ಗುವಾಹಟಿ: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ(ICC Women's World Cup 2025) ವಿಶ್ವಕಪ್ ಟೂರ್ನಿಗೆ ಮಂಗಳವಾರ ಅಧಿಕೃತ ಚಾಲನೆ ಸಿಗಲಿದೆ. ನಾಳೆ ನಡೆಯುವ ಉದ್ಘಾಟನ ಪಂದ್ಯದಲ್ಲಿ ಜಂಟಿ ಆತಿಥೇಯರಾದ ಭಾರತ ಮತ್ತು ಶ್ರೀಲಂಕಾ(INDW vs SLW) ತಂಡಗಳು ಮುಖಾಮುಖಿಯಾಗಲಿವೆ. ಗುವಾಹಟಿಯಲ್ಲಿ ಈ ಪಂದ್ಯ ನಡೆಯಲಿದೆ.
5 ಸಾವಿರ ಉಚಿತ ಟಿಕೆಟ್
ಇತ್ತೀಚೆಗೆ ನಿಧನರಾದ ಅಸ್ಸಾಂನ ಜನಪ್ರಿಯ ಗಾಯಕ ಮತ್ತು ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಐಕನ್ ಆಗಿರುವ ಜುಬಿನ್ ಗಾರ್ಗ್ (52) ಅವರಿಗೆ ಗೌರವ ಸಲ್ಲಿಸಲು ಸಲುವಾಗಿ ನಾಳಿನ ಪಂದ್ಯಕ್ಕೆ 5 ಸಾವಿರ ಉಚತ ಟಿಕೆಟ್‌ಗಳನ್ನು ನೀಡುವುದಾಗ ಅಸ್ಸಾಂ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದಲೇ ಉಚಿತ ಟಿಕೆಟ್ ವಿತರಣೆ ನಡೆಯಲಿದೆ.
ಭಾರತದ ಸಾಧನೆ
ಭಾರತ ಮಹಿಳಾ ತಂಡ ಈವರೆಗೆ ವಿಶ್ವಕಪ್ ಗೆದ್ದಿಲ್ಲ. 1973ರಲ್ಲಿ ಮೊದಲ್ಗೊಂಡ ಬಳಿಕ ಭಾರತ ಎರಡು ಬಾರಿ ಫೈನಲ್ ಪ್ರವೇಶಿಸಿತ್ತು. ಎರಡೂ ಬಾರಿಯೂ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. ಮೊದಲ ಬಾರಿಗೆ 2005ರಲ್ಲಿ ಮಿಥಾಲಿ ರಾಜ್ ಸಾರಥ್ಯದಲ್ಲಿ ಆ ಬಳಿಕ 2017ರಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ. ಈ ಬಾರಯೂ ತಂಡಕ್ಕೆ ಕೌರ್ ಅವರೇ ನಾಯಕಿಯಾಗಿದ್ದಾರೆ. ಈ ಬಾರಿಯ ವಿಶ್ವಕಪ್ ಕೌರ್‌ಗೆ ಕೊನೆಯದ್ದಾಗಿದೆ. ಹೀಗಾಗಿ ಸಿಕ್ಕ ಅವಕಾಶದಲ್ಲಿ ಅವರು ತಂಡಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಡುವ ವಿಶ್ವಾಸದಲ್ಲಿದ್ದಾರೆ. ತವರಿನಲ್ಲೇ ಟೂರ್ನಿ ನಡೆಯುತ್ತಿರುವ ಕಾರಣ ಇದರ ಲಾಭವೂ ತಂಡಕ್ಕಿದೆ.
ಕೌರ್ ಫಾರ್ಮ್ ಚಿಂತೆ
ಭಾರತದ ಪಾಲಿನ ಚಿಂತೆಯ ಸಂಗತಿಯೆಂದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಕೈಕೊಟ್ಟ ಫಾರ್ಮ್. ಇತ್ತೀಚೆಗೆ ಅವರು ಆಡಿದ ಎಲ್ಲ ಸರಣಿಯಲ್ಲಿಯೂ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ಸು ಕಂಡಿಲ್ಲ. ಅವರು ಫಾರ್ಮ್ ಕಂಡುಕೊಂಡರೆ ಭಾರತಕ್ಕೆ ಅದು ಬಂಪರ್ ಆಗಲಿದೆ. ಉಳಿದಂತೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಆಲ್‌ರೌಂಡರ್ ದೀಪ್ತಿ ಶರ್ಮ, ರಿಚಾ ಘೋಷ್, ಪ್ರತೀಕಾ ರಾವಲ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಆಸೀಸ್ ಸರಣಿಯಲ್ಲಿ ಇವರೆಲ್ಲ ತಮ್ಮ ಸಾಮರ್ಥ್ಯ ಪ್ರರ್ಶಿಸಿದ್ದರು.
ಅತ್ತ ಶ್ರೀಲಂಕಾದ ತಂಡದ ನಾಯಕಿ ಚಾಮರಿ ಅಟಪಟ್ಟು ಅವರಿಗೂ ಇದು ಕೊನೆಯ ವಿಶ್ವಕಪ್ ಟೂರ್ನಿ. ಹೀಗಾಗಿ ಅವರು ಕೂಡ ನಿರ್ಮಮನದ ವೇಳೆ ತಂಡಕ್ಕೆ ಒಂದು ಪ್ರಶಸ್ತಿ ಗೆಲ್ಲಿಸಿಕೊಡಲು ಪಣತೊಟ್ಟಿದ್ದಾರೆ. ಈ ಬಾರಿ ತಂಡದಲ್ಲಿ ಯುವ ಆಟಗಾರ್ತಿಯರೂ ಕೂಡ ಕಾಣಿಸಿಕೊಂಡಿರುವುದರಿಂದ ಲಂಕಾ ಕೂಡ ಬಲಿಷ್ಠವಾಗಿ ಗೋಚರಿಸಿದೆ.