ಲಂಡನ್: ಇಂಗ್ಲೆಂಡ್(IND vs ENG 5th Test) ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ದಿಗ್ಗಜರ ಜತೆ ವಿಶೇಷ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಭಾರತದ ಪರ ವಿದೇಶಿ ಪಿಚ್‌ಗಳಲ್ಲಿ 100 ವಿಕೆಟ್ ಸಾಧನೆ ಮಾಡಿದ 7ನೇ ವೇಗದ ಬೌಲರ್ ಎನಿಸಿದ್ದಾರೆ. ಪ್ರಸಕ್ತ ಸರಣಿಯಲ್ಲಿ (5 ಪಂದ್ಯ, 9 ಇನಿಂಗ್ಸ್) 20* ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮೂರನೇ ದಿನದಾಟದ ಕೊನೆಯ ಎಸೆತದಲ್ಲಿ ಕ್ರಾಲಿ ವಿಕೆಟ್ ಪಡೆದ ಮೂಲಕ ಸಿರಾಜ್ ಭಾರತ ಪರ 27 ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಗಳಿಸಿದರು. ಕಪಿಲ್ ದೇವ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ನಂತರ ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ 100+ ವಿಕೆಟ್ ಪಡೆದ ಏಳನೇ ಭಾರತೀಯ ವೇಗದ ಬೌಲರ್ ಎನಿಸಿಕೊಂಡರು.
ಭಾರತ ಪರ ವಿದೇಶಿ ಪಿಚ್‌ಗಳಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಕನ್ನಡಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹರಸರಿನಲ್ಲಿದೆ. ಅವರು 69 ಪಂದ್ಯಗಳಲ್ಲಿ 269 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ತವರಿನಿಂದ ಆಚೆ ಆಡಿರುವ 27 ಟೆಸ್ಟ್‌ಗಳಲ್ಲಿ ಸಿರಾಜ್ ಒಟ್ಟು 100 ವಿಕೆಟ್ ಪೂರ್ತಿಗೊಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 41 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅವರು, ನಾಲ್ಕು ಬಾರಿ 5 ವಿಕೆಟ್ ಗೊಂಚಲು ಸಹಿತ 120 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ IND vs ENG 5th Test: ರೋಚಕ ಘಟ್ಟದಲ್ಲಿ ಓವಲ್ ಟೆಸ್ಟ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ತೆಂಡುಲ್ಕರ್-ಆ್ಯಂಡರ್‌ಸನ್ ಸರಣಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ 4ನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿರುವ ಇಂಗ್ಲೆಂಡ್, ಸೋಮವಾರ ಗೆಲ್ಲಬೇಕಿದ್ದರೆ 35 ರನ್ ಗಳಿಸಬೇಕಿದೆ. ಭಾರತಕ್ಕೆ 4 ವಿಕೆಟ್‌ನ ಅಗತ್ಯವಿದೆ. ಭಾನುವಾರವೇ ಮುಕ್ತಾಯಗೊಳ್ಳಬೇಕಿದ್ದ ಪಂದ್ಯ ಮಳೆಯಿಂದ ಸೋಮವಾರಕ್ಕೆ ಮುಂದುವರಿಯಿತು.