ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್(AB De Villiers), ಮೂರೂ ಸ್ವರೂಪದಲ್ಲಿ ತಮ್ಮ ನೆಚ್ಚಿನ ಮೂವರು ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ್ದಾರೆ. ಇದರಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸಹ ಆಟಗಾರ ವಿರಾಟ್ ಕೊಹ್ಲಿಗೂ (Virat Kohli) ಸ್ಥಾನ ನೀಡಿದ್ದಾರೆ. ಇನ್ನುಳಿದ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನಾಗಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್ ಕಾಲಿಸ್ ಅವರನ್ನು ಎಬಿಡಿ ಆರಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಎಬಿ ಡಿವಿಲಿಯರ್ಸ್‌ಗೆ ಮೂವರು ನೆಚ್ಚಿನ ಬ್ಯಾಟ್ಸ್‌ಮನ್‌ಗಳನ್ನು ಆರಿಸಲು ಪ್ರಶ್ನೆಯನ್ನು ಕೇಳಲಾಯಿತು. ಈ ವೇಳೆ ಆರಂಭದಲ್ಲಿ ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿರುವ ಬ್ರಿಯಾನ್ ಲಾರಾ ಅವರ ಹೆಸರನ್ನು ತೆಗೆದುಕೊಂಡರು. ಆದರೆ, ಅಂತಿಮವಾಗಿ ಅವರು ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಹಾಗೂ ಜಾಕ್ ಕಾಲಿಸ್ ಅವರನ್ನು ಆಯ್ಕೆ ಮಾಡಿದ್ದಾರೆ.
"ಇದು ನಿಜಕ್ಕೂ ಅತ್ಯಂತ ಕಠಿಣ ಪ್ರಶ್ನೆಯಾಗಿದೆ. ಎಲ್ಲಾ ಸ್ವರೂಪದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಾಕ್ ಕಾಲಿಸ್, ಬ್ರಿಯಾನ್ ಲಾರಾ ಅಲ್ಲ, ಜಾಕ್ ಕಾಲಿಸ್, ರಿಕಿ ಪಾಂಟಿಂಗ್ ಹಾಗೂ ವಿರಾಟ್ ಕೊಹ್ಲಿ," ಎಂದು ಎಬಿ ಡಿ ವಿಲಿಯರ್ಸ್ ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.
IND vs ENG 4th Test: ಜೋ ರೂಟ್ ಶತಕ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್!
ಎಬಿ ಡಿ ವಿಲಿಯರ್ಸ್ ಅವರು ಹೇಳಿದ ಹಾದಿ ಈ ಮೂವರು ಆಟಗಾರರ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್‌ನ ಆಧುನಿಕ ದಿಗ್ಗಜ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪದಲ್ಲಿ 617 ಇನಿಂಗ್ಸ್‌ಗಳಿಂದ 27,599 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಈಗಾಗಲೇ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ ಅವರು 51 ಶತಕಗಳನ್ನು ಬಾರಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿಗಿಂತ ಒಂದು ಸ್ಥಾನ ಕೆಳಗೆ ಇದ್ದಾರೆ. ಅವರು 668 ಇನಿಂಗ್ಸ್‌ಗಳಿಂದ 27,483 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಜಾಕ್ ಕಾಲಿಸ್ ಅವರು 617 ಇನಿಂಗ್ಸ್‌ಗಳಿಂದ 25,534 ರನ್‌ಗಳನ್ನು ಗಳಿಸಿದ್ದಾರೆ.
ENG vs IND: ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡದ ಬಗ್ಗೆ ಆರ್ ಅಶ್ವಿನ್ ಆಕ್ರೋಶ!
ಇದೇ ವೇಳೆ ತಮ್ಮ ನೆಚ್ಚಿನ ಮೂರೂ ಸ್ವರೂಪದ ಮೂವರು ಬೌಲರ್‌ಗಳನ್ನು ಆಯ್ಕೆ ಮಾಡಲು ಎಬಿ ಡಿ ವಿಲಿಯರ್ಸ್‌ಗೆ ಕೇಳಲಾಯಿತು. ಆದರೆ, ಎಬಿಡಿ ಅವರು ಈ ಪಟ್ಟಿಯಲ್ಲಿ ಭಾರತದಿಂದ ಒಬ್ಬೇ ಒಬ್ಬ ಬೌಲರ್ ಅನ್ನು ಆಯ್ಕೆ ಮಾಡಲಿಲ್ಲ. ಆದರೆ, ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಸಿಪ್ ಅವರನ್ನು ಆಯ್ಕೆ ಮಾಡಿದ್ದಾರೆ. ಮೊಹಮ್ಮದ್ ಆಸಿಫ್ ಅವರು 72 ಪಂದ್ಯಗಳಿಂದ 165 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಎರಡನೇ ವೇಗದ ಬೌಲರ್ ಆಗಿ ದಕ್ಷಿಣ ಆಫ್ರಿಕಾ ಮಾಜಿ ಸಹ ಆಟಗಾರ ಡೇಲ್ ಸ್ಟೇನ್ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಗ್ರಾಥ್ ಅವರನ್ನು ಆರಿಸಿದ್ದಾರೆ. ಗ್ಲೆನ್ ಮೆಗ್ರಾಥ್ ಅವರು 375 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 948 ವಿಕೆಟ್‌ಗಳನ್ನು ಕಬಳಿಸಿದ್ದಾರೆ.