ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೈಬ್ರೇಕರ್‌ಗೆ ಸಾಗಿದ ಕೊನೆರು ಹಂಪಿ vs ದಿವ್ಯಾ ಚೆಸ್‌ ವಿಶ್ವಕಪ್‌ ಫೈನಲ್‌

Divya Deshmukh vs Koneru Humpy ದಿವ್ಯಾ ದೇಶ್‌ಮುಖ್‌, ಮೊದಲ ಸೆಮಿಫೈನಲ್‌ನಲ್ಲಿ ಚೀನಾದ ಝೊಂಗಿ ತಾನ್‌ ವಿರುದ್ಧ ಗೆದ್ದು ಮೊದಲಿಗೆ ಫೈನಲ್‌ಗೇರಿದ್ದರೆ, ಮತ್ತೂಂದು ಸೆಮಿಫೈನಲ್‌ನಲ್ಲಿ ಕೊನೆರು ಹಂಪಿ ಕೂಡ ಚೀನಾದ ಟಿಂಗ್ಜಿ ಲೀ ವಿರುದ್ಧ ಜಯ ಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಬಟುಮಿ(ಜಾರ್ಜಿಯಾ): ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ(Koneru Humpy) ಮತ್ತು ದಿವ್ಯಾ ದೇಶ್‌ಮುಖ್‌(Divya Deshmukh) ನಡುವಿನ ಫಿಡೆ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ನ(chess World Cup 2025) ಎರಡನೇ ದಿನದಾಟವೂ ಡ್ರಾದಲ್ಲಿ ಅಂತ್ಯ ಕಂಡಿದ್ದು, ಸೋಮವಾರ ನಡೆಯುವ ಟೈಬ್ರೇಕರ್‌ನಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಶನಿವಾರ ನಡೆದಿದ್ದ ಜಿದ್ದಾಜಿದ್ದಿ ಆರಂಭಿಕ ಪಂದ್ಯದಲ್ಲಿ 41 ಚಲನೆಗಳ ಬಳಿಕ ಇಬ್ಬರೂ ಆಟವನ್ನು ಡ್ರಾಗೊಳಿಸಿದ್ದರು.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಕೊನೆರು ಹಂಪಿ ವಿರುದ್ಧ ಡ್ರಾ ಸಾಧಿಸಲು 19 ವರ್ಷದ ದಿವ್ಯಾ ಕಪ್ಪು ಕಾಯಿಗಳೊಂದಿಗೆ ತೀವ್ರ ಹೋರಾಟ ನಡೆಸಿ ಕೊನೆಗೂ ಯಶಸ್ಸು ಸಾಧಿಸಿದರು. ಸೋಮವಾರ ನಡೆಯಲಿರುವ ಕುತೂಹಲಕಾರಿ ಟೈ-ಬ್ರೇಕರ್‌ನಲ್ಲಿ ಅದೃಷ್ಟ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

ದಿವ್ಯಾ ದೇಶ್‌ಮುಖ್‌, ಮೊದಲ ಸೆಮಿಫೈನಲ್‌ನಲ್ಲಿ ಚೀನಾದ ಝೊಂಗಿ ತಾನ್‌ ವಿರುದ್ಧ ಗೆದ್ದು ಮೊದಲಿಗೆ ಫೈನಲ್‌ಗೇರಿದ್ದರೆ, ಮತ್ತೂಂದು ಸೆಮಿಫೈನಲ್‌ನಲ್ಲಿ ಕೊನೆರು ಹಂಪಿ ಕೂಡ ಚೀನಾದ ಟಿಂಗ್ಜಿ ಲೀ ವಿರುದ್ಧ ಜಯ ಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಟೈ ಬ್ರೇಕರ್‌ ಹೇಗೆ ನಡೆಯುತ್ತೆ?

ಸೋಮವಾರ ನಡೆಯುವ ಟೈ ಬ್ರೇಕರ್‌ನಲ್ಲಿ 2 ಸುತ್ತಿನ, ತಲಾ 10 ನಿಮಿಷಗಳ ರ್‍ಯಾಪಿಡ್‌ ಗೇಮ್‌ ಆಡಿಸಲಾಗುತ್ತದೆ. ಅಲ್ಲೂ ಟೈ ಆದರೆ ತಲಾ 5 ನಿಮಿಷಗಳ ಮತ್ತೆರಡು ಗೇಮ್‌ ನಡೆಸಲಾಗುತ್ತದೆ. ಫಲಿತಾಂಶ ಬರದಿದ್ದರೆ ತಲಾ 3 ನಿಮಿಷಗಳ 2 ಬ್ಲಿಟ್ಜ್‌ ಗೇಮ್‌ ಆಡಿಸಲಾಗುತ್ತದೆ. ಅಗತ್ಯಬಿದ್ದರೆ ಫಲಿತಾಂಶ ಬರುವವರೆಗೂ 3+2 ಬ್ಲಿಟ್ಜ್‌ ಗೇಮ್‌ ನಡೆಸಲಾಗುತ್ತದೆ.