ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಒಂದು ಕೈಯಲ್ಲಿ ಬ್ಯಾಟಿಂಗ್‌ಗೆ ಬಂದು ಅಭಿಮಾನಿಗಳ ಹೃದಯ ಗೆದ್ದ ಕ್ರಿಸ್‌ ವೋಕ್ಸ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ ಕೇವಲ 6 ರನ್‌ ರೋಚಕ ಗೆಲುವು ಸಾಧಿಸಿತು. ಆದರೂ ಕ್ರಿಸ್‌ ವೋಕ್ಸ್‌ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಒಂದೇ ಕೈಯಲ್ಲಿ ಕ್ರೀಸ್‌ಗೆ ಇಳಿದ ಕ್ರಿಸ್‌ ವೋಕ್ಸ್‌ಗೆ ಫ್ಯಾನ್ಸ್‌ ಮೆಚ್ಚುಗೆ

ಗಾಯದ ಹೊರತಾಗಿಯೂ ಕ್ರಿಸ್‌ಗೆ ಬಂದ ಕ್ರಿಸ್‌ ವೋಕ್ಸ್‌ಗೆ ಫ್ಯಾನ್ಸ್‌ ಮೆಚ್ಚುಗೆ.

Profile Ramesh Kote Aug 4, 2025 6:08 PM

ಲಂಡನ್‌: ತೀವ್ರ ರೋಚಕತೆಯಿಂದ ಕೂಡಿದ್ದ ಐದನೇ ಹಾಗೂ ಟೆಸ್ಟ್‌ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ ಕೇವಲ ಆರು ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿ 2-2 ಅಂತರದಲ್ಲಿ ಡ್ರಾ ನಲ್ಲಿ ಅಂತ್ಯ ಕಂಡಿತು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ ಇಂಗ್ಲೆಂಡ್‌ (England) ತಂಡದ ವೇಗದ ಬೌಲರ್‌ ಕ್ರಿಸ್‌ ವೋಕ್ಸ್‌ (Chris Woaks) ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಗಾಯದ ಹೊರತಾಗಿಯೂ ಒಂದೇ ಕೈನಲ್ಲಿ ಬ್ಯಾಟ್‌ ಮಾಡಲು ಕ್ರೀಸ್‌ಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳು ಇಂಗ್ಲೆಂಡ್‌ ವೇಗಿಗೆ ವಿಶೇಷ ಗೌರವವನ್ನು ಸಲ್ಲಿಸಿದರು.

ಪಂದ್ಯದ ಕೊನೆಯ ದಿನವಾದ ಸೋಮವಾರ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು ಕೇವಲ 35 ರನ್‌ಗಳ ಅಗತ್ಯವಿತ್ತು ಹಾಗೂ ಭಾರತ ತಂಡಕ್ಕೆ ಗೆಲ್ಲಲು ನಾಲ್ಕು ವಿಕೆಟ್‌ ಪಡೆಯಬೇಕಾದ ಅಗತ್ಯವಿತ್ತು. ಅದರಂತೆ ಇಂಗ್ಲೆಂಡ್‌ ತಂಡದ ಪರ ಜೇಮಿ ಸ್ಮಿತ್‌ ಹಾಗೂ ಜೇಮಿ ಓವರ್ಟನ್‌ ಇದ್ದರು. ಹಾಗಾಗಿ ಇಂಗ್ಲೆಂಡ್‌ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ, ಮೊಹಮ್ಮದ್‌ ಸಿರಾಜ್‌ ಹಾಗೂ ಪ್ರಸಿಧ್‌ ಕೃಷ್ಣ ಮೊದಲನೇ ಸ್ಪೆಲ್‌ನಲ್ಲಿ ಮಾರಕ ದಾಳಿ ನಡೆಸಿ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.

IND vs ENG 5th Test: ಓವಲ್‌ ಟೆಸ್ಟ್‌ ಗೆದ್ದ ಭಾರತ; ಸರಣಿ ಡ್ರಾದಲ್ಲಿ ಅಂತ್ಯ

ಮೊದಲಿಗೆ 78ನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಹ್‌, ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜೇಮಿ ಸ್ಮಿತ್‌ ಅವರನ್ನು ಔಟ್‌ ಮಾಡಿದರು. ನಂತರ 80ನೇ ಓವರ್‌ನಲ್ಲಿ ಜೇಮಿ ಓವರ್ಟನ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಜಾಶ್‌ ಟಾಂಗ್‌ ಅವರನ್ನು ಕನ್ನಡಿಗ ಪ್ರಸಿಧ್‌ ಕೃಷ್ಣ ಔಟ್‌ ಮಾಡಿದರು. ಇನ್ನು 11ನೇ ಬ್ಯಾಟ್ಸ್‌ಮನ್‌ ಆಗಿ ಗಾಯಾಳು ಕ್ರಿಸ್‌ ವೋಕ್ಸ್‌ ಕ್ರೀಸ್‌ಗೆ ಬಂದರು. ಅವರು ಒಂದು ಕೈಯನ್ನು ಜೆರ್ಸಿ ಒಳಗಡೆ ನೇತು ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಒಂದೇ ಕೈನಲ್ಲಿ ಬ್ಯಾಟ್‌ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು.



ಕ್ರಿಸ್‌ ವೋಕ್ಸ್‌ ಅವರು ಒಂದೇ ಕೈನಲ್ಲಿ ಬ್ಯಾಟ್‌ ಹಿಡಿದು ಕ್ರೀಸ್‌ಗೆ ಬರುತ್ತಿದ್ದಂತೆ ಅಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಗೌರವ ಸಲ್ಲಿಸಿದರು. ಕ್ರಿಸ್‌ ವೋಕ್ಸ್‌ ಕ್ರೀಸ್‌ಗೆ ಆಗಮಿಸಿದ ಬಳಿಕ ಮತ್ತೊಂದು ತುದಿಯಲ್ಲಿದ್ದ ಗಸ್‌ ಅಟ್ಕಿನ್ಸನ್‌ ಮೇಲೆ ಒತ್ತಡ ಹೆಚ್ಚಾಗಿತ್ತು. ಏಕೆಂದರೆ, ಕೊನೆಯಲ್ಲಿ ಇಂಗ್ಲೆಂಡ್‌ ತಂಡಕ್ಕೆ 17 ರನ್‌ ಅಗತ್ಯವಿತ್ತು. ಆದರೆ, ಗಸ್‌ ಅಟ್ಕಿನ್ಸನ್‌ ಅವರು ಅವರು ವೋಕ್ಸ್‌ಗೆ ಬ್ಯಾಟ್‌ ಮಾಡಲು ಅವಕಾಶ ನೀಡದೆ, ತಾವೇ ಪಂದ್ಯವನ್ನು ಮುಗಿಸಲು ಪ್ರಯತ್ನಿಸಿದರು. ಅದರಂತೆ ಸಿಕ್ಸರ್‌ ಕೂಡ ಬಾರಿಸಿದ್ದರು. ಆದರೆ, ಅಂತಿಮವಾಗಿ ಮೊಹಮ್ಮದ್‌ ಸಿರಾಜ್‌ ಯಾರ್ಕರ್‌ ಹಾಕಿ ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಮೂಲಕ ಭಾರತ ತಂಡ ಕೇವಲ 6 ರನ್‌ ರೋಚಕ ಗೆಲುವು ಸಾಧಿಸಿತು.