ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ವಿರುದ್ದ ಯೂಥ್‌ ಟೆಸ್ಟ್‌ನಲ್ಲಿ ವಿಶೇಷ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಯೂಥ್‌ ಟೆಸ್ಟ್‌ ಪಂದ್ಯವೊಂದರಲ್ಲಿ ಒಂದು ವಿಕೆಟ್‌ ಹಾಗೂ ಅರ್ಧಶತಕವನ್ನು ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಭಾರತ ಕಿರಿಯರ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಬರೆದಿದ್ದಾರೆ. ಅವರು ಇಂಗ್ಲೆಂಡ್‌ ತಂಡದ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಹಾಗೂ ಪಂದ್ಯದಲ್ಲಿ ಎರಡು ವಿಕೆಟ್‌ ಕಿತ್ತಿದ್ದಾರೆ.

ಇಂಗ್ಲೆಂಡ್‌ ವಿರುದ್ದ ಯೂಥ್‌ ಟೆಸ್ಟ್‌ನಲ್ಲಿ ವಿಶೇಷ ದಾಖಲೆ ಬರೆದ ವೈಭವ್‌!

ಯೂಥ್‌ ಟೆಸ್ಟ್‌ನಲ್ಲಿ ದಾಖಲೆ ಬರೆದ ವೈಭವ್‌ ಸೂರ್ಯವಂಶಿ.

Profile Ramesh Kote Jul 19, 2025 5:40 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಯೂಥ್‌ ಟೆಸ್ಟ್‌ ಪಂದ್ಯದಲ್ಲಿ(IND vs ENG) ಭಾರತದ ಕಿರಿಯರ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Suryavanshi) ಅವರು ಅರ್ಧಶತಕ ಹಾಗೂ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಯೂಥ್‌ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಹಾಗೂ ವಿಕೆಟ್‌ ಕಬಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು 14ನೇ ವಯಸ್ಸಿನ ಆಟಗಾರ ಬರೆದಿದ್ದಾರೆ. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಜುಲೈ 20 ರಂದು ಎರಡನೇ ಯೂಥ್‌ ಟೆಸ್ಟ್‌ ಆರಂಭವಾಗಲಿದೆ.

ಇಂಗ್ಲೆಂಡ್‌ ವಿರುದ್ಧ ಮೊದಲನೇ ಯೂಥ್‌ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ವೈಭವ್‌ ಸೂರ್ಯವಂಶಿ ಅವರು 14 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ ಸೂರ್ಯವಂಶಿ 44 ಎಸೆತಗಳಲ್ಲಿ 56 ರನ್‌ಗಳನ್ನು ಕಲೆ ಹಾಕಿದ್ದಾರೆ. ನಂತರ ಬೌಲಿಂಗ್‌ನಲ್ಲಿಯೂ ಗಮನ ಸೆಳೆದಿದ್ದರು. ಅವರು ತಮ್ಮ ಸ್ಪಿನ್‌ ಮೋಡಿಯ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಿತ್ತಿದ್ದರು. ಆ ಮೂಲಕ ಯೂಥ್‌ ಟೆಸ್ಟ್‌ ಇತಿಹಾಸದಲ್ಲಿ ಅರ್ಧಶತಕ ಹಾಗೂ ವಿಕೆಟ್‌ ಪಡೆದ ಮೊದಲ ಆಟಗಾರ ಎಂಬ ದಾಖಲೆಯನ್ನು ಅವರು ತಮ್ಮ 14ನೇ ವಯಸ್ಸಿನಲ್ಲಿ ಬರೆದಿದ್ದಾರೆ.

IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

ಯೂಥ್‌ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಹಾಗೂ ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾದೇಶ ತಂಡದ ಮೆಹಡಿ ಹಸನ್‌ ಮಿರಾಝ್‌ ಅವರನ್ನು ವೈಭವ್‌ ಸೂರ್ಯವಂಶಿ ಹಿಂದಿಕ್ಕಿದ್ದಾರೆ. ಬಾಂಗ್ಲಾ ಆಟಗಾರ 2013ರಲ್ಲಿ ಮೀರ್‌ಪುರ್‌ನಲ್ಲಿ ಶ್ರೀಲಂಕಾ ವಿರುದ್ದ 15 ವರ್ಷ 167 ದಿನಗಳ ವಯಸ್ಸಿನಲ್ಲಿ ಈ ದಾಖಲೆ ಬರೆದಿದ್ದರು. ಆದರೆ, ಸೂರ್ಯವಂಶಿ ತಮ್ಮ 14ನೇ ವಯಸ್ಸಿನಲ್ಲಿಯೇ ಈ ದಾಖಲೆಯನ್ನು ಬರೆದಿದ್ದಾರೆ.

ಭಾರತ ತಂಡದ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ ಕೂಡ ಈ ದಾಖಲೆಯನ್ನು ಬರೆದಿದ್ದಾರೆ. ಅವರು 2002ರಲ್ಲಿ ಕೊಲಂಬಿದಲ್ಲಿ ಇಂಗ್ಲೆಂಡ್‌ ವಿರುದ್ದ ತಮ್ಮ 15 ವರ್ಷ ಹಾಗೂ 242 ದಿನಗಳಲ್ಲಿ ಅಂತಾರಾಷ್ಟ್ರೀಯ ಅಂಡರ್‌ 19 ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಹಾಗೂ ವಿಕೆಟ್‌ ಕಬಳಿಸಿದ್ದರು. ಇದೀಗ ಇವರೆಲ್ಲರನ್ನೂ ವೈಭವ್‌ ಸೂರ್ಯವಂಶಿ ಹಿಂದಿಕ್ಕಿದ್ದಾರೆ.

ENG vs IND: ಟೆಸ್ಟ್‌ ಕ್ರಿಕೆಟ್‌ನ ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿ ರವೀಂದ್ರ ಜಡೇಜಾ!

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 540 ರನ್‌ಗಳನ್ನು ಕಲೆ ಹಾಕಿತ್ತು. ಭಾರತದ ಪರ ಆಯುಷ್‌ ಮ್ಹಾತ್ರೆ ಶತಕ ಸಿಡಿಸಿದರೆ, ವಿಹಾನ್‌ ಮೆಲ್ಹೋತ್ರಾ ಹಾಗೂ ವಿಕೆಟ್‌ ಕೀಪರ್‌ ಅಭಿಜ್ಞಾನ್‌ ಕುಂಡು, ರಾಹುಲ್‌ ಕುಮಾರ್‌ ಹಾಗೂ ಆರ್‌ ಅಂಬರೀಶ್‌ ತಲಾ ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲೆಕ್ಸ್‌ ಗ್ರೀನ್‌ ಮತ್ತು ರಾಲ್ಪೀ ಅಲ್ಬರ್ಟ್‌ ಅವರು ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬಳಿಕ ಪ್ರಥಮ ಇನಿಂಗ್ಸ್‌ ಮಾಡಿದ ಇಂಗ್ಲೆಂಡ್‌ ತಂಡ 439 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ರಾಕಿ ಫ್ಲಿಂಟಾಫ್‌ 93 ರನ್‌ ಗಳಿಸಿದರು. ಭಾರತದ ಪರ ಹೆನಿಲ್‌ ಪಟೇಲ್‌ ಮೂರು ವಿಕೆಟ್‌ ಕಿತ್ತರು.

ಬಳಿಕ ದ್ವಿತೀಯ ಇನಿಂಗ್ಸ್‌ ಆಡಿದ ಭಾರತ 248 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಭಾರತದ ಪರ ಮೆಲ್ಹೋತ್ರಾ 63 ರನ್‌ಗಳನ್ನು ಕಲೆ ಹಾಕಿದರೆ, ವೈಭವ್‌ ಸೂರ್ಯವಂಶಿ ಅರ್ಧಶತಕವನ್ನು ಬಾರಿಸಿದ್ದರು. ನಂತರ ಇಂಗ್ಲೆಂಡ್‌ ತಂಡ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 270 ರನ್‌ಗಳನ್ನು ಗಳಿಸಿತು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.