ಅಹಮದಾಬಾದ್: ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಚಾಂಪಿಯನ್ಸ್ ಆದ ಬಳಿಕ ಭಾರತ ತಂಡ ಬಿಡುವಿಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ (IND vs WI) ಸಜ್ಜಾಗುತ್ತಿದೆ. ಅಕ್ಟೋಬರ್ 2 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ (Shubman Gill) ಅವರಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸಮಬಲಗೊಳಿಸಿದ ಬಳಿಕ ಇದು ಎರಡನೇ ಟೆಸ್ಟ್ ಸರಣಿಯಾಗಿದೆ. ಗಿಲ್ ತವರಿನಲ್ಲಿ ಟೆಸ್ಟ್ ತಂಡದ ನಾಯಕನಾಗಿ ಮೊದಲ ಬಾರಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದರೂ, ಕಳೆದ ಬಾರಿ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಸೋಲು ಅನುಭವಿಸಿತ್ತು. ಈ ಹಿನ್ನೆಲೆ ಟೀಮ್ ಇಂಡಿಯಾ ಈ ಬಾರಿ ಭರ್ಜರಿ ತಯಾರಿ ನಡೆಸುತ್ತಿದೆ.
ಇನ್ನು ತಂಡದ ಆಯ್ಕೆಯ ಕುರಿತು ನಾಯಕ ಶುಭಮನ್ ಗಿಲ್ ಎದುರು ಹಲವು ಸವಾಲುಗಳಿವೆ. ಈ ನಡುವೆ ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಜೊತೆ ಮೂರನೇ ಸ್ಪಿನ್ ಬೌಲರ್ ಆಯ್ಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಕುಲ್ದಿಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಲ್ಲಿ ಯಾರನ್ನು ಅಯ್ಕೆ ಮಾಡಬೇಕೆಂಬ ಗೊಂದಲ ಆಯ್ಕೆ ಸಮಿತಿ ಮುಂದಿದೆ. ಹಾಗಾಗಿ ಯಾರನ್ನು ಆಯ್ಕೆ ಮಾಡಿದರೆ ಉತ್ತಮ ಎನ್ನುವುದುದನ್ನು ಇಲ್ಲಿ ವಿವರಿಸಲಾಗಿದೆ.
IND vs WI 1st Test: ನಾಳೆಯಿಂದ ಭಾರತ-ವಿಂಡೀಸ್ ಟೆಸ್ಟ್ ಸರಣಿ; ಗೆಲುವಿನ ವಿಶ್ವಾಸದಲ್ಲಿ ಗಿಲ್ ಬಳಗ
ಅಕ್ಷರ್ ಮತ್ತು ಕುಲ್ದೀಪ್ ನಡುವೆ ಯಾರು ಉತ್ತಮ?
ಇತ್ತೀಚಿಗೆ ಇಂಗ್ಲೆಂಡ್‌ನಲ್ಲಿ ಮುಕ್ತಾಯವಾಗಿದ್ದ ಟೆಸ್ಟ್ ಸರಣಿಯಲ್ಲಿ ಉಭಯ ಆಟಗಾರರು ತಂಡದ ಭಾಗವಾಗಿದ್ದರೂ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದಲ್ಲದೆ, ಕಳೆದ ಕಿವೀಸ್ ವಿರುದ್ಧದ ಸರಣಿಯಲ್ಲಿ ಇಬ್ಬರೂ ತಂಡದ ಭಾಗವಾಗಿದ್ದರೂ, ಕುಲ್ದೀಪ್‌ಗೆ ಆಡಲು ಅವಕಾಶ ಲಭಿಸಿತ್ತು. ಬಳಿಕ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಕುಲ್ದೀಪ್ ತಂಡದಿಂದ ಹೊರಗುಳಿದರು. ಆ ವೇಳೆ ಅವರ ಸ್ಥಾನವನ್ನು ಆರ್ ಅಶ್ವಿನ್ ತುಂಬಿದ್ದರು. ಹಾಗಾಗಿ ತವರಿನಲ್ಲಿ ಕುಲ್ದೀಪ್ ಯಾದವ್ ಅವರಿಗೆ ಹೆಚ್ಚು ಅನುಭವ ಇದೆ ಎನ್ನಬಹುದು.
