ಬಟುಮಿ, ಜಾರ್ಜಿಯಾ: ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳೆಯರ ಚೆಸ್ ವಿಶ್ವಕಪ್(FIDE Women’s World Cup) ಪಂದ್ಯಾವಳಿಯಲ್ಲಿ ಭಾರತದ ದಿವ್ಯಾ ದೇಶಮುಖ್(Divya Deshmukh) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಟೈಬ್ರೇಕರ್‌ನಲ್ಲಿ ತನ್ನದೇ ದೇಶದ ಹರಿಕಾ ದ್ರೋಣವಲ್ಲಿ(Harika Dronavalli) ಅವರನ್ನು ಸೋಲಿಸಿ ಈ ಸಾಧನೆಗೈದರು. ಇದಕ್ಕೂ ಮುನ್ನ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಮೂಲಕ ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2023 ರಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಹರಿಕಾ ಕ್ವಾರ್ಟರ್ ಫೈನಲ್ ತಲುಪಿದ್ದು, ಭಾರತೀಯರೊಬ್ಬರ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ಬಾರಿ ಇಬ್ಬರು ಆಟಗಾರ್ತಿಯರು ಸೆಮಿಫೈನಲ್ ಪ್ರವೇಶಿಸಿದ್ದು ಐತಿಹಾಸಿಕ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಈ ಕೂಟದಲ್ಲಿ ಅಗ್ರ 3 ಸ್ಥಾನ ಪಡೆದವರು ಕ್ಯಾಂಡಿಡೇಟ್ಸ್‌ಗೆ ಆಯ್ಕೆಯಾಗುತ್ತಾರೆ.
ಹರಿಕಾ ವಿರುದ್ಧದ ಕ್ವಾರ್ಟರ್ ಫೈನಲ್‌ನ ಪಂದ್ಯ 1 ಮತ್ತು 2 ರ ಪಂದ್ಯಗಳನ್ನು ಡ್ರಾ ಮಾಡಿಕೊಂಡ 19 ವರ್ಷದ ದಿವ್ಯಾ ಪಂದ್ಯವನ್ನು ಟೈಬ್ರೇಕರ್‌ಗೆ ಕೊಂಡೊಯ್ದರು. ಇಲ್ಲಿ ಸತತ ಪಂದ್ಯಗಳಲ್ಲಿ ತನ್ನ ಹಿರಿಯ ಆಟಗಾರ್ತಿಯನ್ನು ಸೋಲಿಸಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡರು. ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಟಾನ್ ಝೊಂಗಿಯನ್ನು ಎದುರಿಸಲಿದ್ದಾರೆ. ಕೋನೇರು ಹಂಪಿ ಚೀನಾದ ಆಟಗಾರ್ತಿ ಲೀ ಟಿಂಗ್ಜಿಯನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ ENG vs IND: ವಾಸಿಂ ಅಕ್ರಮ್ 2 ದಾಖಲೆಯ ಮೇಲೆ ಕಣ್ಣಿಟ್ಟ ಜಸ್‌ಪ್ರೀತ್ ಬುಮ್ರಾ