ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL vs PAK: ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಪಾಕ್‌; ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿ ಸಾಧ್ಯತೆ

ಲೀಗ್‌ ಮತ್ತು ಸೂಪರ್‌-4ನಲ್ಲಿ ಮುಖಾಮುಖಿಯಾಗಿರುವ ಭಾರತ ಮತ್ತು ಪಾಕಿಸ್ತಾನ, ಮತ್ತೆ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ. ಪಾಕಿಸ್ತಾನ ತನ್ನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದರೆ, ಭಾರತ ತಂಡ ಬಾಂಗ್ಲಾ ಎದುರು ಗೆದ್ದರೆ ಆಗ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವುದು ಖಚಿತ.

ದುಬೈ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೀಲಂಕಾ(SL vs PAK) ವಿರುದ್ಧ 5 ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿದ ಪಾಕಿಸ್ತಾನ, ಏಷ್ಯಾ ಕಪ್‌( Asia Cup 2025) ಫೈನಲ್‌ ರೇಸ್‌ ಜೀವಂತವಾಗಿರಿಸಿಕೊಂಡಿದೆ. ಸತತ ಎರಡು ಸೋಲು ಕಂಡ ಲಂಕಾದ ಫೈನಲ್‌ ಬಾಗಿಲು ಬಹುತೇಕ ಬಂದ್‌ ಆಗಿದೆ. ಅಂತಿಮ ಪಂದ್ಯದಲ್ಲಿ ಲಂಕಾ ಭಾರತ ವಿರುದ್ಧ ಗೆದ್ದರೂ, ಉಳಿದ ತಂಡಗಳ ಫಲಿತಾಂಶ ಮತ್ತು ಪವಾಡವೊಂದು ಸಂಭವಿಸಿದರಷ್ಟೇ ಫೈನಲ್‌ನ ಕ್ಷೀಣ ಅವಕಾಶ ಮಾತ್ರ ಉಳಿದುಕೊಂಡಿದೆ.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಸೂಪರ್‌-4 ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್‌ ನಾಯಕ ಸಲ್ಮಾನ್‌ ಆಘಾ ಮೊದಲು ಬೌಲಿಂಗ್‌ ಮಾಡಲು ನಿರ್ಧರಿಸಿದರು. ಅದರಂತೆ ನಾಯಕನ ಆಯ್ಕೆಯನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಘಾತಕ ದಾಳಿ ಮೂಲಕ ಲಂಕಾವನ್ನು 133ರನ್‌ಗೆ ಕಟ್ಟಿಹಾಕಿದರು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕ್‌ ತಂಡ 18 ಓವರ್‌ಗಳಲ್ಲಿ 5 ವಿಕೆಟ್‌ಗೆ 138 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಪಾಕ್‌ ನಾಟಕೀಯ ಕುಸಿತ

ಚೇಸಿಂಗ್‌ ವೇಳೆ ಪಾಕ್‌ಗೆ ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್(24) ಮತ್ತು ಫಖಾರ್‌ ಜಮಾನ್‌(17) ಉತ್ತಮ ಆರಂಭ ನೀಡಿದರು. ಉತ್ತಮ ಸ್ಥಿತಿಯಲ್ಲಿದ್ದ ಪಾಕ್‌, ಆರಂಭಿಕ ಜೋಡಿಯ ವಿಕೆಟ್‌ ಪತನನದ ಬಳಿಕ ಹಠಾತ್‌ ನಾಟಕೀಯ ಕುಸಿತ ಕಂಡಿತು. ಕೇವಲ 12 ರನ್‌ ಅಂತರದಲ್ಲಿ 4 ವಿಕೆಟ್‌ ಪತನಗೊಂಡಿತು. ಮಹೀಶ್‌ ತೀಕ್ಷಣ ಒಂದೇ ಓವರ್‌ನಲ್ಲಿ ಆರಂಭಿಕರಿಬ್ಬರ ವಿಕೆಟ್‌ ಕಿತ್ತರೆ, ಹಸರಂಗ ಸತತ ಎರಡು ಓವರ್‌ನಲ್ಲಿ ಸೈಮ್ ಅಯೂಬ್(2) ಮತ್ತು ನಾಯಕ ಸಲ್ಮಾನ್‌ ಆಘಾ(5)ರನ್ನು ಪೆವಿಲಿಯನ್‌ಗೆ ಅಟ್ಟಿದರು.

