ಅಬುದಾಬಿ: ಕ್ರಿಕೆಟ್ ಶಿಶು ಒಮಾನ್ (Oman) ತಂಡದ ದಿಟ್ಟ ಹೋರಾಟದ ಹೊರತಾಗಿಯೂ ಭಾರತ (India) ತಂಡ, 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ 12ನೇ ಪಂದ್ಯದಲ್ಲಿ 21 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಲೀಗ್‌ನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಆತ್ಮ ವಿಶ್ವಾಸದೊಂದಿಗೆ ಸೂಪರ್-4ಕ್ಕೆ ಪ್ರವೇಶ ಮಾಡಿದೆ. ಒಮಾನ್ ತಂಡ ಲೀಗ್ ಹಂತದಲ್ಲಿ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಭಾರತದ ಎದುರು ತೋರಿದ ಅದ್ಭುತ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ, ನಿರ್ಣಾಯಕ ಅರ್ಧಶತಕ ಸಿಡಿಸಿ ಭಾರತದ ಗೆಲುವಿಗೆ ನೆರವು ನೀಡಿದ್ದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ಇಲ್ಲಿನ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 189 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಒಮಾನ್ ತಂಡ, ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗಬಹುದೆಂದು ಭಾವಿಸಲಾಗಿತ್ತು. ಆದರೆ, ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ದಿಟ್ಟ ಹೋರಾಟದ ನೆರವಿನಿಂದ ಗೆಲುವಿನ ಸನಿಹ ಬಂದು ಅಂತಿಮವಾಗಿ ಸೋಲು ಒಪ್ಪಿಕೊಂಡಿತು. 20 ಓವರ್‌ಗಳನ್ನು ಪೂರ್ಣಗೊಳಿಸಿದ ಒಮಾನ್ 4 ವಿಕೆಟ್ ನಷ್ಟಕ್ಕೆ 167 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 21 ರನ್‌ಗಳ ಅಂತರದಲ್ಲಿ ಸೋಲಿನ ನಿರಾಶೆ ಅನುಭವಿಸಿದರೂ ಗೌರವದೊಂದಿಗೆ ಟೂರ್ನಿಯ ಅಭಿಯಾನವನ್ನು ಮುಗಿಸಿತು.
Asia Cup Super 4s Schedule: ಸೂಪರ್-4 ಪಂದ್ಯಗಳ ವೇಳಾಪಟ್ಟಿ ಪ್ರಕಟ
ಕಲೀಮ್-ಮಿರ್ಜಾ ಅರ್ಧಶತಕ ವ್ಯರ್ಥ
ಭಾರತ ತಂಡದ ನೀಡಿದ್ದ ಕಠಿಣ ಗುರಿಯನ್ನು ಹಿಂಬಾಲಿಸಿದ ಒಮಾನ್ ತಂಡದ ಪರ ನಾಯಕ ಜತೀಂದರ್ ಸಿಂಗ್, ಆಮಿರ್ ಕಲೀಮ್ ಹಾಗೂ ಹಮದ್ ಮಿರ್ಝಾ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ನಾಯಕ ಜತೀಂದರ್ 33 ಎಸೆತಗಳಲ್ಲಿ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಜೊತೆಯಾದ ಆಮಿರ್ ಕಲೀಮ್ ಮತ್ತು ಹಮದ್ ಮಿರ್ಜಾ ದಿಟ್ಟ ಹೋರಾಟ ನಡೆಸಿ ಎರಡನೇ ವಿಕೆಟ್‌ಗೆ 93 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡವನ್ನು ಗೆಲುವಿನ ಹಾದಿಯಲ್ಲಿ ಇರಿಸಿದ್ದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಆಮಿರ್ ಕಲೀಮ್ ಆಡಿದ 46 ಎಸೆತಗಳಲ್ಲಿ 64 ರನ್ ಗಳಿಸಿದರೆ, ಹಮದ್ ಮಿರ್ಜಾ 33 ಎಸೆತಗಳಲ್ಲಿ 51 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಒಮಾನ್ ತಂಡಕ್ಕೆ ಗೆಲುವು ತಂದುಕೊಡುವ ಭರವಸೆಯನ್ನು ಮೂಡಿಸಿದ್ದರು. ಆದರೆ, ಹರ್ಷಿತ್ ರಾಣಾ ಹಾಗೂ ಹಾರ್ದಿಕ್ ಪಾಂಡ್ಯ ನಿರ್ಣಾಯಕ ಸಮಯದಲ್ಲಿ ಕ್ರಮವಾಗಿ ಈ ಇಬ್ಬರನ್ನು ಔಟ್ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಒಮಾನ್ ಸೋತರೂ ಕಲೀಮ್ ಮತ್ತು ಹಮದ್ ಮಿರ್ಜಾ ಬ್ಯಾಟಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
188 ರನ್‌ಗಳನ್ನು ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಿತ್ತು. ಸಂಜು ಸ್ಯಾಮ್ಸನ್ (56 ರನ್) ಹಾಗೂ ಅಭಿಷೇಕ್ ಶರ್ಮಾ (38 ರನ್) ಅವರ ಅತ್ಯುತ್ತಮ ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 188 ರನ್‌ಗಳನ್ನು ಗಳಿಸಿತ್ತು. ಇದರೊಂದಿಗೆ ಕ್ರಿಕೆಟ್ ಶಿಶು ಒಮಾನ್‌ಗೆ 189 ರನ್‌ಗಳ ಸವಾಲುದಾಯಕ ಗುರಿಯನ್ನು ನೀಡಿತ್ತು.
ಸಂಜು-ಅಭಿಷೇಕ್ ಅರ್ಧಶತಕದ ಜೊತೆಯಾಟ
ಭಾರತ ತಂಡದ ಇನಿಂಗ್ಸ್‌ನಲ್ಲಿ ಗಮನ ಸೆಳೆದಿದ್ದು ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್. ಉಪ ನಾಯಕ ಶುಭಮನ್ ಗಿಲ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಸಂಜು ಸ್ಯಾಮ್ಸನ್, ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಜೊತೆ 66 ರನ್‌ಗಳ ಜೊತೆಯಾಟವನ್ನು ಆಡಿದರು. ಅಭಿಷೇಕ್ ಶರ್ಮಾ ಆರಂಭದಲ್ಲಿಯೇ ಅಬ್ಬರಿಸಿದರು. ಅವರು ಆಡಿದ ಕೇವಲ 15 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 38 ರನ್ ಗಳಿಸಿದರು, ಆದರೆ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದರು.
ಸಂಜು ಸ್ಯಾಮ್ಸನ್ ಅರ್ಧಶತಕ
ಮೂರನೇ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ಸಂಜು ಸ್ಯಾಮ್ಸನ್ ಸದುಪಯೋಗಪಡಿಸಿಕೊಂಡರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಸಂಜು, ಒಮಾನ್ ಬೌಲರ್‌ಗಳನ್ನು ಕಾಡಿದರು. ಅವರು ಆಡಿದ 45 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 56 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ತಂಡದ ಮೊತ್ತ 170ರ ಗಡಿ ದಾಟಲು ನೆರವು ನೀಡಿದ್ದರು. ಇನ್ನು ಅಕ್ಷರ್ ಪಟೇಲ್ 26 ರನ್ ಹಾಗೂ ತಿಲಕ್ ವರ್ಮಾ 29 ರನ್‌ಗಳ ಕೊಡುಗೆಯನ್ನು ನೀಡಿದರು.
ಒಮಾನ್ ಪರ ಶಾ ಫೈಸಲ್, ಜಿತಿನ್ ರಮಾನಂದಿ ಹಾಗೂ ಆಮಿರ್ ಖಲೀಮ್ ತಲಾ ಎರಡೆರಡು ವಿಕೆಟ್ ಕಬಳಿಸಿದರು.