ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SL: ಪತುಮ್‌ ನಿಸಾಂಕ ಶತಕ ವ್ಯರ್ಥ, ಶ್ರೀಲಂಕಾ ವಿರುದ್ಧ ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ಭಾರತ!

ತನ್ನ ಕೊನೆಯ ಪಂದ್ಯದಲ್ಲಿ ಗೆಲುವಿನ ಸನಿಹ ಬಂದರೂ ಶ್ರೀಲಂಕಾ ತಂಡಕ್ಕೆ ಅದೃಷ್ಟ ಕೈ ಹಿಡಿಯಲಿಲ್ಲ. ನಿಗದಿತ 20 ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸಿಂಹಳೀಯರು, ಸೂಪರ್‌ ಓವರ್‌ನಲ್ಲಿ ವಿಫಲವಾಗಿ ಭಾರತದ ಎದುರು ಸೋಲು ಒಪ್ಪಿಕೊಂಡಿತು. ಸೂಪರ್‌-4ರಲ್ಲಿ ಒಂದೂ ಪಂದ್ಯ ಗೆಲ್ಲದೆ ಶ್ರೀಲಂಕಾ ಟೂರ್ನಿಯಲ್ಲಿ ನಿರಾಶೆಯೊಂದಿಗೆ ತನ್ನ ಅಭಿಯಾನವನ್ನು ಮುಗಿಸಿತು. ಭಾರತ ತಂಡ ಸೂಪರ್‌-4ರಲ್ಲಿ ಎಲ್ಲಾ ಪಂದ್ಯಗಳ ಗೆಲುವಿನ ಮೂಲಕ ಫೈನಲ್‌ಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಶ್ರೀಲಂಕಾ ಎದುರು ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ಭಾರತ.

ದುಬೈ: ಅರ್ಷದೀಪ್‌ ಸಿಂಗ್‌ (Arshdeep Singh) ಬುದ್ದಿವಂತಿಕೆಯ ಬೌಲಿಂಗ್‌ ನೆರವಿನಿಂದ ಭಾರತ ತಂಡ, ಸೂಪರ್‌ ಓವರ್‌ನಲ್ಲಿ ಶ್ರೀಲಂಕಾ ಎದುರು ರೋಚಕ ಗೆಲುವು ಪಡೆಯಿತು. ಆ ಮೂಲಕ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ, ಭಾನುವಾರ ಪಾಕಿಸ್ತಾನ ವಿರುದ್ಧದ ಫೈನಲ್‌ ಪಂದ್ಯಕ್ಕೆ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದಕ್ಕೂ ಮುನ್ನ ಭಾರತ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಪತುಮ್ ನಿಸಾಂಕ (Pathum Nissanka) ಭರ್ಜರಿ ಶತಕದ ಬಲದಿಂದ ಗೆಲುವಿನ ಸನಿಹ ಬಂದಿತ್ತು. ಆದರೆ, ಸಿಂಹಳೀಯರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ 202 ರನ್‌ಗಳನ್ನು ಕಲೆ ಹಾಕಿತು. ಉಭಯ ತಂಡಗಳ ಮೊತ್ತ ಸಮವಾಗಿದ್ದ ಕಾರಣ ಫಲಿತಾಂಶಕ್ಕಾಗಿ ಸೂಪರ್‌ ಓವರ್‌ ಮೊರೆ ಹೋಗಬೇಕಾಯಿತು.

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡಕ್ಕೆ ಅರ್ಷದೀಪ್‌ ಸಿಂಗ್‌ ಆಘಾತ ನೀಡಿದರು. ಮೊದಲ ಎಸೆತದಲ್ಲಿ ಕುಸಾಲ್‌ ಪೆರೇರಾ ಅವರನ್ನು ಔಟ್‌ ಮಾಡಿದ ಅರ್ಷದೀಪ್‌, 5 ಎಸೆತಗಳಲ್ಲಿ ಎದುರಾಳಿ ತಂಡಕ್ಕೆ ಕೇವಲ 2 ರನ್‌ ನೀಡಿ 2 ವಿಕೆಟ್‌ ಕಿತ್ತರು. ಬಳಿಕ 3 ರನ್‌ ಗುರಿಯನ್ನು ಹಿಂಬಾಲಿಸಿದ ಭಾರತ ಪರ ಕ್ರೀಸ್‌ಗೆ ಬಂದ ಸೂರ್ಯಕುಮಾರ್‌ ಯಾದವ್‌ ಮೊದಲನೇ ಎಸೆತದಲ್ಲಿ ಮೂರು ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ಏಷ್ಯಾ ಕಪ್‌ ಟೂರ್ನಿಯಲ್ಲಿ ಮೊಹಮ್ಮದ್‌ ರಿಝ್ವಾನ್‌, ವಿರಾಟ್‌ ಕೊಹ್ಲಿ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಪತುಮ್‌ ನಿಸಾಂಕ ಭರ್ಜರಿ ಶತಕ

