ದುಬೈ: ಯಾವಾಗಲೂ ಗಂಭೀರವಾಗಿ ಕಾಣುವ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಅವರು ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲುತ್ತಿದ್ದಂತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಅವರು ಪಾಕಿಸ್ತಾನ(India vs Pakistan) ಮೇಲಿನ ಎಲ್ಲ ಸಿಟ್ಟನ್ನು ತೀರಿಸಿಕೊಂಡಂತೆ ಟೇಬಲ್ ಬಡಿದು ಸಂಭ್ರಮಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಂದ್ಯ ಆರಂಭಗೊಂಡು ಕೊನೆಯ ತನಕ ಸಿಡುಕು ಮೋರೆಯಲ್ಲಿ ಕಾಣಿಸಿಕೊಂಡಿದ್ದ ಗಂಭೀರ್, ರಿಂಕು ಸಿಂಗ್ ವಿನ್ನಿಂಗ್ ರನ್ ಬಾರಿಸುತ್ತಿದ್ದಂತೆ ತಮ್ಮ ಮುಂದಿದ್ದ ಟೇಬಲ್‌ಗೆ ಜೋರಾಗಿ ಬಡಿದು ಸಂಭ್ರಮಿಸಿದರು. ಬಳಿಕ ಮೈದಾನಕ್ಕೆ ತೆರಳಿ ತಂಡವನ್ನು ಗೆಲುವಿನ ದಡ ಸೇರಿಸಿದ ತಿಲಕ್ ವರ್ಮ ಅವರನ್ನು ಬಿಗಿದಪ್ಪಿಕೊಂಡು ಅಭಿನಂದಿಸಿದರು.
ಪಹಲ್ಗಾಮ್ ಘಟನೆ ಬಳಿಕ ಪೋಸ್ಟ್ ಹಂಚಿಕೊಂಡಿದ್ದ ಗಂಭೀರ್, "ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದರು. ಇದಕ್ಕೆ ಕಾರಣರಾದವರು ಖಂಡಿತವಾಗಿಯೂ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುವ ಬೆದರಿಕೆ ಮೇಲ್‌ಗಳು ಗಂಭೀರ್‌ಗೆ ಬಂದಿತ್ತು. ಪಾಕ್ ನೆರಳು ನೋಡಿದರೂ ಸಿಡಿಮಿಡಿ ಎನ್ನುತ್ತಿದ್ದ ಗಂಭೀರ್ ತನ್ನ ತಂಡ ಪಾಕ್‌ಗೆ ಸೋಲುಣಿಸಿದ್ದನ್ನು ಕಂಡು ಅತ್ಯಂತ ಗಾಂಭೀರ್ಯವಾಗಿಯೇ ಗೆಲುವುವನ್ನು ಸಂಭ್ರಮಿಸಿ ಸೇಡು ತೀರಿಸಿಕೊಂಡರು.
ಸಣ್ಣ ಮೊತ್ತ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ಭಾರತ ಗೆಲ್ಲೋದೆ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಎಸೆತದ ಬಳಿಕ ಭಾರತ ಮೇಲೆ ಒತ್ತಡ ತೀವ್ರಗೊಳ್ಳುತ್ತಿತ್ತು. ಈ ವೇಳೆ ತಿಲಕ್ ವರ್ಮಾ ಮತ್ತು ಶಿವಂ ದುಬೆ ನೀಡಿದ ಹೋರಾಟದಿಂದ ಭಾರತ 5 ವಿಕೆಟ್‌ಗೆ 150 ರನ್ ಬಾರಿಸಿ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು.
ಭಾರತ ಪರ ಅಜೇಯ ಆಟವಾಡಿದ ತಿಲಕ್ ವರ್ಮ 53 ಎಸೆತಗಳಿಂದ 4 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 69 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿ ಪಂದ್ಯಕ್ಕೆ ತಿರುವು ತಂದುಕೊಟ್ಟ ಶಿವಂ ದುಬೆ 33 ರನ್ ಗಳಿಸಿದರು.
ಇದನ್ನೂ ಓದಿ Asia Cup 2025 final: ಏಷ್ಯಾಕಪ್ ಗೆದ್ರೂ ಟ್ರೋಫಿ ಎತ್ತಿಹಿಡಿಯದ ಭಾರತ; ಚೆಕ್ ಬಿಸಾಡಿದ ಪಾಕ್ ನಾಯಕ!