ನವದೆಹಲಿ: 2026ರಲ್ಲಿ(Asian Games 2026) ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ಪುರುಷರ ಫುಟ್ಬಾಲ್(India men’s football team) ತಂಡವನ್ನು ಕಳುಹಿಸುವ ಸಾಧ್ಯತೆ ಕಡಿಮೆ. ಆದರೆ ಬೆಳ್ಳಿ ಗೆರೆಯ ನಿರೀಕ್ಷೆಯಲ್ಲಿರುವ ಮಹಿಳಾ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸುವ ನಿರೀಕ್ಷೆಯಿದೆ. ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ಮಾನದಂದ ಬದಲಿಸಿದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಪದಕ ಗೆಲ್ಲಬಲ್ಲ ಕ್ರೀಡಾಪಟುಗಳನ್ನಷ್ಟೇ ಆಯ್ಕೆ ಮಾಡುವುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.
2024 ರಲ್ಲಿ ಕತಾರ್‌ನಲ್ಲಿ ನಡೆದ ಏಷ್ಯನ್ ಕಪ್‌ನ ಕೊನೆಯ ಆವೃತ್ತಿಯಲ್ಲಿ ಪುರುಷರ ತಂಡವು ಗುಂಪು ಹಂತದಲ್ಲಿಯೇ ಹೊರಬಿತ್ತು ಮತ್ತು ಏಷ್ಯಾದಲ್ಲಿ 24 ನೇ ಸ್ಥಾನದಲ್ಲಿದೆ (ವಿಶ್ವದಲ್ಲಿ 134 ನೇ ಸ್ಥಾನ). ಏತನ್ಮಧ್ಯೆ, ಮಹಿಳಾ ತಂಡವು ಏಷ್ಯಾದಲ್ಲಿ 12 ನೇ ಸ್ಥಾನದಲ್ಲಿದೆ ಮತ್ತು ಕನಿಷ್ಠ ಬೆಳ್ಳಿ ಪದಕ ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ಮಹಿಳಾ ತಂಡವನ್ನು ಮಾತ್ರ ಪರಿಗಣಿಸುವ ಸಾಧ್ಯತೆ ಇದೆ.
ಭಾರತದ ಪುರುಷರ ತಂಡವು 1951 ಮತ್ತು 1962 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. 1970 ರಲ್ಲಿ ಕಂಚಿನ ಪದಕವನ್ನು ಗೆದ್ದಿತ್ತು. ಇದಾದ ಬಳಿಕ 1982ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ತಂಡದ ದೊಡ್ಡ ಸಾಧನೆ. ಆ ಬಳಿಕ ತಂಡ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ IND vs BAN: ಅರ್ಧಶತಕ ಬಾರಿಸಿ ಯುವರಾಜ್ ಸಿಂಗ್ ದಾಖಲೆ ಮುರಿದ ಅಭಿಷೇಕ್ ಶರ್ಮಾ!
ಬುಧವಾರ ತನ್ನ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಂಡಿರುವ ಕ್ರೀಡಾ ಸಚಿವಾಲಯ, ಏಷ್ಯಾಡ್‌ಗೆ ಆಯ್ಕೆಯಾಗಬೇಕಿದ್ದರೆ ಏಷ್ಯನ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಅಗ್ರ-6, ತಂಡಗಳ ಸ್ಪರ್ಧೆಯಲ್ಲಿ ಅಗ್ರ-8ರೊಳಗೆ ಸ್ಥಾನ ಪಡೆದಿರಬೇಕು ಎಂಬ ಷರತ್ತು ವಿಧಿಸಿದೆ. ಇನ್ನು ಕಾಮನ್‌ವೆಲ್ತ್, ಪ್ಯಾರಾ ಏಷ್ಯನ್, ಏಷ್ಯನ್ ಒಳಂಗಾಣ, ಏಷ್ಯನ್ ಬೀಚ್ ಕ್ರೀಡಾಕೂಟ, ಯುವ ಒಲಿಂಪಿಕ್ಸ್, ಏಷ್ಯನ್ ಯುವ ಕ್ರೀಡಾಕೂಟಗಳಲ್ಲಿನ ಪ್ರದರ್ಶನಗಳನ್ನು ಆಯ್ಕೆಗೆ ಪರಿಗಣಿಸುವುದಾಗಿಯೂ ಸಚಿವಾಲಯ ತಿಳಿಸಿದೆ.