ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI 1st Test: ವಿಂಡೀಸ್‌ ಎದುರು ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಭಾರತ ತಂಡ!

IND vs WI 1st Test Day 1 Highlights: ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ಕೆಎಲ್‌ ರಾಹುಲ್‌ ಅರ್ಧಶತಕದ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್‌ ಆರಂಭಿಕ ದಿನ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ವಿಂಡೀಸ್‌ 162 ರನ್‌ಗಳಿಗೆ ಆಲ್‌ಔಟ್‌ ಆಗಿದ್ದು, ಭಾರತ ಮೊದಲನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 121 ರನ್‌ಗಳನ್ನು ಕಲೆ ಹಾಕಿದೆ.

ವೆಸ್ಟ್‌ ಇಂಡೀಸ್‌ ಎದುರು ಮೊದಲನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಭಾರತ ತಂಡ ಪ್ರಾಬಲ್ಯ.

ಅಹಮದಾಬಾದ್‌: ಮೊಹಮ್ಮದ್‌ ಸಿರಾಜ್‌ (Mohammed Siraj) ಮಾರಕ ಬೌಲಿಂಗ್‌ ದಾಳಿ ಹಾಗೂ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಅವರ ಅಜೇಯ ಅರ್ಧಶತಕದ ಬಲದಿಂದ ಭಾರತ ತಂಡ, ಮೊದಲನೇ ಟೆಸ್ಟ್‌ ಪಂದ್ಯದ (IND vs WI) ಆರಂಭಿಕ ದಿನ ಎದುರಾಳಿ ವೆಸ್ಟ್‌ ಇಂಡೀಸ್‌ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್‌ ಇಂಡೀಸ್‌ ತಂಡ 44.1 ಓವರ್‌ಗಳಿಗೆ 162 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಟೀಮ್‌ ಇಂಡಿಯಾ ಮೊದಲನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 121 ರನ್‌ಗಳನ್ನು ಕಲೆ ಹಾಕಿದೆ ಹಾಗೂ 41 ರನ್‌ಗಳ ಹಿನ್ನಡೆಯಲ್ಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್‌ ಇಂಡೀಸ್‌ ತಂಡದ ನಾಯಕ ರಾಸ್ಟನ್‌ ಚೇಸ್‌ ಅವರ ನಿರ್ಧಾರವನ್ನು ಭಾರತ ತಂಡದ ಬೌಲರ್‌ಗಳು ಉಲ್ಟಾ ಮಾಡಿದರು. ಅದರಲ್ಲಿಯೂ ವಿಶೇಷವಾಗಿ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನಡೆಸಿ ವಿಂಡೀಸ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡಿದ್ದರು. ತ್ಯಾಗಿನಾರಯಣ್‌ ಚಂದ್ರಪಾಲ್‌, ಬ್ರೆಂಡನ್‌ ಕಿಂಗ್‌ ಹಾಗೂ ಅಲಿಕ್‌ ಅಥನಾಝೆ ಅವರನ್ನು ಭೋಜನ ವಿರಾಮಕ್ಕೂ ಮುನ್ನ ಔಟ್‌ ಮಾಡಿದ್ದರು. ಇದರ ಜೊತೆಗೆ ಜಸ್‌ಪ್ರೀತ್‌ ಬುಮ್ರಾ ಕೂಡ ಜಾನ್‌ ಕ್ಯಾಂಪ್‌ಬೆಲ್‌ ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ವಿಂಡೀಸ್‌ 12ನೇ ಓವರ್‌ನಲ್ಲಿ 42 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತ್ತು.

IND vs WI: 27 ವಿಕೆಟ್‌ ಪಡೆಯುವ ಮೂಲಕ ಮಿಚೆಲ್‌ ಸ್ಟಾರ್ಕ್‌ ದಾಖಲೆ ಮುರಿದ ಮೊಹಮ್ಮದ್‌ ಸಿರಾಜ್‌!

