ಟೋಕಿಯೊ: ಅವಳಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ(World Athletics Championships) ಜಾವೆಲಿನ್ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ. 84.03 ಮೀ. ಎಸೆತದೊಂದಿಗೆ 8ನೇ ಸ್ಥಾನ ಪಡೆದರು. 2012 ರ ಒಲಿಂಪಿಕ್ ಚಾಂಪಿಯನ್ ಟ್ರಿನಿಡಾಡ್-ಟೊಬ್ಯಾಗೊದ ಕೆಶಾರ್ನ್ ವಾಲ್ಕಾಟ್ ನಾಲ್ಕನೇ ಪ್ರಯತ್ನದಲ್ಲಿ 88.16 ಮೀ. ದೂರ ಎಸೆದು ಚಿನ್ನದ ಪದಕಕ್ಕೆ ಕೊರಳೊಡಿದ್ದರು. ಈ ಕೂಟದಲ್ಲಿ ವಾಲ್ಕಾಟ್‌ಗೆ ಒಲಿದ ಚೊಚ್ಚಲ ಪದಕ ಇದಾಗಿದೆ. ಗ್ರೆನೇಡಾದ ಆಂಡರ್‌ಸನ್ ಪೀಟರ್ಸ್(87.38) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಮೆರಿಕದ ಕರ್ಟಿಸ್ ಥಾಂಪ್ಸನ್(86.67) ಕಂಚಿನ ಪದಕ ಗೆದ್ದರು.
2012ರ ಬಳಿಕ ಯಾವುದೇ ಪದಕ ಗೆಲ್ಲದ ಕೆಶಾರ್ನ್ ವಾಲ್ಕಾಟ್, ಯಾರೂ ನಿರೀಕ್ಷೆ ಮಾಡಂತೆ ಪದಕ ಗೆದ್ದು ಬೆರಗುಗೊಳಿಸಿದರು. ಮೊದಲ ಪ್ರಯತ್ನದಲ್ಲಿ 81.22 ಮೀ., ಎರಡನೇ ಪ್ರಯತ್ನದಲ್ಲಿ 87.83, ಮೂರನೇ ಪ್ರಯತ್ನದಲ್ಲಿ 81.65, ನಾಲ್ಕನೇ ಪ್ರಯತ್ನದಲ್ಲಿ 88.16 ಎಸೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಭಾರತದ ಇನೋರ್ವ ಜಾವೆಲಿನ್ ಪಟು ಸಚಿನ್ ಯಾದವ್ ಪದಕ ಗೆಲ್ಲದಿದ್ದರೂ, ವೈಯಕ್ತಿಕ ಶ್ರೇಷ್ಠ ಸಾಧನೆ 86.27 ಮೀ. ದೂರ ಎಸೆದು ತಮ್ಮ ಅತ್ಯುತ್ತಮ ಪ್ರದರ್ಶನ ತೋರಿದರು. ಈ ಮೂಲಕ ಮುಂಬರುವ ಟೂರ್ನಿಯಲ್ಲಿ ಭಾರತದ ಭರವಸೆಯ ಜಾವೆಲಿನ್ ಪಟು ಆಗಿ ಗುರುತಿಸಿಕೊಂಡರು. ಹೋದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕೂಟದಲ್ಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನದ ಅರ್ಷದ್ ನದೀಂ ಇಲ್ಲಿ ಸಂಪೂರ್ಣ ವಿಫಲರಾದರು. 12 ಮಂದಿ ಸ್ಪರ್ಧಿಗಳ ಪೈಕಿ 10ನೇ ಸ್ಥಾನ ಪಡೆದರು. ಜೂಲಿಯನ್ ವೆಬರ್ ಕೂಡ ಪದಕ ವಂಚಿತರಾದರು.
27 ವರ್ಷದ ನೀರಜ್ ಬುಧವಾರ ನಡೆದಿದ್ದ ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಮೊದಲ ಯತ್ನದಲ್ಲೇ 84.85 ಮೀ. ದೂರ ಭರ್ಜಿ ಎಸೆದು ಫೈನಲ್ ಪ್ರವೇಶಿಸಿದ್ದರು. ಅರ್ಹತಾ ಸುತ್ತಿನಲ್ಲಿ ಗ್ರೆನೇಡಾದ ಆಂಡರ್‌ಸನ್ ಪೀಟರ್ಸ್ ಸರ್ವಾಧಿಕ 89.53 ದೂರ ಎಸೆದು ಅತಿ ಹೆಚ್ಚು ದೂರ ಥ್ರೋ ಮಾಡಿದ್ದ ಅವರು ಫೈನಲ್‌ನಲ್ಲಿ 87.38 ಮೀ. ದೂರ ಎಸೆಯಲಷ್ಟೇ ಶಕ್ತವಾದರು.