ನವದೆಹಲಿ: ಕಳೆದ 14 ವರ್ಷದಿಂದ ಬಾಕಿ ಉಳಿದುಕೊಂಡಿದ್ದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ(National Sports Governance Bill) ಕೊನೆಗೂ ಮುಕ್ತಿ ಸಿಕ್ಕಿದೆ. ವಿರೋಧ ಪಕ್ಷದ ತೀವ್ರ ಗದ್ದಲದ ನಡುವೆಯೂ ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾಯಿತ ಸದಸ್ಯೆ ಸ್ಪೀಕರ್ ಸಂಧ್ಯಾ ರೇ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಎರಡೂ ಮಸೂದೆಗಳನ್ನು ಮಂಡಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ವಿರೋಧ ಪಕ್ಷಗಳ ಪ್ರತಿಭಟನೆಯ–ಗದ್ದಲದ ನಡುವೆಯೇ ಮಸೂದೆಗೆ ಒಪ್ಪಿಗೆ ಪಡೆಯಲಾಯಿತು. ಗದ್ದಲದ ನಂತರ ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಪುನರಾರಂಭವಾದಾಗ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ (ತಿದ್ದುಪಡಿ) ಮಸೂದೆಯನ್ನೂ ಅಂಗೀಕರಿಸಲಾಯಿತು.
ಕ್ರೀಡಾ ಆಡಳಿತ ಮಸೂದೆಯು ಭಾರತದ ವಿವಿಧ ಕ್ರೀಡಾ ಆಡಳಿತಗಾರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ, ಆದರೆ ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆಯು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ಸೂಚಿಸಿದಂತೆ ದೇಶದ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಗೆ ಹೆಚ್ಚಿನ ಕಾರ್ಯಾಚರಣಾ ಸ್ವಾತಂತ್ರ್ಯವನ್ನು ಒದಗಿಸುತ್ತದೆ.
Speaking on ‘The National Sports Governance Bill and The National Anti-Doping (Amendment) Bill 2025' in Lok Sabha.
— Dr Mansukh Mandaviya (@mansukhmandviya) August 11, 2025
https://t.co/nzvniWGFks
ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ (ತಿದ್ದುಪಡಿ) ಮಸೂದೆಯು, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ) ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ದಾರಿಯಾಗಲಿದೆ ಎಂದು ವಿಶ್ವ ಉದ್ದೀಪನದ ಮದ್ದುಸೇವನೆ ತಡೆ ಘಟಕ (ವಾಡಾ) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲವು ಬದಲಾವಣೆಗಳನ್ನು ಇದರಲ್ಲಿ ತರಲಾಗಿದೆ.
"ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ, 2025, ಕಾರ್ಯಾಚರಣೆಗಳು, ತನಿಖೆಗಳು ಮತ್ತು ಜಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿ ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ ಸಾಂಸ್ಥಿಕ ಮತ್ತು ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ" ಎಂದು ಮಸೂದೆಯ ಉದ್ದೇಶಗಳು ಹೇಳಿವೆ. ಮಸೂದೆಯ ಅಂಗೀಕಾರದ ವೇಳೆ ವಿರೋಧ ಪಕ್ಷಗಳು ಭಾಗಿಯಾಗದೇ ಇರುವುದು ದುರದೃಷ್ಟಕರ’ ಎಂದು ಮಾಂಡವೀಯ ಅಸಮಾಧಾನ ವ್ಯಕ್ತಪಡಿಸಿದರು.
"ಈ ಮಸೂದೆಯು ಸ್ವಾತಂತ್ರ್ಯದ ನಂತರದ ಕ್ರೀಡೆಯಲ್ಲಿನ ಏಕೈಕ ಅತಿದೊಡ್ಡ ಸುಧಾರಣೆಯಾಗಲಿದೆ. ಈ ಈ ಮಸೂದೆಯು ಕ್ರೀಡಾ ಒಕ್ಕೂಟಗಳಲ್ಲಿ ಹೊಣೆಗಾರಿಕೆ, ನ್ಯಾಯ ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ" ಎಂದು ಲೋಕಸಭೆಯಲ್ಲಿ ಕ್ರೀಡಾ ಆಡಳಿತ ಮಸೂದೆಯ ಕುರಿತು ಮಾಂಡವಿಯಾ ಹೇಳಿದರು.