ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐದನೇ ಟೆಸ್ಟ್‌ನಿಂದ ಜಸ್‌ಪ್ರೀತ್‌ ಬುಮ್ರಾ ಹೊರಗುಳಿದ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ಜಸ್‌ಪ್ರೀತ್‌ ಬುಮ್ರಾ ಇಂಗ್ಲೆಂಡ್‌ ಮತ್ತು ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್‌ ಸರಣಿಯ ನಿರ್ಣಾಯಕ ಐದನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಅಶ್ವಿನ್‌ ಒಳ್ಳೆಯ ನಿರ್ಧಾರ ಎಂದು ಕೊಂಡಾಡಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಅಲಭ್ಯತೆ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕೆನಿಂಗ್ಟನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿಯ (IND vs ENG) ಕೊನೆಯ ಪಂದ್ಯ ಕೆನಿಂಗ್ಟನ್‌ನ ಓವಲ್‌ ಮೈದಾನದಲ್ಲಿ ನಡೆಯುತ್ತಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಬಂದ ಭಾರತ ತಂಡ (India) ಆರಂಭಿಕ ವೈಫಲ್ಯದಿಂದ ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲ್‌ ಔಟ್‌ ಆಯಿತು. ಮೊದಲನೇ ದಿನದಾಟದಲ್ಲಿ ಅತಿಥೇಯ ತಂಡದ (England) ಬೌಲರ್‌ಗಳ ಆಕ್ರಮಣಕಾರಿ ಬೌಲಿಂಗ್‌ನಿಂದ ಭಾರತದ ಪ್ರಮುಖ ಆಟಗಾರರು ಬಹು ಬೇಗನೆ ಪೆವಿಲಿಯನ್‌ ಸೇರಿದರು. ಮುಖ್ಯವಾಗಿ ಗಸ್‌ ಅಟ್ಕಿನ್ಸನ್‌ ಅವರ ಅಮೋಘ ಸ್ಪೆಲ್‌ ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು. ನಂತರ ಬ್ಯಾಟ್‌ ಮಾಡಲು ಬಂದ ಇಂಗ್ಲೆಂಡ್‌ ತಂಡದ ಆರಂಭ ಉತ್ತಮವಾಗಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾಕ್‌ ಕ್ರಾವ್ಲಿ (64 ರನ್‌) ಮತ್ತು ಬೆನ್‌ ಡಕೆಟ್‌ (43 ರನ್‌) ಕೇವಲ 15 ಓವರ್‌ಗಳಲ್ಲೇ 100ರನ್‌ ಪೂರೈಸಿ ಬಿರುಸಿನ ಆರಂಭ ಒದಗಿಸಿದರು. ಇದಾದ ಬಳಿಕ ಭಾರತ ತಂಡದ ಬೌಲರ್‌ಗಳ ಅದ್ಭುತ ಸ್ಪೆಲ್‌ ನೆರವಿನಿಂದ (ಮೊಹಮ್ಮದ್‌ ಸಿರಾಜ್‌ 86ಕ್ಕೆ 4, ಪ್ರಸಿಧ್‌ ಕೃಷ್ಣ 62ಕ್ಕೆ 4, ಆಕಾಶ್‌ ದೀಪ್‌ 80ಕ್ಕೆ1) ಇಂಗ್ಲೆಂಡ್‌ ಬ್ಯಾಟಿಂಗ್‌ ಪಡೆ ತತ್ತರಿಸಿ ಹೋಯಿತು. ಆ ಮೂಲಕ ಇಂಗ್ಲೆಂಡ್‌ 51.2 ಓವರ್‌ಗಳಿಗೆ 247ರನ್‌ ಕಲೆಹಾಕಿ ಆಲೌಟ್‌ ಆಯಿತು. ಇದರಿಂದಾಗಿ ಎರಡನೇ ದಿನದಾಟದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ಟೀಮ್‌ ಇಂಡಿಯಾ 18 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 75 ರನ್‌ ಕಲೆಹಾಕಿ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ. ಆ ಮೂಲಕ 23 ರನ್‌ಗಳ ಹಿನ್ನಡೆಯನ್ನು ಚುಕ್ತಾಗೊಳಿಸಿ 52 ರನ್‌ಗಳ ಮುನ್ನಡೆ ಸಾಧಿಸಿದೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಮೊಹಮ್ಮದ್‌ ಸಿರಾಜ್‌!

ಇದರ ಮಧ್ಯೆ ನಿರ್ಣಾಯಕ ಪಂದ್ಯಕ್ಕೆ ತಂಡದಿಂದ ಹೊರಗುಳಿದಿರುವ ಜಸ್‌ಪ್ರೀತ್‌ ಬುಮ್ರಾ ಅವರ ಕುರಿತು ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಪ್ರತಿಕ್ರೆಯೆ ನೀಡಿದ್ದು, ಬುಮ್ರಾ ಅವರು ಸರಣಿಯ ಐದು ಟೆಸ್ಟ್‌ಗಳಲ್ಲಿ ಮೂರೂ ಪಂದ್ಯಗಳನ್ನಾದರೂ ಆಡಬೇಕಿತ್ತು. ಅದರಲ್ಲೂ ಐದನೇ ಪಂದ್ಯದ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ ಹೀಗಾಗಿ ತಂಡದಿಂದ ಹೊರಗುಳಿದಿರುವುದು ಆಶ್ಚರ್ಯದ ಸಂಗತಿ ಅಲ್ಲ. ದೀರ್ಘಾವಧಿಯ ನಂತರ ಅವರ ದೇಹದ ಕುರಿತು ಕಾಳಜಿ ವಹಿಸಿರುವ ಬಗ್ಗೆ ಅಶ್ವಿನ್‌ ಸಂತೋಷ ಪಟ್ಟಿದ್ದಾರೆ.

