ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ 'ಸಿಂಧೂರ'; 7 ವಿಕೆಟ್‌ ಭರ್ಜರಿ ಜಯ

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯನ್ನು ಖಂಡಿಸಿ ಭಾರತದ ಹಲವು ಕ್ರಿಕೆಟ್‌ ಅಭಿಮಾನಿಗಳು, ರಾಜಕೀಯ ಗಣ್ಯರು ಪಾಕ್‌ ಜತೆಗಿನ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ಪಾಕಿಸ್ತಾನ ವಿರುದ್ಧ ಆಡಲಿಳಿದ ಭಾರತ, ಪಾಕ್‌ ಸದೆಬಡಿದು ಅಭಿಮಾನಿಗಳ ಕೋಪವನ್ನು ತಣ್ಣಗಾಗುವಂತೆ ಮಾಡಿದರು.

ದುಬೈ: ಭಾರತೀಯ ಅಭಿಮಾನಿಗಳ ಭಾರೀ ವಿರೋಧದ ಒತ್ತಡದ ಮಧ್ಯೆಯೂ, ಭಾನುವಾರ ನಡೆದ ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಯಲ್ಲಿ ಪಾಕಿಸ್ತಾನ(IND vs PAK) ವಿರುದ್ಧ ಕಣಕ್ಕಿಳಿದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. 7 ವಿಕೆಟ್‌ ಅಂತರದಿಂದ ಗೆದ್ದ ಟೀಮ್‌ ಇಂಡಿಯಾ 'ಎ' ಗುಂಪಿನಿಂದ ಬಹುತೇಕ ಸೂಪರ್‌-4ಗೆ ಎಂಟ್ರಿಕೊಟ್ಟಿದೆ. ಗುಂಪಿನ ಅಂತಿಮ ಪಂದ್ಯವನ್ನು ಶುಕ್ರವಾರ (ಸೆ.19) ಒಮಾನ್‌ ವಿರುದ್ಧ ಆಡಲಿದೆ.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಕೆಟ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನ, ಬೃಹತ್‌ ಮೊತ್ತ ಪೇರಿಸುವ ಮೂಲಕ ಭಾರತಕ್ಕೆ ಒತ್ತಡ ಹೇರುವ ಯೋಜನೆಯಲ್ಲಿತ್ತು. ಆದರೆ ಚೈನಾಮನ್‌ ಕುಲ್‌ದೀಪ್‌ ಯಾದವ್‌ ಸ್ಪಿನ್‌ ದಾಳಿಗೆ ಪತರಗುಟ್ಟಿದ ಪಾಕ್‌ 9 ವಿಕೆಟ್‌ಗೆ 127 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ಅಭಿಷೇಕ್‌ ಶರ್ಮಾ ಇನ್ನಿಂಗ್ಸ್‌ನ ಮೊದಲೆರಡು ಎಸೆತಗಳನ್ನು ಬೌಂಡರಿ, ಸಿಕ್ಸರ್‌ಗಟ್ಟಿದರು. ಇವರ ಜತೆಗಾರ ಶುಭಮನ್‌ ಗಿಲ್‌(10) ಬಡಬಡನೆ ಎರಡು ಬೌಂಡರಿ ಬಾರಿಸಿ ಸೈಮ್ ಅಯೂಬ್ ಅವರ ಎಸೆತದಲ್ಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪ್‌ ಔಟ್‌ ಆದರು. 13 ಎಸೆತ ಎದುರಿಸಿದ ಅಭಿಷೇಕ್‌ 4 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 31 ರನ್‌ ಚಚ್ಚಿದರು. ಇವರ ವಿಕೆಟ್‌ ಕೂಡ ಅಯೂಬ್ ಪಾಲಾಯಿತು.

ಆರಂಭಿಕರಿಬ್ಬರ ವಿಕೆಟ್‌ ಪತನಗೊಂಡರೂ ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಈ ಜೋಡಿ 3ನೇ ವಿಕೆಟ್‌ಗೆ 56 ರನ್‌ ಜತೆಯಾಟ ನಡೆಸಿತು. ತಂಡ ಗೆಲುವಿನ ಹೊಸ್ತಿಲಲ್ಲಿದ್ದಾಗ ತಿಲಕ್‌ ವರ್ಮ(31) ಔಟಾದರು. ಗೆಲುವಿಗೆ 3 ರನ್‌ ಬೇಕಿದ್ದಾಗ ಸೂರ್ಯಕುಮಾರ್‌ ಸಿಕ್ಸರ್‌ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 37 ಎಸೆತ ಎದುರಿಸಿದ ಸೂರ್ಯ ಅಜೇಯ 47 ರನ್‌ ಗಳಿಸಿದರು. ತಂಡದ ಈ ಗೆಲುವಿನೊಂದಿಗೆ ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನೂ ಸ್ಮರಣೀಯಗೊಳಿಸಿದರು.

ಪಾಕ್‌ಗೆ ಆಸರೆಯಾದ ಫರ್ಹಾನ್- ಅಫ್ರಿದಿ ಆಸರೆ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ಹಾರ್ದಿಕ್‌ ಪಾಂಡ್ಯ ಆಘಾತವಿಕ್ಕಿದರು. ತಾವೆಸೆದ ಮೊದಲ ಎಸೆತದಲ್ಲಿ ವೈಡ್‌ ಮೂಲಕ ರನ್‌ ಬಿಟ್ಟುಕೊಟ್ಟರೂ ಮುಂದಿನ ಎಸೆತದಲ್ಲಿ ಸೈಮ್ ಅಯೂಬ್‌(0) ಪೆವಿಲಿಯನ್‌ ದಾರಿ ತೋರಿಸಿದರು. ಮುಂದಿನ ಎಸೆತದಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರು ಮೊಹಮ್ಮದ್‌ ಹ್ಯಾರಿಸ್‌(3) ವಿಕೆಟ್‌ ಕಿತ್ತರು. ಇಲ್ಲಿಂದ ಪಾಕ್‌ ಕುಸಿತ ಕಾಣಲಾರಂಭಿಸಿತು. ಇನ್ನೇನು 100ರೊಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ ಸಾಹಿಬ್ಜಾದಾ ಫರ್ಹಾನ್ ಮತ್ತು ಅಂತಿಮ ಹಂತದಲ್ಲಿ ಸಿಡಿದು ನಿಂತ ವೇಗಿ ಶಾಹೀನ್ ಅಫ್ರಿದಿ ಬ್ಯಾಟಿಂಗ್‌ ನೆರವಿನಿಂದ ಪಾಕ್‌ 100ರ ಗಡಿ ದಾಟುವಂತಾಯಿತು.

44 ಎಸೆತ ಎದುರಿಸಿದ ಸಾಹಿಬ್ಜಾದಾ 3 ಸಿಕ್ಸರ್‌ ಮತ್ತು ಒಂದು ಬೌಂಡರಿ ನೆರವಿನಿಂದ 40 ರನ್‌ ಬಾರಿಸಿದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಶಾಹೀನ್ ಅಫ್ರಿದಿ ಕೇವಲ 16 ಎಸೆತಗಳಿಂದ ಅಜೇಯ 33 ರನ್‌ ಕಲೆಹಾಕಿದರು. ಸಿಡಿದದ್ದು ನಾಲ್ಕು ಸಿಕ್ಸರ್. ಭಾರತ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಕುಲ್‌ದೀಪ್‌ ಯಾದವ್‌ 18 ರನ್‌ಗೆ 3 ವಿಕೆಟ್‌ ಕಿತ್ತರು. ಉಳಿದಂತೆ ಅಕ್ಷರ್‌ ಪಟೇಲ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ತಲಾ ಎರಡು ವಿಕೆಟ್‌ ಉರುಳಿಸಿದರು. ವರುಣ್‌ ಚರ್ಕವರ್ತಿ ಮತ್ತು ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದರು.

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯನ್ನು ಖಂಡಿಸಿ ಭಾರತದ ಹಲವು ಕ್ರಿಕೆಟ್‌ ಅಭಿಮಾನಿಗಳು, ರಾಜಕೀಯ ಗಣ್ಯರು ಪಾಕ್‌ ಜತೆಗಿನ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ಪಾಕಿಸ್ತಾನ ವಿರುದ್ಧ ಆಡಲಿಳಿದ ಭಾರತ, ಪಾಕ್‌ ಸದೆಬಡಿದು ಅಭಿಮಾನಿಗಳ ಕೋಪವನ್ನು ತಣ್ಣಗಾಗುವಂತೆ ಮಾಡಿದರು.