ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ (IND vs WI) ಟೆಸ್ಟ್ ಸರಣಿಗೆ 14 ಸದಸ್ಯರ ಭಾರತ ಟೆಸ್ಟ್ ತಂಡವನ್ನು (India's Test Squad) ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಅಕ್ಟೋಬರ್ 2 ರಿಂದ 14ರವರೆಗೆ ಟೆಸ್ಟ್ ಸರಣಿ ನಡೆಯಲಿದೆ. ಆದರೆ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ರಿಷಭ್ ಪಂತ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಅವರಿನ್ನೂ ಚೇತಿರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಂಡೀಸ್ ಟೆಸ್ಟ್ ಸರಣಿಯಲ್ಲಿ ಧ್ರುವ್ ಜುರೆಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಜುಲೈ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ಕ್ರಿಸ್ ವೋಕ್ಸ್ ಅವರ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ರಿಷಭ್ ಪಂತ್ ಚೆಂಡನ್ನು ತಮ್ಮ ಎಡಗಾಲಿನ ಪಾದಕ್ಕೆ ತಗುಲಿಸಿಕೊಂಡಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಪಂತ್ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಅವರು ಫಿಸಿಯೊ ಸಹಾಯದಿಂದ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ್ದರು. ನಂತರ ತಡವಾಗಿ ಬ್ಯಾಟಿಂಗ್‌ಗೆ ಬಂದಿದ್ದರೂ ಅವರು ವಿಕೆಟ್ ಕೀಪಿಂಗ್ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು. ನಂತರ ಪಾದದ ಗಾಯ ಗಂಭೀರವಾಗಿದ್ದ ಕಾರಣ ರಿಷಭ್ ಪಂತ್ ಅವರು ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಎನ್ ಜಗದೀಶನ್ ಅವರನ್ನು ಐದನೇ ಟೆಸ್ಟ್‌ಗೆ ಸೇರಿಸಲಾಗಿತ್ತು.
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಕರುಣ್‌ಗೆ ಕರುಣೆ ತೋರದ ಆಯ್ಕೆ ಸಮಿತಿ
ರಿಷಭ್ ಪಂತ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಪುನರಾರಂಭಿಸುವುದಕ್ಕೂ ಮುನ್ನ ಹೆಚ್ಚಿನ ವೈದ್ಯಕೀಯ ವರದಿಗಳು ಬರಬೇಕಿದೆ ಆದರೆ ಅವರು ತಮ್ಮ ಬಲವರ್ಧನೆ ಮತ್ತು ಕಂಡೀಷನಿಂಗ್ ಕೆಲಸವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಸದ್ಯ ಬಿಸಿಸಿಐ ರಿಷಭ್ ಪಂತ್ ಅವರನ್ನು ತ್ವರಿತವಾಗಿ ಆಡಿಸುವ ಉದ್ದೇಶವನ್ನು ಹೊಂದಿಲ್ಲ. ಗಾಯದ ಕಾರಣ ರಿಷಭ್ ಪಂತ್ ಏಷ್ಯಾ ಕಪ್ ಟೂರ್ನಿಯನ್ನು ಕಳೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್‌ಗೆ ಸ್ಥಾನ ಸಿಗದೆ ಇರಲು ಕಾರಣವೇನು?
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಭಾರತ ತಂಡ ಅಕ್ಟೋಬರ್ 19 ರಂದು ಆರಂಭವಾಗುವ ಆಸ್ಟ್ರೇಲಿಯಾ ಎದುರು ವೈಟ್‌ಬಾಲ್ ಸರಣಿಯನ್ನು ಆಡಲಿದೆ. ಆಸೀಸ್ ಎದುರು ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಇದಾದ ಬಳಿಕ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ 14 ರಿಂದ ಡಿಸೆಂಬರ್ 19ರವರೆಗೆ ಸರಣಿಗಳನ್ನು ಆಡಲಿದೆ. ಈ ವೇಳೆ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಒಡಿಐ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನ ರಿಷಭ್ ಪಂತ್ ಅವರ ಬಗ್ಗೆ ಅಜಿತ್ ಅಗರ್ಕರ್ ಮಾಹಿತಿಯನ್ನು ನೀಡಿದ್ದಾರೆ. "ವೆಸ್ಟ್ ಇಂಡೀಸ್ ಸರಣಿಗೆ ರಿಷಭ್ ಪಂತ್ ಫಿಟ್ ಇಲ್ಲ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಲಭ್ಯರಾಗಬಹುದೆಂಬ ನಿರೀಕ್ಷೆ ಇದೆ," ಎಂದು ಬಿಸಿಸಿಐ ಚೀಫ್ ಸೆಲೆಕ್ಟರ್ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಕುಲ್‌ದೀಪ್ ಯಾದವ್, ಎನ್ ಜಗದೀಶನ್