ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs SA WTC Final: ಸ್ಟಾರ್ಕ್‌, ಸ್ಮಿತ್‌ ಬಲದಿಂದ ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಆಸೀಸ್‌!

WTC Final 1st Day Highlights: ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಜೂನ್‌ 11 ರಂದು ಆರಂಭವಾದ ಮೂರನೇ ಆವೃತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಮೊದಲನೇ ದಿನ ಆಸ್ಟ್ರೇಲಿಯಾ ತಂಡ ಪ್ರಾಬಲ್ಯ ಸಾಧಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಸ್ಟೀವನ್‌ ಸ್ಮಿತ್‌ ಅರ್ಧಶತಕವನ್ನು ಬಾರಿಸಿದರು.

ಲಂಡನ್‌: ಇಲ್ಲಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಜೂನ್‌ 11 ರಂದು ಬುಧವಾರ ಆರಂಭಗೊಂಡ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ (WTC Final) ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ (AUS vs SA) ತಂಡಗಳು ಕಾದಾಟ ನಡೆಸುತ್ತಿವೆ. ಕಗಿಸೊ ರಬಾಡ ಮಾರಕ ಬೌಲಿಂಗ್‌ ಹೊರತಾಗಿಯೂ ಸ್ಟೀವನ್‌ ಸ್ಮಿತ್‌ ಹಾಗೂ ಬೇ ವೆಬ್‌ಸ್ಟರ್‌ ಅವರ ಅರ್ಧಶತಕಗಳು ಮತ್ತು ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಪಂದ್ಯದ ಮೊದಲನೇ ದಿನ ಪ್ರಾಬಲ್ಯ ಸಾಧಿಸಿದೆ. ಪಂದ್ಯದ ಮೊದಲನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ (SA) ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಳೆದುಲಕೊಂಡು 43 ರನ್‌ಗಳನ್ನು ಗಳಿಸಿದೆ. ಆ ಮೂಲಕ 169 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಆಸ್ಟ್ರೇಲಿಯಾ ತಂಡ, ಕಗಿಸೊ ರಬಾಡ ಮತ್ತು ಮಾರ್ಕೊ ಯೆನ್ಸನ್‌ ಅವರ ಮಾರಕ ಬೌಲಿಂಗ್‌ ದಾಳಿಯ ಹೊರತಾಗಿಯೂ ಸ್ಟೀವನ್‌ ಸ್ಮಿತ್‌ (66 ರನ್‌) ಹಾಗೂ ಬೇ ವೆಬ್‌ಸ್ಟರ್‌ (72 ರನ್‌) ಅವರ ನಿರ್ಣಾಯಕ ಅರ್ಧಶತಕಗಳ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 56.4 ಓವರ್‌ಗಳಿಗೆ 212 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆಸ್ಟ್ರೇಲಿಯಾ ತಂಡದ ಪರ ಸ್ಮಿತ್‌ ಮತ್ತು ವೆಬ್‌ಸ್ಟರ್‌ ಬಿಟ್ಟರೆ ಇನ್ನುಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

WTC Final: ಲಾರ್ಡ್ಸ್‌ ಅಂಗಣದಲ್ಲಿ ಅರ್ಧಶತಕ ಸಿಡಿಸಿ ಗ್ಯಾರಿ ಸೋಬರ್ಸ್‌ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

ಇನಿಂಗ್ಸ್‌ ಆರಂಭಿಸಿದ ಉಸ್ಮಾನ್‌ ಖವಾಜ ಮತ್ತು ಮಾರ್ನಸ್‌ ಲಾಬುಶೇನ್‌ ಜೋಡಿ ತಂಡಕ್ಕೆ ಉತ್ತಮ ಆರಂಭ ತಂದುಕೊಡಲು ಸಾಧ್ಯವಾಗಲಿಲ್ಲ. ಕಗಿಸೊ ರಬಾಡ ಎಸೆತದಲ್ಲಿ ಖಜಾವ ಡಕ್‌ಔಟ್‌ ಆದರು. ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಕ್ಯಾಮೆರಾನ್‌ ಗ್ರೀನ್‌ ಕೂಡ ರಬಾಡಗೆ ಶರಣಾದರು. ಒಂದು ಹಂತದಲ್ಲಿ 56 ಎಸೆತಗಳಲ್ಲಿ 17 ರನ್‌ ಗಳಿಸಿ ಆಡುತ್ತಿದ್ದ ಮಾರ್ನಸ್‌ ಲಾಬುಶೇನ್‌ ಅವರನ್ನು ಮಾಋಕೊ ಯೆನ್ಸನ್‌ ಕಟ್ಟಿ ಹಾಕಿದರು. ನಂತರ ಅಪಾಯಕಾರಿ ಬ್ಯಾಟರ್‌ ಟ್ರಾವಿಸ್‌ ಹೆಡ್‌ (11) ಅವರನ್ನು ಕೂಡ ಯೆನ್ಸನ್‌ ಪೆವಿಲಿಯನ್‌ಗೆ ಕಳುಹಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ 67 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.