ಶುಕ್ರವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ ತನ್ನ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡರೂ, ಪತುಮ್‌ ನಿಸಾಂಕ ಹಾಗೂ ಕುಸಾಲ್‌ ಪೆರೇರಾ ಜೋಡಿ 127 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ಕುಸಾಲ್‌ ಪೆರೇರಾ 32 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 58 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಪತುಮ್‌ ನಿಸಾಂಕ, ಭಾರತದ ಬೌಲರ್‌ಗಳಿಗೆ ಬೆವರಿಳಿಸಿದರು. ಇವರು ಆಡಿದ 58 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 107 ರನ್‌ಗಳನ್ನು ಬಾರಿಸಿ ಶ್ರೀಲಂಕಾ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ ಅವರು ಹರ್ಷಿತ್‌ ರಾಣಾಗೆ ವಿಕೆಟ್‌ ಒಪ್ಪಿಸಿದರು. ಕೊನೆಯವರೆಗೂ ಹೋರಾಟ ಮಾಡಿದ ದಸೂನ್‌ ಶಾನಕ 11 ಎಸೆತಗಳಲ್ಲಿ 22 ರನ್‌ ಗಳಿಸಿದರೂ ಶ್ರೀಲಂಕಾ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 20 ಓವರ್‌ಗಳಿಗೆ ಶ್ರೀಲಂಕಾ 5 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಗೆ ಸೀಮಿತವಾಯಿತು.



202 ರನ್‌ ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 202 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 203 ರನ್‌ಗಳ ಗುರಿಯನ್ನು ನೀಡಿತು. ಈ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಅಭಿಷೇಕ್‌ ಶರ್ಮಾ 61, ತಿಲಕ್‌ ವರ್ಮಾ 49* ಹಾಗೂ ಸಂಜು ಸ್ಯಾಮ್ಸನ್‌ 39 ರನ್‌ ಗಳಿಸಿದರು.



ಅಭಿಷೇಕ್‌ ಶರ್ಮಾ ಸ್ಪೋಟಕ ಅರ್ಧಶತಕ

ಭಾರತದ ಪರ ಶುಭಮನ್‌ ಗಿಲ್‌ ಹಾಗೂ ಅಭಿಷೇಕ್‌ ಶರ್ಮಾ ಇನಿಂಗ್ಸ್‌ ಆರಂಭಿಸಿದರು. ಗಿಲ್‌ ಕೇವಲ 4 ರನ್‌ಗಳಿಗೆ ಮಹೇಶ್‌ ತೀಕ್ಷಣ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಅಭಿಷೇಕ್‌ ಶರ್ಮಾ, ಲಂಕಾ ಬೌಲಿಂಗ್‌ ದಾಳಿಯನ್ನು ನೂಚ್ಚು ನೂರು ಮಾಡಿದರು. ಇವರು ಕೇವಲ 31 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 61 ರನ್‌ ಸಿಡಿಸಿದರು. ಈ ಟೂರ್ನಿಯಲ್ಲಿ ಮೂರನೇ ಅರ್ಧಶತಕದ ಜೊತೆಗೆ ಸೂರ್ಯಕುಮಾರ್‌ ಯಾದವ್‌ ಜೊತೆ ಎರಡನೇ ವಿಕೆಟ್‌ಗೆ 59 ರನ್‌ಗಳನ್ನು ಕಲೆ ಹಾಕಿದರು. ಔಟ್‌ ಆಫ್‌ ಫಾರ್ಮ್‌ ಸೂರ್ಯ 12 ರನ್‌ಗೆ ಸೀಮಿತರಾದರು. ಇದರ ಬೆನ್ನಲ್ಲೆ ಅಭಿಷೇಕ್‌ ಕೂಡ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಕೊಟ್ಟರು.



ನಂತರ ಜೊತೆಯಾದ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮಾ 66 ರನ್‌ ಜೊತೆಯಾಟವನ್ನು ಆಡಿದರು. 23 ಎಸೆತಗಳಲ್ಲಿ 39 ರನ್‌ ಗಳಿಸಿದ ಬಳಿಕ ಸಂಜು ಸ್ಯಾಮ್ಸನ್‌, ದಸೂನ್‌ ಶಾನಕಗೆ ವಿಕೆಟ್‌ ಒಪ್ಪಿಸಿದರು. ಆದರೆ, ಕೊನೆಯವರೆಗೂ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ 34 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 49 ರನ್‌ ಗಳಿಸಿದರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 15 ಎಸೆತಗಳಲ್ಲಿ ಅಜೇಯ 21 ರನ್‌ ಗಳಿಸಿದ್ದರು.



ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 202-5 (ಅಭಿಷೇಕ್‌ ಶರ್ಮಾ 61, ತಿಲಕ್‌ ವರ್ಮಾ 49*, ಸಂಜು ಸ್ಯಾಮ್ಸನ್‌ 39; (ಮಹೇಶ್‌ ತೀಕ್ಷಣ 36 ಕ್ಕೆ 1, ಚರಿತ ಅಸಲಂಕ 18 ಕ್ಕೆ 1)

ಶ್ರೀಲಂಕಾ: 20 ಓವರ್‌ಗಳಿಗೆ 202-5 (ಪತುಮ್‌ ನಿಸಾಂಕ 107, ಕುಸಾಲ್‌ ಪೆರೇರಾ 58, ದಸೂನ್‌ ಶಾನಕ 22* (ಹಾರ್ದಿಕ್‌ ಪಾಂಡ್ಯ 7 ಕ್ಕೆ 1)

ಪಂದ್ಯದ ಫಲಿತಾಂಶ: ಭಾರತಕ್ಕೆ ಸೂಪರ್‌ ಓವರ್‌ನಲ್ಲಿ ಜಯ

ಪಂದ್ಯ ಶ್ರೇಷ್ಠ ಪ್ರಶಸ್ತಿ: ಪತುಮ್‌ ನಿಸಾಂಕ