತಾದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, 47 ಓವರ್‌ಗಳಿಗೆ 369 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ 63 ಎಸೆತಗಳಲ್ಲಿ 125 ರನ್‌ಗಳನ್ನು ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 52 ರನ್‌ಗಳನ್ನು ಕಲೆ ಹಾಕಿದರು. ಕೊನೆಯಲ್ಲಿ ಕಠಿಣ ಹೋರಾಟ ನಡೆಸಿದ ದೀಪ್ತಿ ಶರ್ಮಾ 58 ಎಸೆತಗಳಲ್ಲಿ 72 ರನ್‌ಗಳನ್ನು ಕಲೆ ಹಾಕಿದರು. ಆದರೂ ಭಾರತ ತಂಡ, 400 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಕಿಮ್ ಗಾರ್ಥ್ 3 ವಿಕೆಟ್ ಕಿತ್ತರೆ, ಮೇಘನ್ ಶಟ್ ಎರಡು ವಿಕೆಟ್ ಪಡೆದರು.
ಸ್ಮೃತಿ ಮಂಧಾನಾರ ದಾಖಲೆಯ ಶತಕ ವ್ಯರ್ಥ
ಆಸ್ಟ್ರೇಲಿಯಾ ನೀಡಿದ್ದ 413 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಸ್ಮೃತಿ ಮಂಧಾನಾ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶವನ್ನು ತೋರಿದರು. ಅವರು ಕೇವಲ 50 ಎಸೆತಗಳಲ್ಲಿಯೇ ಶತಕವನ್ನು ಸಿಡಿಸಿದರು. ಆ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕವನ್ನು ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು. ಆ ಮೂಲಕ 70 ಎಸೆತಗಳಲ್ಲಿ ತಾವೇ ಸಿಡಿಸಿದ್ದ ಶತಕದ ದಾಖಲೆಯನ್ನು ಮುರಿದರು. ಮತ್ತೊಂದೆಡೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜೊತೆ 121 ರನ್‌ಗಳ ಜೊತೆಯಾಟವನ್ನು ಆಡಿದರು. ಮಂಧಾನಾ ಜೊತೆ ಕೌರ್, ದೀಪ್ತಿ ಶರ್ಮಾ ಕೂಡ ಕೊನೆಯವರೆಗೂ ಹೋರಾಟ ನಡೆಸಿದ್ದರು. ಆದರೂ ಭಾರತ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.