ದುಬೈ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ನಾಣ್ಣುಡಿಯಂತೆ, ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯವಾಗಿ ಸೋಲು ಕಂಡ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಘಾ(Salman Agha) ಸೋಲಿಗೆ ಪಿಚ್ ಮತ್ತು ಅಂಪೈರ್‌ಗಳೇ ಕಾರಣ ಎಂದು ದೂರಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ನಾಯಕ ಸಲ್ಮಾನ್ ಅಘಾ, 'ಪಿಚ್ ನಮಗೆ ಸಹಕಾರಿಯಾಗಿರಲಿಲ್ಲ. ಹೀಗಾಗಿ ನಮಗೆ ಸಮಸ್ಯೆಯಾಯಿತು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
'ಒಂದು ವೇಳೆ ನಮಗೆ ಒಳ್ಳೆಯ ಪಿಚ್ ನೀಡಿದ್ದರೇ, ನಮ್ಮ ಬ್ಯಾಟಿಂಗ್ ಹೇಗಿರುತ್ತಿತ್ತು ಎನ್ನುವುದನ್ನು ನೀವು ನೋಡುಲು ಸಾಧ್ಯವಾಗುತ್ತಿತ್ತು. ಈ ಪಿಚ್‌ನಲ್ಲಿ ಹೊಸ ಬ್ಯಾಟರ್‌ಗಳು ಬ್ಯಾಟ್ ಮಾಡುವುದು ಸುಲಭವಾಗಿರಲಿಲ್ಲ. ಇಲ್ಲಿ ಸೆಟ್ ಆಗಬೇಕು ಎಂದರೇ ಕೊನೆಯ ತನಕ ಬ್ಯಾಟ್ ಮಾಡಬೇಕು. ನಮಗೆ ಮಾತ್ರವಲ್ಲ ಭಾರತೀಯ ಬ್ಯಾಟರ್‌ಗಳು ಇಲ್ಲಿ ರನ್ ಗಳಿಸಲು ಸಾಕಷ್ಟು ಕಷ್ಟಗಳು ಎದುರಾದವು. ನಾವು ಎರಡು ಬ್ಯಾಟರ್‌ಗಳನ್ನು ಬೇಗನೇ ಕಳೆದುಕೊಂಡೆವು. ಹೀಗಾಗಿ ನಮ್ಮ ದೊಡ್ಡ ಮೊತ್ತ ಗಳಿಸುವ ಪ್ರಯತ್ನಕ್ಕೆ ಹಿನ್ನಡೆಯುಂಟಾಯಿತು" ಎಂದು ಅಘಾ ಹೇಳಿದರು.
ಇಷ್ಟಕ್ಕೆ ಸುಮ್ಮನಾಗದ ಪಾಕ್ ನಾಯಕ, ಫಖರ್ ಜಮಾನ್ ಔಟ್ ಬಗ್ಗೆ ಅಂಪೈರ್ ನೀಡಿದ ತೀರ್ಪಿನ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ. 'ಅಂಪೈರ್‌ಗಳು ಒಮ್ಮೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಚೆಂಡು ಸಂಜು ಕೈ ಸೇರುವ ಮೊದಲು ನೆಲಕ್ಕೆ ತಗುಲಿ ಬೌನ್ಸ್ ಆಗಿತ್ತು ಎಂದು ನನಗನಿಸುತ್ತಿದೆ. ಅಂಪೈರ್ ಈ ತೀರ್ಪು ಕೂಡ ಪಂದ್ಯದ ಮೇಲೆ ಪರಿಣಾಮ ಬೀರಿತು ಎಂದು ಹೇಳಿದರು. ಒಟ್ಟಾರೆ ಸೋಲಿಗೆ ತಮ್ಮ ತಂಡದ ಕಳಪೆ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ಎಂಬುದನ್ನು ಮರೆಮಾಚಲು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ Asia Cup 2025: ಕೆಣಕಿದ ರೌಫ್‌ಗೆ ಚಳಿ ಬಿಡಿಸಿದ ಅಭಿಷೇಕ್, ಗಿಲ್; ವಿಡಿಯೊ ವೈರಲ್
ಫರ್ಹಾನ್ ಉದ್ಧಟತನ
ಭಾರತೀಯ ಆಟಗಾರರಿಂದ ಕ್ರಿಕೆಟ್ ಮೈದಾನದಲ್ಲೇ ಭಾರೀ ಅಪಮಾನಕ್ಕೊಳಗಾಗಿದ್ದ ಪಾಕಿಸ್ತಾನ ಕ್ರಿಕೆಟಿಗರು, ಈ ಬಾರಿ ಅದಕ್ಕೆ ತಿರುಗೇಟು ನೀಡುವ ನೆಪದಲ್ಲಿ ಉದ್ಧಟತನ ಮೆರೆದಿದ್ದಾರೆ. ಪಾಕಿಸ್ತಾನ ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ ಅರ್ಧಶತಕ ದಾಖಲಿಸಿದ ಬಳಿಕ ತಮ್ಮ ಬ್ಯಾಟ್ ಮೂಲಕ ಎಕೆ 47 ಗನ್ ಶಾಟ್ ರೀತಿ ಸಂಭ್ರಮಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.