ಸಿನ್ಸಿನಾಟಿ: ಪೋಲೆಂಡ್ ತಾರೆ ಇಗಾ ಸ್ವಿಯಾಟೆಕ್(Iga Swiatek) ಸಿನ್ಸಿನಾಟಿ ಓಪನ್ ಟೆನಿಸ್(Cincinnati Open title) ಮಹಿಳಾ ಸಿಂಗಲ್ಸ್ ವಿಭಾಗದ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮೂರನೇ ಶ್ರೇಯಾಂಕಿತೆ ಸ್ವಿಯಾಟೆಕ್ ಇದು ಚೊಚ್ಚಲ ಸಿನ್ಸಿನಾಟಿ ಪ್ರಶಸ್ತಿ ಎನಿಸಿದೆ. ಸ್ವಿಯಾಟೆಕ್ ಸೆಮಿಫೈನಲ್‌ನಲ್ಲಿ ಎಲೆನಾ ರಿಬಾಕಿನಾ ಅವರನ್ನು ಮಣಿಸಿ ಮೊದಲ ಸಲ ಈ ಕೂಟದ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಫೈನಲ್‌ನಲ್ಲಿಯೂ ಅಮೋಘ ಆಟವಾಡಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಈ ವರ್ಷದ ಎರಡನೇ 'ಡಬ್ಲ್ಯುಟಿಎ-1000' ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಜಾಸ್ಮಿನ್ ಪೌಲಿನಿ ಅವರನ್ನು 7-5, 6-4 ನೇರ ಸೆಟ್ ಅಂತರದಿಂದ ಮಣಿಸಿದರು. ಅವರ ಈ ಗೆಲುವು ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಯುಎಸ್ ಓಪನ್ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇತ್ತೀಚೆಗೆ ಸ್ವಿಯಾಟೆಕ್ ಚೊಚ್ಚಲ ವಿಂಬಲ್ಡನ್ ಕಿರೀಟ ಕೂಡ ಗೆದ್ದಿದ್ದರು.
ಸ್ವಿಯಾಟೆಕ್ ಅವರ 2025 ರ ಋತುವಿನ ಮೂರನೇ ಮತ್ತು ಅವರ ವೃತ್ತಿಜೀವನದ 24 ನೇ ಪ್ರಶಸ್ತಿಯಾಗಿದೆ. ಫೈನಲ್ ಪಂದ್ಯವು ಮನರಂಜನೆಯ ಪಂದ್ಯವಾಗಿತ್ತು. ಇಬ್ಬರೂ ಆಟಗಾರರು ಅತ್ಯಂತ ಕಠಿಣ ಹೋರಾಟ ನಡೆಸಿದರು. ಪೌಲಿನಿ ಉತ್ತಮ ಆರಂಭ ಪಡೆಯುವ ಮೂಲಕ 3-0 ಮುನ್ನಡೆ ಸಾಧಿಸಿದರು. ಆದಾಗ್ಯೂ, ಇದೇ ಲಯ ಮುಂದುವರಿಸುವಲ್ಲಿ ವಿಫಲರಾದರು. ಮೊದಲ ಸೆಟ್ 56 ನಿಮಿಷಗಳ ತನಕ ಸಾಗಿತು.
ಸ್ವಿಯಾಟೆಕ್ ಮತ್ತು ಪೌಲಿನಿ ನಡುವಿನ ಆರನೇ ಮುಖಾಮುಖಿ ಇದಾಗಿತ್ತು. ಎಲ್ಲಾ ಆರು ಮುಖಾಮುಖಿಗಳನ್ನು ಸ್ವಿಯಾಟೆಕ್ ಗೆದ್ದಿದ್ದಾರೆ. ಕೊನೆಯ ಬಾರಿಗೆ ಅವರು ಪರಸ್ಪರ ಮುಖಾಮುಖಿಯಾಗಿದ್ದು 2024 ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ.