ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯ (IND vs AUS) ಭಾರತ ತಂಡವನ್ನು ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಅಕ್ಟೋಬರ್ 4 ರಂದು ಪ್ರಕಟಿಸಲಾಗಿತ್ತು. ಈ ವೇಳೆ ಭಾರತ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ (Rohit Sharma) ಅವರನ್ನು ಕೈ ಬಿಡಲಾಗಿದ್ದು, ಶುಭಮನ್ ಗಿಲ್‌ಗೆ (Shubman Gill) ನಾಯಕತ್ವವನ್ನು ನೀಡಲಾಗಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಶುಭಮನ್ ಗಿಲ್‌ಗೆ ಒಡಿಐ ನಾಯಕತ್ವವನ್ನು ನೀಡಲು, ಉತ್ತಮ ನಾಯಕತ್ವದ ದಾಖಲೆ ಹೊಂದಿದ್ದರೂ ರೋಹಿತ್ ಶರ್ಮಾ ಅವರನ್ನು ತೆಗೆದು ಹಾಕಲಾಗಿದೆ ಎಂದು ದೂರಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, ಶುಭಮನ್ ಗಿಲ್ ಅವರಿಗೆ ಒಡಿಐ ನಾಯಕನಾಗಲು ಇಷ್ಟವಿರಲಿಲ್ಲ. ಭಾರತ ಏಕದಿನ ತಂಡದ ನಾಯಕತ್ವದ ಸಂಗತಿಯನ್ನು ಆತುರದಲ್ಲಿ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
IND vs AUS: ರವೀಂದ್ರ ಜಡೇಜಾರ ಏಕದಿನ ವೃತ್ತಿ ಜೀವನ ಅಂತ್ಯ? ಎಬಿಡಿ ಹೇಳಿದ್ದಿದು!
"ನನ್ನ ಉದ್ದೇಶ: ಅವರ (ಶುಭಮನ್ ಗಿಲ್) ಮೇಲೆ ಹೆಚ್ಚಿನ ಹೊರೆ ಹಾಕಬೇಡಿ. ಅವರು ಟೆಸ್ಟ್ ತಂಡದ ನಾಯಕ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಉಪನಾಯಕರಾಗಿದ್ದರು ಮತ್ತು ಸೂರ್ಯಕುಮಾರ್ ಯಾದವ್ ದೂರ ಸರಿದಾಗ ಅವರು ನಾಯಕರಾಗಬಹುದು. ಇದೀಗ ನೀವು ಅವರನ್ನು ಏಕದಿನ ನಾಯಕರನ್ನಾಗಿ ಮಾಡಿದ್ದೀರಿ. ಎಲ್ಲವನ್ನೂ ಆತುರದಿಂದ ಮಾಡಲಾಗುತ್ತಿದೆ ಎಂದು ನನಗೆ ಅನಿಸುತ್ತದೆ. ಒಬ್ಬ ಆಟಗಾರ ಎಂದಿಗೂ ನಾಯಕತ್ವವನ್ನು ಕೇಳುವುದಿಲ್ಲ. ಅವರು ಅದನ್ನು ಬಯಸಲಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ನೀವು ಅದನ್ನು ಬೇಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಎಲ್ಲರೂ ಅವರನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವರನ್ನು ಭವಿಷ್ಯಕ್ಕಾಗಿ ನಾಯಕ ಎಂದು ಪರಿಗಣಿಸುತ್ತಾರೆ. ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆದಾರರು ಅವರ ಮೇಲೆ ಒತ್ತಡ ಹೇರಿದ್ದಾರೆ," ಎಂದು ಕೈಫ್ ದೂರಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ರೋಹಿತ್ ಶರ್ಮಾ ಅವರ ಸ್ಥಾನವನ್ನು ಶುಭಮನ್ ಗಿಲ್ ವಹಿಸಿಕೊಂಡಿದ್ದರು. ಅವರು ಈಗ ಭಾರತದ ಎರಡು ಸ್ವರೂಪಗಳ ನಾಯಕರಾಗಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ20ಐ ತಂಡದ ನಾಯಕನಾಗುವ ಮೂಲಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ತುಂಬುವುದು ಬಹುತೇಕ ಖಚಿತವಾಗಿದೆ.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
2024ರಲ್ಲಿ ಉಪನಾಯಕರಾಗಿದ್ದ ಗಿಲ್
ಶುಭಮನ್ ಗಿಲ್ ಮೊದಲು ನಾಯಕತ್ವ ಗುಂಪಿಗೆ 2024ರಲ್ಲಿ ಸೇರಿದ್ದರು. ಅವರನ್ನು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನಿರ್ಲಕ್ಷಿಸಲಾಗಿತ್ತು. ಆದರೆ ಜಿಂಬಾಬ್ವೆ ವಿರುದ್ಧದ ಮುಂದಿನ ಟಿ20-ಐ ಸರಣಿಗೆ ನಾಯಕನನ್ನಾಗಿ ನೇಮಿಸಲಾಗಿತ್ತು. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಗಿಲ್ ಅವರನ್ನು ವೈಟ್-ಬಾಲ್ ತಂಡಗಳಿಗೆ ಉಪನಾಯಕನನ್ನಾಗಿ ನೇಮಿಸಲಾಗಿತ್ತು.
ಭಾರತ ಗೆದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾಗೆ ಉಪ ನಾಯಕನಾಗುವ ಮೂಲಕ ಗಿಲ್ ಸಹಾಯ ಮಾಡಿದ್ದರು. ಸೂರ್ಯಕುಮಾರ್ ಯಾದವ್ ಅವರ ಉಪನಾಯಕನಾಗಿ ಅವರು ಟಿ20ಐ ತಂಡಕ್ಕೆ ಮರಳಿದ್ದಾರೆ. ಗಿಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಾಯಕತ್ವಕ್ಕೆ ಪದಾರ್ಪಣೆ ಮಾಡಿದ್ದರು. ಪ್ರವಾಸಿ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಮಾಡಿಕೊಂಡಿತ್ತು.