ಸ್ಮಿತ್‌-ವೆಬ್‌ಸ್ಟರ್‌ ಅರ್ಧಶತಕ

ಈ ವೇಳೆ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಸ್ಟೀವನ್‌ ಸ್ಮಿತ್‌, 112 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಕಲೆ ಹಾಕಿದರು ಹಾಗೂ ಬೇ ವೆಬ್‌ಸ್ಟರ್‌ ಜೊತೆ 79 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆದರೆ, ಏಡೆನ್‌ ಮಾರ್ಕ್ರಮ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ತಂಡದ ಜವಾಬ್ದಾರಿಯನ್ನು ತೆಗೆದುಕೊಂಡು ವೆಬ್‌ಸ್ಟರ್‌, 92 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 72 ರನ್‌ ಸಿಡಿಸಿದರು. ಮೂಲಕ ತಂಡದ ಮೊತ್ತವನ್ನು 210 ರ ಗಡಿ ದಾಟಿಸುವಲ್ಲಿ ನೆರವಾದರು. ದಕ್ಷಿಣ ಅಫ್ರಿಕಾ ಪರ ಕಗಿಸೊ ರಬಾಡ 5 ವಿಕೆಟ್‌ ಸಾಧನೆ ಮಾಡಿದರೆ, ಮಾರ್ಕೊ ಯೆನ್ಸನ್‌ 3 ವಿಕೆಟ್‌ ಕಿತ್ತರು.

AUS vs SA: ಡಬ್ಲ್ಯುಟಿಸಿ ಫೈನಲ್‌ ಆಡಿ ರಿಕಿ ಪಾಂಟಿಂಗ್‌ರ ದಾಖಲೆ ಸರಿಗಟ್ಟಿದ ಸ್ಟೀವನ್ ಸ್ಮಿತ್!

ಹರಿಣ ಪಡೆಗೆ ತಿರುಗೇಟು ಕೊಟ್ಟ ಸ್ಟಾರ್ಕ್‌

ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಪಡೆಯಲು ಮಾರಕ ವೇಗಿ ಮಿಚೆಲ್‌ ಸ್ಟಾರ್ಕ್‌ ಅವಕಾಶ ನೀಡಲಿಲ್ಲ. ಆರಂಭಿಕರಾದ ಏಡೆನ್‌ ಮಾರ್ಕ್ರಮ್‌ ಮತ್ತು ರಯಾನ್‌ ರಿಕೆಲ್ಟನ್‌ (16) ಅವರನ್ನು ಸ್ಟಾರ್ಕ್‌ ಔಟ್‌ ಮಾಡಿದರು. ನಂತರ ವಿಯಾನ್‌ ಮುಲ್ಡರ್‌ (6) ಅವರನ್ನು ನಾಯಕ ಪ್ಯಾಟ್‌ ಕಮಿನ್ಸ್‌ ಔಟ್‌ ಮಾಡಿದರೆ, ಜಾಶ್‌ ಹೇಝಲ್‌ವುಡ್‌, ಟ್ರಿಸ್ಟನ್‌ ಸ್ಟಬ್ಸ್‌ (2) ಅವರ ವಿಕೆಟ್‌ ಕಿತ್ತರು. ಮೊದಲನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ, 22 ಓವರ್‌ಗಳಿಗೆ 43 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ತೆಂಬಾ ಬವೂಮ ಹಾಗೂ ಡೇವಿಡ್‌ ಬೆಡಿಂಗ್‌ಹ್ಯಾಮ್‌ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.