ಬಳಿಕ ಬಂದ ಮೊಹಮ್ಮದ್‌ ಹ್ಯಾರಿಸ್‌ ಆಟ ಕೂಡ ಹೆಚ್ಚು ಹೊತ್ತು ಸಾಗಲಿಲ್ಲ. 13 ರನ್‌ ಗಳಿಸಿದ್ದ ವೇಳೆ ದುಶ್ಮಂತ ಚಮೀರಾ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಇದರೊಂದಿಗೆ ಪಾಕ್‌ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಈ ವೇಳೆ ದೊಡ್ಡ ಹೊಡೆತಕ್ಕೆ ಮುಂದಾಗದೆ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆಸರೆಯಾದ ಹುಸೇನ್ ತಲಾತ್ ಮತ್ತು ನವಾಝ್‌ ಎಸೆತಕ್ಕೊಂದರಂತೆ ರನ್‌ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ ಗೆಲುವಿನ ದಡ ಸೇರಿಸಿದರು. ಈ ಜೋಡಿ ಮುರಿಯದ 6ನೇ ವಿಕೆಟ್‌ಗೆ 58ರನ್‌ ಅತ್ಯಮೂಲ್ಯ ಜತೆಯಾಟ ನಡೆಸಿತು. ಗೆಲುವಿಗೆ 8 ರನ್‌ ಬೇಕಿದ್ದಾಗ ನವಾಝ್‌ 2 ಸಿಕ್ಸರ್‌ ಬಾರಿಸಿ ತಂಡದ ಗೆಲುವನ್ನು ಸಾರಿದರು. ನವಾಝ್‌ 38* ರನ್‌ ಬಾರಿಸಿದರೆ, ಹುಸೇನ್ 32* ರನ್‌ ಗಳಿಸಿದರು.

ಫೈನಲ್‌ನಲ್ಲೂ ಭಾರತ-ಪಾಕ್‌ ಮುಖಾಮುಖಿ?

ಲೀಗ್‌ ಮತ್ತು ಸೂಪರ್‌-4ನಲ್ಲಿ ಮುಖಾಮುಖಿಯಾಗಿರುವ ಭಾರತ ಮತ್ತು ಪಾಕಿಸ್ತಾನ, ಮತ್ತೆ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ. ಪಾಕಿಸ್ತಾನ ತನ್ನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದರೆ, ಭಾರತ ತಂಡ ಬಾಂಗ್ಲಾ ಎದುರು ಗೆದ್ದರೆ ಆಗ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವುದು ಖಚಿತ. ಒಂದೊಮ್ಮೆ ಫೈನಲ್‌ ಪ್ರವೇಶಿಸಿದರೆ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕ್‌ ಮಧ್ಯೆ ಪ್ರಶಸ್ತಿ ಕಾದಾಟ ನಡೆಯಲಿದೆ.

ಕಮಿಂದು ಮೆಂಡಿಸ್‌ ಏಕಾಂಗಿ ಹೋರಾಟ

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಶ್ರೀಲಂಕಾಕ್ಕೆ ಎಡಗೈ ವೇಗಿ ಆರಂಭದಲ್ಲೇ ಅವಳಿ ಆಘಾತವಿಕ್ಕಿದರು. ಅಪಾಯಕಾರಿ ಬ್ಯಾಟರ್‌ಗಳಾದ ಪಾತುಮ್ ನಿಸ್ಸಾಂಕ(8) ಮತ್ತು ಉಸಲ್‌ ಮೆಂಡಿಸ್‌(0) ವಿಕೆಟ್‌ ಕಿತ್ತರು. ಆ ಬಳಿಕವೂ ತಂಡಕ್ಕೆ ಉತ್ತಮ ಜತೆಯಾಟ ಲಭಿಸಲಿಲ್ಲ. ಕಮಿಂದು ಮೆಂಡಿಸ್‌ ಏಕಾಂಗಿ ಹೋರಾಟ ನಡೆಸಿ ಬಾರಿಸಿದ ಅರ್ಧಶತಕ ನೆರವಿನಿಂದ ತಂಡ 100ರ ಗಡಿ ದಾಟಿತು. ಅವರು 44 ಎಸೆತಗಳಿಂದ 3 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿ 50 ರನ್‌ ಬಾರಿಸಿದರು. ಇವರನ್ನು ಹೊರತುಪಡಿಸಿ ನಾಯಕ ಅಸಲಂಕ 20 ರನ್‌ ಗಳಿಸಿದರು.

ಪಾಕಿಸ್ತಾನ ಪರ ಸ್ಥಿರವಾಗಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ ಹ್ಯಾರಿಸ್‌ ರೌಫ್‌ 2, ಶಾಹೀನ್‌ ಅಫ್ರಿದಿ 3 ಮತ್ತು ಹುಸೇನ್ ತಲಾತ್ 2 ವಿಕೆಟ್‌ ಕಿತ್ತರು. ಅಬ್ರಾರ್ ಅಹಮದ್ ಒಂದು ವಿಕೆಟ್‌ ಪಡೆದರು.