ಮೆಕೆ (ದಕ್ಷಿಣ ಆಫ್ರಿಕಾ): ಮ್ಯಾಥ್ಯೂ ಬ್ರೀಟ್ಜ್ಕೆ (88 ರನ್) ಅರ್ಧಶತಕ ಹಾಗೂ ಲುಂಗಿ ಎನ್ಗಿಡಿ (42 ಕ್ಕೆ 5) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ, ಎರಡನೇ ಏಕದಿನ ಪಂದ್ಯದಲ್ಲಿ (AUS vs SA) ಆಸ್ಟ್ರೇಲಿಯಾ ವಿರುದ್ಧ 84 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಡೆನ್ ಮಾರ್ಕ್ರಮ್ ಅವರ ನಾಯಕತ್ವದ ಹರಿಣ ಪಡೆ (South Africa) ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶ ಪಡಿಸಿಕೊಂಡಿತು. ಮಾರಕ ಬೌಲಿಂಗ್ ದಾಳಿ ನಡೆಸಿ ಆಸೀಸ್ ತಂಡದ 5 ವಿಕೆಟ್ ಕಿತ್ತ ಲುಂಗಿ ಎನ್ಗಿಡಿ (Lungi Ngidi) ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಶುಕ್ರವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ಮ್ಯಾಥ್ಯೂ ಬ್ರೀಟ್ಜ್ಕೆ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರ ಅರ್ಧಶತಕಗಳ ಬಲದಿಂದ 49.1 ಓವರ್‌ಗಳಿಗೆ 277 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 278 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, ಲುಂಗಿ ಎನ್ಗಿಡಿ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ 37.4 ಓವರ್‌ಗಳಿಗೆ 193 ರನ್‌ಗಳಿಗೆ ಆಲ್‌ಔಟ್ ಆಯಿತು.
AUS vs SA: ಸತತ 4 ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಮ್ಯಾಥ್ಯೂ ಬ್ರೀಟ್ಜ್ಕೆ!
ಆರಂಭಿಕ ಆಘಾತ ಅನುಭವಿಸಿದ ಆಸೀಸ್
ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡದ ಅಗ್ರ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಟ್ರಾವಿಸ್ ಹೆಡ್ (6 ), ಮಾರ್ನಸ್ ಲಾಬುಶೇನ್ (1) ಹಾಗೂ ಮಿಚೆಲ್ ಮಾರ್ಷ್ (18) ಅವರು ಹೊಸ ಚೆಂಡಿನ್ನು ಎದುರಿಸುವಲ್ಲಿ ವಿಫಲರಾಗಿ ಬೇಗ ವಿಕೆಟ್ ಒಪ್ಪಿಸಿದರು. ನಾಲ್ಕನೇ ವಿಕೆಟ್‌ಗೆ ಜೊತೆಯಾದ ಕ್ಯಾಮೆರಾನ್ ಮತ್ತು ಜಾಶ್ ಇಂಗ್ಲಿಸ್ 67 ರನ್‌ಗಳ ಜೊತೆಯಾಟವನ್ನು ಕಲೆ ಹಾಕಿದರು. ಆ ಮೂಲಕ ಮೂರು ವಿಕೆಟ್ ಕಳೆದುಕೊಂಡಿದ್ದ ಆಸೀಸ್‌ಗೆ ಈ ಜೋಡಿ ಆಸರೆಯಾಗಿತ್ತು. 54 ಎಸೆತಗಳಲ್ಲಿ 35 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಗ್ರೀನ್, ಮುತ್ತುಸ್ವಾಮಿಗೆ ವಿಕೆಟ್ ಒಪ್ಪಿಸಿದರು.
