ಲಂಡನ್: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಮತ್ತು ಇತರ ತಂಡದ ಸದಸ್ಯರು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿನ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಅದ್ಭುತ ಇನಿಂಗ್ಸ್ ಅನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಲಾರ್ಡ್ಸ್ ಟೆಸ್ಟ್‌ನ (IND vs ENG) ಕೊನೆಯ ದಿನದ ಜಡೇಜಾ 181 ಎಸೆತಗಳನ್ನು ಎದುರಿಸಿ ಅಜೇಯ 61 ರನ್ ಗಳಿಸಿದರು. ಅಗ್ರ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ ರವೀಂದ್ರ ಜಡೇಜಾ ಕೊನೆಯವರೆಗೂ ಕಠಿಣ ಹೋರಾಟ ನಡೆಸಿ ಭಾರತ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ, ಅವರಿಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡದ ಕಾರಣ ಅಂತಿಮವಾಗಿ ಭಾರತ ತಂಡ ಸೋಲು ಅನುಭವಿಸಬೇಕಾಯಿತು.
ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ ಭಾರತ ತಂಡ ಟೆಸ್ಟ್ ಸರಣಿಯಲ್ಲಿ 2-1 ಹಿನ್ನಡೆಯನ್ನು ಅನುಭವಿಸಿದೆ. ಶುಕ್ರವಾರ ಬಿಸಿಸಿಐ ಟಿವಿಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಕೋಚ್ ಗೌತಮ್ ಗಂಭೀರ್, "ಇದು ಅದ್ಭುತ ಪಂದ್ಯವಾಗಿತ್ತು. ಜಡ್ಡು ಅವರ ಹೋರಾಟವು ಸಂಪೂರ್ಣವಾಗಿ ಅದ್ಭುತವಾಗಿತ್ತು. 190 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಭಾರತ ತಂಡವನ್ನು ಗೆಲುವಿನ ಓಟದಲ್ಲಿ ಇರಿಸುವಲ್ಲಿ ಜಡೇಜಾ ಅಪಾರ ತಾಳ್ಮೆಯನ್ನು ತೋರಿಸಿದ್ದರು," ಎಂದು ಗುಣಗಾನ ಮಾಡಿದ್ದಾರೆ.
IND vs ENG 4th Test: ರಿಷಭ್ ಪಂತ್ ಬಗ್ಗೆ ಟೀಮ್ ಇಂಡಿಯಾಗೆ ಎಚ್ಚರಿಕೆ ಕೊಟ್ಟ ರವಿ ಶಾಸ್ತ್ರಿ!
ಮೊಹಮ್ಮದ್ ಸಿರಾಜ್ ಏನು ಹೇಳಿದರು?
ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ರವೀಂದ್ರ ಜಡೇಜಾರನ್ನು ಶ್ಲಾಘಿಸಿದ್ದಾರೆ. "ತಂಡದ ಆಟಗಾರನಾಗಿ ಜಡ್ಡು ಭಾಯ್ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅಸಾಧಾರಣ ಆಟಗಾರರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿನ ಸುಧಾರಣೆಯೆಂದರೆ ಅವರು ಪ್ರತಿಯೊಂದು ಪ್ರಮುಖ ಸನ್ನಿವೇಶದಲ್ಲೂ ತಂಡಕ್ಕಾಗಿ ರನ್ ಗಳಿಸುತ್ತಾರೆ. ತಂಡಕ್ಕೆ ಅಂತಹ ಆಟಗಾರನನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ನಮ್ಮ ತಂಡದಲ್ಲಿ ಅಂತಹ ಆಟಗಾರ ಇರುವುದು ನಮ್ಮ ಅದೃಷ್ಟ," ಎಂದು ಶ್ಲಾಘಿಸಿದ್ದಾರೆ.
ರವೀಂದ್ರ ಜಡೇಜಾ ಅವರಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಬೆಂಬಲ ಸಿಕ್ಕಿರಲಿಲ್ಲ, ಆದರೆ, ಕೆಳ ಕ್ರಮಾಂಕದ ಆಟಗಾರರಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಂದ ಅಪಾರ ಬೆಂಬಲ ಸಿಕ್ಕಿತ್ತು. ಈ ಇಬ್ಬರೊಂದಿಗೆ ಅವರು ಕ್ರಮವಾಗಿ 35 ಮತ್ತು 23 ರನ್‌ಗಳ ರಕ್ಷಣಾತ್ಮಕ ಜೊತೆಯಾಟವನ್ನು ಆಡಿದ್ದಾರೆ. ಈ ಬಗ್ಗೆ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡಶಾಟ್ ಅವರು ಕೂಡ ರವೀಂದ್ರ ಜಡೇಜಾರನ್ನು ಹೊಗಳಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಆಘಾತ!
"ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು (ರವೀಂದ್ರ ಜಡೇಜಾ) ತೋರಿಸಿರುವ ಸ್ಥಿರತೆ ಮತ್ತು ತಾಳ್ಮೆ ಶ್ಲಾಘನೀಯ. ನಾನು ಅವರು ಹಲವು ವರ್ಷಗಳಿಂದ ಆಡುವುದನ್ನು ನೋಡಿದ್ದೇನೆ ಮತ್ತು ಈಗ ಅವರು ತಮ್ಮ ಆಟವನ್ನು ಸುಧಾರಿಸಿಕೊಂಡಿರುವ ರೀತಿ, ಅವರ ರಕ್ಷಣಾ ವ್ಯವಸ್ಥೆ ತುಂಬಾ ಬಲಿಷ್ಠವಾಗಿದೆ, ಅವರು ಒಬ್ಬ ಉತ್ತಮ ಬ್ಯಾಟ್ಸ್‌ಮನ್ ಎಂದು ತೋರುತ್ತದೆ," ಎಂದು ಸಹಾಯಕ ಕೋಚ್ ಗುಣಗಾನ ಮಾಡಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಜ್ಜು
ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮತ್ತೆ ಅಬ್ಬರಿಸಲು ಪ್ರಯತ್ನಿಸಲಿದೆ. ನಂತರ ಜುಲೈ 31 ರಿಂದ ಆಗಸ್ಟ್ 4 ರವರೆಗೆ ಲಂಡನ್‌ನ ಓವಲ್‌ನಲ್ಲಿ ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ನಡೆಯಲಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಪಡೆದರೆ ಮಾತ್ರ ಟೆಸ್ಟ್ ಸರಣಿಯನ್ನು ಗೆಲ್ಲಬಹುದು, ಇಲ್ಲವಾದಲ್ಲಿ ಟೀಮ್ ಇಂಡಿಯಾಗೆ ದೀರ್ಘಾವಧಿ ಕನಸು ಭಗ್ನವಾಗಲಿದೆ.