ಅಹಮದಾಬಾದ್: ಏಷ್ಯಾಕಪ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಈಗ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಟೆಸ್ಟ್(IND vs WI 1st Test) ಸರಣಿಯನ್ನಾಡಲು ಸಜ್ಜಾಗಿದೆ. 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಶುಭಮನ್ ಗಿಲ್ ಪಡೆ, ಗುರುವಾರ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ. 2 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಅಹಮದಾಬಾದ್(Ahmedabad) ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ವೆಸ್ಟ್ ಇಂಡೀಸ್ ತಂಡ 7 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಆಡಲಿದೆ. 2018ರಲ್ಲಿ ಕೊನೆಯ ಬಾರಿಗೆ ವಿಂಡೀಸ್ ಭಾರತದಲ್ಲಿ ಟೆಸ್ಟ್ ಸರಣಿ ಆಡಿತ್ತು. ಕೊಹ್ಲಿ ನೇತೃತ್ವ ಭಾರತ 2-0 ಅಂತರದಿಂದ ಸರಣಿ ಕ್ಲೀನ್‌ಸ್ವಪ್ ಮಾಡಿತ್ತು. ಕೊಹ್ಲಿ, ರೋಹಿತ್ ಮತ್ತು ಅಶ್ವಿನ್ ಟೆಸ್ಟ್ ಕ್ರಿಕೆಟ್ ವಿದಾಯ ಹೇಳಿದ ಬಳಿಕ ಭಾರತ ತಂಡ ತವರಿನಲ್ಲಿ ಆಡುತ್ತಿರುವ ಮೊದಲ ಸರಣಿಯೂ ಇದಾಗಿದೆ.
ರೋಸ್ಟನ್ ಚೇಸ್ ತಂಡದ ನಾಯಕತ್ವ ವಹಿಸಲಿದ್ದು, ಶಾಯ್ ಹೋಪ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಆಡಲಿದ್ದಾರೆ. ಭಾರತಕ್ಕೆ ಕಠಿಣ ಸವಾಲು ನೀಡಬೇಕಿದ್ದರೆ ವಿಂಡೀಸ್ ಸ್ಪಿನ್ ಅಸ್ತ್ರ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿಂಡೀಸ್ ತಂಡದ ಸೀಮಿತ ಓವರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿದ್ದರೂ, ಟೆಸ್ಟ್‌ನಲ್ಲಿ ಉತ್ತಮ ಆಟವಾಡುತ್ತಿದೆ.
ಅಶ್ವಿನ್ ಗೈರಿನಲ್ಲಿ ಜಡೇಜಾ ಸ್ಪಿನ್ ವಿಭಾಗದ ಸಾರಥ್ಯ ವಹಿಸಲಿದ್ದು, ರಿಷಭ್ ಪಂತ್ ಗೈರಿನಲ್ಲಿ ಉಪನಾಯಕನ ಜವಾಬಾರಿಯನ್ನೂ ಹೊತ್ತಿದ್ದಾರೆ. ಧೃವ್ ಜುರೆಲ್ ಕೀಪಿಂಗ್ ಮಾಡಲಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬುಮ್ರಾ ವೇಗಿಗಳಾಗಿ ಕಾಣಿಸಿಕೊಂಡಿದ್ದಾರೆ. ಆಡುವ ಬಳಗದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಟ್ಟು 100 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ವೆಸ್ಟ್ ಇಂಡೀಸ್ ತಂಡವೇ ಸ್ಪಷ್ಟ ಮೇಲುಗೈ ಸಾಧಿಸಿದೆ. 100 ಟೆಸ್ಟ್ ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ತಂಡವು 30 ಪಂದ್ಯಗಳಲ್ಲಿ ಗೆದ್ದರೆ, ಭಾರತ ತಂಡವು 23 ಪಂದ್ಯಗಳಲ್ಲಿ ಜಯಿಸಿದೆ. 47 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ತವರಿನಲ್ಲಿ ವಿಂಡೀಸ್ ವಿರುದ್ಧ ಭಾರತ ಸೋಲು ಕಾಣದೆ 31 ವರ್ಷಗಳಾಗಿದೆ. ಕೊನೆಯ ಬಾರಿಗೆ ಸೋತದ್ದು 1994ರ ಮೊಹಾಲಿ ಟೆಸ್ಟ್‌ನಲ್ಲಿ.
ಇದನ್ನೂ ಓದಿ India vs West Indies Tests: ನೋ ರೆಸ್ಟ್; ವಿಂಡೀಸ್ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಭಾರತ ತಂಡ
ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧೃವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಎನ್.ಜಗದೀಶನ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಕುಲ್ದೀಪ್ ಯಾದವ್.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್