ಜಾಶ್ ಇಂಗ್ಲಿಸ್ ಅರ್ಧಶತಕ
ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಒಪ್ಪಿಸುತ್ತಿದ್ದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಜಾಶ್ ಇಂಗ್ಲಿಸ್, ಕಠಿಣ ಹೋರಾಟ ನಡೆಸಿದರು. ಅವರು ಆಡಿದ 74 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 87 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಅವರು 36ನೇ ಓವರ್‌ನಲ್ಲಿ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಆಸೀಸ್ ತಂಡದ ಹೋರಾಟ ಮುಗಿಯಿತು. ಆಸೀಸ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಕೇರಿ, ಆರೋನ್ ಹಾರ್ಡಿ ವಿಫಲರಾದರು.
5 ವಿಕೆಟ್ ಸಾಧನೆ ಮಾಡಿದ ಲುಂಗಿ ಎನ್ಗಿಡಿ
ಮಧ್ಯಮ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಲುಂಗಿ ಎನ್ಗಿಡಿ 5 ವಿಕೆಟ್ ಸಾಧನೆ ಮಾಡಿದರು. ಮಾರ್ನಸ್ ಲಾಬುಶೇನ್, ಜಾಶ್ ಇಂಗ್ಲಿಸ್, ಆರೋನ್ ಹಾರ್ಡಿ, ಕ್ಸಿವಿಯರ್ ಬಾರ್ಲೆಟ್ ಹಾಗೂ ಆಡಂ ಝಾಂಪ ಅವರನ್ನು ಔಟ್ ಮಾಡಿದರು.
ಅರ್ಧಶತಕಗಳನ್ನು ಸಿಡಿಸಿದ್ದ ಮ್ಯಾಥ್ಯೂ ಬ್ರೀಟ್ಜ್ಕೆ-ಟ್ರಿಸ್ಟನ ಸ್ಟಬ್ಸ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಯಾನ್ ರಿಕೆಲ್ಟನ್ ಹಾಗೂ ಏಡೆನ್ ಮಾರ್ಕ್ರಮ್ ಅವರು ಬೇಗ ವಿಕೆಟ್ ಒಪ್ಪಿಸಿದರು. 39 ಎಸೆತಗಳಲ್ಲಿ 38 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಟೋನಿ ಡಿ ಜಾರ್ಜಿ, ಆಡಣ ಝಂಪಾ ಸ್ಪಿನ್ ಮೋಡಿಗೆ ಶರಣಾದರು. ನಾಲ್ಕನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಮ್ಯಾಥ್ಯೂ ಬ್ರೀಟ್ಜ್ಕೆ ಅವರು, 78 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 88 ರನ್ ಗಳಿಸಿದರು. ಆ ಮೂಲಕ ಆರಂಭಿಕ ಆಘಾತ ಅನುಭವಿಸಿದ್ದ ಹರಿಣ ಪಡೆಯನ್ನು ಮೇಲೆತ್ತಿದ್ದರು.
AUS vs SA: ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ, ಟಿ20ಐ ಸರಣಿ ಗೆದ್ದ ಆಸ್ಟ್ರೇಲಿಯಾ!
ಅಲ್ಲದೆ ಟ್ರಿಸ್ಟನ್ ಸ್ಟಬ್ಸ್ ಜೊತೆ ಇವರು ನಾಲ್ಕನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವನ್ನು ಆಡಿದರು. ಇದಕ್ಕೂ ಮುನ್ನ ಟೋನಿ ಜಾರ್ಜಿ ಜೊತೆ 67 ರನ್ ಜೊತೆಯಾಟವನ್ನು ಕೊಡುಗೆಯಾಗಿ ನೀಡಿದ್ದರು. ಬ್ರೀಟ್ಜ್ಕೆ ಅವರ ಜೊತೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಟ್ರಿಸ್ಟನ್ ಸ್ಟಬ್ಸ್ ಕೂಡ ಆಸೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದರು. ಅವರು ಆಡಿದ್ದ 87 ಎಸೆತಗಳಲ್ಲಿ 74 ರನ್‌ಗಳನ್ನು ಕಲೆ ಹಾಕಿದ್ದರು.