ಉತ್ತಮ ಫಿಟ್ ನೆಸ್
ತಮ್ಮ ಎಡಗೈನಿಂದ ಚೈನಾಮನ್ ಶೈಲಿಯಲ್ಲಿ ಬೌಲ್ ಮಾಡುವ 30 ವರ್ಷದ ಕುಲ್ದೀಪ್ ತವರು ಮೈದಾನಗಳಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನವನ್ನು ತೋರಿದ್ದಾರೆ. ಹಾಗಾಗಿ ಅಹಮದಾಬಾದ್ ಪಿಚ್‌ನಲ್ಲಿ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಕುಲ್ದೀಪ್ ಯಾದವ್ ಸಾಥ್ ನೀಡಬಹುದು. ಭಾರತವು ಸ್ಪಿನ್ ವಿಭಾಗದ ಮೂಲಕ ಬಲಿಷ್ಠ ಹೋರಾಟ ಕೊಡುವುದಾದರೆ ಈ ಆಯ್ಕೆ ಉತ್ತಮ ಎನ್ನಬಹುದು. ಒಂದು ವೇಳೆ ಪಿಚ್ ಸೀಮರ್ ಕಂಡುಬಂದಲ್ಲಿ ಜಡೇಜಾ ಮತ್ತು ಸುಂದರ್ ಅವರೊಂದಿಗೆ ಆಡಬಹುದು.
IND vs WI: ವಿಂಡೀಸ್‌ಗೆ ಮತ್ತೊಂದು ಹಿನ್ನಡೆ, ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಅಲ್ಝಾರಿ ಜೋಸೆಫ್ ಔಟ್!
ಫಾರ್ಮ್ ಮತ್ತು ಅಂಕಿ ಅಂಶಗಳು
ತವರಿನಲ್ಲಿ ಒಟ್ಟಾರೆ ಟೆಸ್ಟ್ ಬೌಲಿಂಗ್ ಅಂಕಿ ಅಂಶಗಳನ್ನು ಗಮನಿಸುವುದಾದರೆ, ಅಕ್ಷರ್ ಪಟೇಲ್ ಅವರು ಕುಲ್ದೀಪ್ ಯಾದವ್‌ಗಿಂತ ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ. ಕುಲ್ದೀಪ್ ಯಾದವ್ ಒಂಬತ್ತು ಪಂದ್ಯಗಳಲ್ಲಿ 23.39ರ ಸರಾಸರಿಯಲ್ಲಿ 38 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಅಕ್ಷರ್ ಪಟೇಲ್ 12 ಪಂದ್ಯಗಳಲ್ಲಿ 18.65 ರ ಅದ್ಭುತ ಸರಾಸರಿಯಲ್ಲಿ 47 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೂ, 2021 ಮತ್ತು 2022ರ ಋತುಗಳಲ್ಲಿ ಅಕ್ಷರ್ ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2023 ಮತ್ತು 2024 ರಲ್ಲಿ ಅವರ ತವರಿನಲ್ಲಿ ನಡೆದ ಕೊನೆಯ ಆರು ಟೆಸ್ಟ್ ಪಂದ್ಯಗಳಲ್ಲಿ, ಎಡಗೈ ಸ್ಪಿನ್ನರ್ ಸುಮಾರು 50ರ ಸರಾಸರಿಯಲ್ಲಿ ಕೇವಲ ಎಂಟು ವಿಕೆಟ್‌ಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ.
ಇದರ ನಡುವೆ ಕುಲ್ದೀಪ್ ಯಾದವ್ ಅವರ ಇತ್ತೀಚಿನ ಫಾರ್ಮ್ ಇದಕ್ಕೆ ವಿರುದ್ಧವಾಗಿದೆ, ಚೈನಾಮಾನ್ ಸ್ಪಿನ್ನರ್ 2024 ರಲ್ಲಿ ತವರಿನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ 23.09 ರ ಸರಾಸರಿಯಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ತವರು ಸರಣಿಯಲ್ಲಿ ಕುಲ್ದೀ ಪ್ 11 ಇನಿಂಗ್ಸ್‌ಗಳಲ್ಲಿ ಸ್ಥಾನ ಪಡೆಯಲಿಲ್ಲ ಮತ್ತು ಅಕ್ಷರ್ ಎರಡು ಇನಿಂಗ್ಸ್‌ಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು.
ಆದಾಗ್ಯೂ, ನಂತರದ ನಾಲ್ಕು ಟೆಸ್ಟ್‌ಗಳಲ್ಲಿ ಭಾರತವು ಗೆಲುವು ಸಾಧಿಸಿತು. ಕುಲ್ದೀಪ್ ಯಾದವ್ ಆ ವೇಳೆ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಅಕ್ಷರ್ ಮೊದಲ ಎರಡು ಟೆಸ್ಟ್‌ಗಳನ್ನು ಮಾತ್ರ ಆಡಿದರು ಮತ್ತು ಅವರ ನಿರಾಶಾದಯಕ ಪ್ರದರ್ಶನದಿಂದ ಪ್ರದರ್ಶನದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು. ಹಾಗಾಗಿ ಇತ್ತೀಚಿನ ಫಾರ್ಮ್ ಗಮನಿಸಿದರೆ ತವರಿನಲ್ಲಿ ಕುಲ್ದೀಪ್ ಉತ್ತಮ ಪ್ರದರ್ಶನವನು ತೋರಿದ್ದಾರೆ.