ಬುಮ್ರಾ ಅನುಪಸ್ಥಿತಿ ಬಗ್ಗೆ ಅಶ್ವಿನ್‌ ಹೇಳಿದ್ದೇನು?

ಆರ್‌ ಅಶ್ವಿನ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತಾನಾಡಿ "ನನಗೆ ಆಶ್ಚರ್ಯವಾಗಿದೆ ಏಕೆಂದರೆ ಇದು ಹಿಂದಿನ ಭಾರತೀಯ ತಂಡವಾಗಿದ್ದರೆ, ಬುಮ್ರಾ ಅವರನ್ನು ಅಂತಿಮ ಟೆಸ್ಟ್ ಆಡಲು ಮನವೊಲಿಸುತ್ತಿದ್ದರು. ಈಗಲೂ ಸಹ, ತಂಡದ ಆಡಳಿತ ಮಂಡಳಿ ಇದನ್ನು ಮಾಡಿರಬಹುದು, ಆದರೆ ಬುಮ್ರಾ ಅವರ ದೃಷ್ಟಿಕೋನದಿಂದ, ಇದು ಸರಿಯಾದ ನಿರ್ಧಾರ. ಅವರು ಕೇವಲ ಮೂರು ಟೆಸ್ಟ್‌ಗಳನ್ನು ಮಾತ್ರ ಆಡುವುದಾಗಿ ಈಗಾಗಲೇ ನಿರ್ಧರಿಸಿದ್ದರು," ಎಂದು ಅಶ್ವಿನ್ ತಿಳಿಸಿದ್ದಾರೆ.

IND vs ENG: ಸಿರಾಜ್‌-ಪ್ರಸಿಧ್‌ ಮಾರಕ ದಾಳಿಗೆ ಇಂಗ್ಲೆಂಡ್‌ 247ಕ್ಕೆ ಆಲ್‌ಔಟ್‌, ಭಾರತಕ್ಕೆ 52 ರನ್‌ ಮುನ್ನಡೆ!

"ಅವರ ಬೆನ್ನು ನೋವು ಸಾಮಾನ್ಯವಾದ ಸಮಸ್ಯೆಯಲ್ಲ. ಇದು ಅವರನ್ನು ಸುಮಾರು ಎರಡು ವರ್ಷಗಳಿಂದ ಆಟದಿಂದ ದೂರವಿಟ್ಟಿದೆ. ಅವರು ಭಾರತೀಯ ತಂಡಕ್ಕೆ ಅಮೂಲ್ಯವಾದ ಆಸ್ತಿ. ಆದ್ದರಿಂದ, ನಿರ್ಧಾರ ಸರಿಯಾಗಿದೆ ಮತ್ತು ನನಗೆ ಆಶ್ಚರ್ಯವಾಯಿತು. ಬುಮ್ರಾ ತಮ್ಮ ದೇಹಕ್ಕೆ ಆದ್ಯತೆ ನೀಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ದೀರ್ಘಾವಧಿಯಲ್ಲಿ ಅವರು ತುಂಬಾ ಉಪಯುಕ್ತರಾಗುತ್ತಾರೆ," ಎಂದು ಹೇಳಿದ್ದಾರೆ.

ಭಾರತದ ಮಾಜಿ ಉಪನಾಯಕ ಸೆಪ್ಟೆಂಬರ್ 9 ರಂದು ಆರಂಭವಾಗಲಿರುವ 2025 ರ ಏಷ್ಯಾಕಪ್‌ನಲ್ಲಿ ಮಾತ್ರ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಬುಮ್ರಾ ಟಿ20 ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಡದಿರಬಹುದು. ಪ್ರಸಕ್ತ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 247 ರನ್‌ಗಳಿಗೆ ಆಲೌಟ್ ಮಾಡಿತು. ಪ್ರವಾಸಿ ತಂಡ, ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಒಟ್ಟು 224 ರನ್‌ಗಳನ್ನು ಗಳಿಸಿತು. ಪಂದ್ಯದ ಎರಡು ಇನಿಂಗ್ಸ್‌ಗಳ ನಂತರ ಇಂಗ್ಲೆಂಡ್ 23 ರನ್‌ಗಳ ಮುನ್ನಡೆಯನ್ನು ಹೊಂದಿದೆ. ಬೆನ್ ಸ್ಟೋಕ್ಸ್ ನೇತೃತ್ವದ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

ಬರಹ: ಕೆ ಎನ್ ರಂಗು, ಚಿತ್ರದುರ್ಗ