ಅಹಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಇಂದು (ಅ.2) ಅಧಿಕೃತ ಚಾಲನೆ ದೊರಕಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೊದಲನೇ ಟೆಸ್ಟ್ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್, ಟೀಮ್ ಇಂಡಿಯಾ ಬೌಲಿಂಗ್ ಎದುರು ತತ್ತರಿಸಿ ಹೋಗಿದೆ. ವಿಂಡೀಸ್ ತಂಡವನ್ನು ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 162 ರನ್ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ, ಮೊದಲ ದಿನದಾಟದಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 121 ರನ್ ಕಲೆಹಾಕಿದೆ.
ಆರಂಭಿಕ ಜೋಡಿಯಾಗಿ ಕಣಕ್ಕಿಳಿದ ವಿಕೆಟ್ ಕೀಪರ್ ಯಶಸ್ವಿ ಜೈಸ್ವಾಲ್ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಜೊತೆಗೂಡಿ ಮೊದಲ ವಿಕೆಟ್ ಪತನದ ವೇಳೆಗೆ 68 ರನ್ ಕಲೆಹಾಕಿದ್ದರು. ಇನ್ನು ಈ ವೇಳೆ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸಾಯಿ ಸುದರ್ಶನ್ ಒಂದಂಕಿಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ರಾಸ್ಟನ್ ಚೇಸ್ ಅವರ ಸ್ಪಿನ್ ಮೋಡಿಗೆ ನಲುಗಿದ ಸುದರ್ಶನ್, ಎಸೆತವನ್ನು ಸರಿಯಾಗಿ ಗ್ರಹಿಸುವಲ್ಲಿ ಸಂಪೂರ್ಣ ವಿಫಲರಾದರು. ಫುಲ್ ಶಾಟ್ ಮಾಡಲು ಯತ್ನಿಸಿದಾಗ ಬಾಲ್ ಅವರ ಹಿಂದಿನ ಕಾಲಿನ ಪ್ಯಾಡ್‌ಗೆ ಬಡಿಯಿತು. ಆ ಮೂಲಕ ಅವರು ಎಲ್‌ಬಿಡಬ್ಲ್ಯು ಔಟ್ ಆದರು. ಇದರಿಂದಾಗಿ ಭಾರತ ತಂಡ 24.5 ಓವರ್‌ಗಳಲ್ಲಿ 90 ರನ್ ಕಲೆಹಾಕಿ 2 ವಿಕೆಟ್ ಕಳೆದುಕೊಂಡಿತು.
IND vs WI 1st Test: ವಿಂಡೀಸ್ ಎದುರು ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಭಾರತ ತಂಡ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಸುದರ್ಶನ್ ದೀರ್ಘ ಸ್ವರೂಪದಲ್ಲಿ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಏಳು ಟೆಸ್ಟ್ ಇನಿಂಗ್ಸ್‌ಗಳಲ್ಲಿ ಅವರು ಕೇವಲ 21.00ರ ಸರಾಸರಿಯಲ್ಲಿ 147 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ.
ಇಂಗ್ಲೆಂಡ್‌ನಲ್ಲಿ ಪ್ರವಾಸದಲ್ಲಿ ಕರುಣ್ ನಾಯರ್ ದೀರ್ಘಾವಧಿ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಆದರೆ, ಈ ಸರಣಿಯಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇದರ ಪರಿಣಾಮವಾಗಿ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಅವರನ್ನು ಕೈ ಬಿಡಲಾಯಿತು. ಇದೀಗ ಅಹಮದಾಬಾದ್‌ನಲ್ಲಿ ವಿಫಲವಾದ ನಂತರ, ಸುದರ್ಶನ್ ಅಭಿಮಾನಿಗಳಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ. ಕೆಲವರು ತಂಡದಿಂದ ಕೈಬಿಡಲಾದ ಕರುಣ್ ನಾಯರ್ ಅವರಿಗೆ ಸ್ಥಾನ ನೀಡಿದ್ದರೆ ತ್ರಿಶತಕ ಬಾರಿಸುತ್ತಿದ್ದರು ಎಂದಿದ್ದಾರೆ. ಕರುಣ್ ನಾಯರ್ ಈ ಪಿಚ್‌ನ ಪರಿಸ್ಥಿತಿಯಲ್ಲಿ ಈ ಬೌಲಿಂಗ್ ದಾಳಿಯ ವಿರುದ್ಧ ತ್ರಿಶತಕ ಗಳಿಸುತ್ತಿದ್ದರು. ಸಾಯಿ ಸುದರ್ಶನ್ ಬದಲು ಅವರಿಗೆ ಅವಕಾಶ ನೀಡಬಹುದಿತ್ತು ಅಭಿಮಾನಿಯೊಬ್ಬರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅರ್ಧಶತಕ ಬಾರಿಸಿದ ಕೆ ಎಲ್ ರಾಹುಲ್
ರೋಹಿತ್ ಶರ್ಮಾ ಅವರ ವಿದಾಯದ ನಂತರ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದಿರುವ ರಾಹುಲ್, ಇಂಗ್ಲೆಂಡ್ ಪ್ರವಾಸದಲ್ಲಿ ತೋರಿದ್ದ ಲಯವನ್ನೇ ಇದೀಗ ವೆಸ್ಟ್ ಇಂಡೀಸ್ ವಿರುದ್ಧವೂ ಕಾಪಾಡಿಕೊಂಡಿದ್ದಾರೆ. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ 114 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 53 ರನ್ ಸಿಡಿಸಿದ್ದಾರೆ. ಅದಲ್ಲದೆ, ತಂಡವನ್ನು ನೂರು ರನ್ ಗಡಿ ದಾಟಿಸಿದ್ದಾರೆ.