ಬಳಿಕ ಐದನೇ ವಿಕೆಟ್‌ಗೆ ಜೊತೆಯಾದ ನಾಯಕ ರಾಸ್ಟನ್‌ ಚೇಸ್‌ ಹಾಗೂ ಶೇಯ್‌ ಹೋಪ್‌ ಜೋಡಿ, ಭಾರತದ ಬೌಲಿಂಗ್‌ ದಾಳಿಯನ್ನು ಕೆಲಕಾಲ ಸಮರ್ಥವಾಗಿ ಎದುರಿಸಿ 48 ರನ್‌ಗಳ ಅಲ್ಪ ಮೊತ್ತದ ಜೊತೆಯಾಟವನ್ನು ಆಡಿ, ತಂಡಕ್ಕೆ ಭರವಸೆಯನ್ನು ನೀಡಿತ್ತು. ಆದರೆ, 36 ಎಸೆತಗಳಲ್ಲಿ 26 ರನ್‌ ಗಳಿಸಿ ಆಡುತ್ತಿದ್ದ ಶೇಯ್‌ ಹೋಪ್‌ ಅವರನ್ನು ಕುಲ್ದೀಪ ಯಾದವ್‌ ಔಟ್‌ ಮಾಡಿದರು. ಇದರ ಬೆನ್ನಲ್ಲೆ ಸಿರಾಜ್‌ ತನ್ನ ಮಾರಕ ಎಸೆತದ ಮೂಲಕ ನಾಯಕ ರಾಸ್ಟನ್‌ ಚೇಸ್‌ (24 ರನ್‌) ಅವರನ್ನು ಔಟ್‌ ಮಾಡಿದರು. ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜಸ್ಟಿನ್‌ ಗ್ರೀವ್ಸ್‌ ಅವರು 48 ಎಸೆತಗಳಲ್ಲಿ 32 ರನ್‌ ಗಳಿಸಿ ಭರವಸೆ ಮೂಡಿಸಿದ್ದರು. ಆದರ, ಅವರನ್ನು ಬುಮ್ರಾ ಕ್ಲೀನ್‌ ಬೌಲ್ಡ್‌ ಮಾಡಿದರು. ಇವರು ವಿಂಡೀಸ್‌ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.



ಭಾರತ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಮೊಹಮ್ಮದ್‌ ಸಿರಾಜ್‌ 4 ವಿಕೆಟ್‌ ಕಿತ್ತರೆ, ಜಸ್‌ಪ್ರೀತ್‌ ಬುಮ್ರಾ 3 ವಿಕೆಟ್‌ ಪಡೆದರು. ಕುಲ್ದೀಪ್‌ ಯಾದವ್‌ ಎರಡು ಮತ್ತು ವಾಷಿಂಗ್ಟನ್‌ ಸುಂದರ್‌ ಒಂದು ವಿಕೆಟ್‌ ಪಡೆದರು.



ಕೆಎಲ್‌ ರಾಹುಲ್‌ ಅರ್ಧಶತಕ

ಪ್ರಥಮ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಉತ್ತಮ ಆರಂಭವನ್ನು ಪಡೆದಿದೆ. ಯಶಸ್ವಿ ಜೈಸ್ವಾಲ್‌ 54 ಎಸೆತಗಳಲ್ಲಿ 36 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಜೇಡನ್‌ ಸೀಲ್ಸ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಟ್ಟರು. ನಂತರ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಸಾಯಿ ಸುದರ್ಶನ್‌ ಅವರು ಕೇವಲ 7 ರನ್‌ ಗಳಿಸಿ ರಾಸ್ಟನ್‌ ಚೇಸ್‌ಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌ ಅವರು 114 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯ 53 ರನ್‌ ಗಳಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಅಜೇಯ 18 ರನ್‌ ಗಳಿಸಿರುವ ಶುಭಮನ್‌ ಗಿಲ್‌ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಟೀಮ್‌ ಇಂಡಿಯಾ 38 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 121 ರನ್‌ಗಳನ್ನು ಗಳಿಸಿದೆ.