ನವದೆಹಲಿ: ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್ 2025 ರ ಪುರುಷರ 1,000 ಮೀಟರ್ ಸ್ಪ್ರಿಂಟ್‌ನಲ್ಲಿ ಚಿನ್ನ ಗೆದ್ದ ಆನಂದ್‌ಕುಮಾರ್ ವೇಲ್‌ಕುಮಾರ್(Anandkumar Velkumar) ಅವರಿಗೆ ಪ್ರಧಾನಿ ನರೇಂದ್ರ ಮೋದಿ(PM Modi) ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಪ್ರಧಾನಿ, ವೇಲ್‌ಕುಮಾರ್ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
'ಆನಂದ್‌ಕುಮಾರ್ ಅವರ ಧೈರ್ಯ, ವೇಗ ಮತ್ತು ಚೈತನ್ಯ ಅವರನ್ನು ಸ್ಕೇಟಿಂಗ್‌ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಿ ಮಾಡಿದೆ. ಅವರ ಸಾಧನೆ ಅಸಂಖ್ಯಾತ ಯುವಕರಿಗೆ ಸ್ಫೂರ್ತಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು' ಎಂದು ಮೋದಿ ಶ್ಲಾಘಿಸಿದ್ದಾರೆ.
22 ವರ್ಷದ ಆನಂದ್ ಕುಮಾರ್ ಚೀನಾದಲ್ಲಿ ನಡೆದ ಪುರುಷರ ಸೀನಿಯರ್ 1000 ಮೀಟರ್ ಸ್ಪ್ರಿಂಟ್ ಸ್ಪರ್ಧೆಯ ಫೈನಲ್ ರೇಸ್‌ನಲ್ಲಿ ನಿಗದಿತ ದೂರವನ್ನು 1:24.924 ಸೆಕೆಂಡುಗಳಲ್ಲಿ ಕ್ರಮಿಸಿ ಬಂಗಾರ ತಮ್ಮದಾಗಿಸಿಕೊಂಡರು. ಅಲ್ಲದೆ ವಿಶ್ವ ಚಾಂಪಿಯನ್ ಪಟ್ಟವನ್ನು ಸಹ ಗೆದ್ದರು.
ಮತ್ತೊಂದು ಪೋಸ್ಟ್‌ನಲ್ಲಿ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಆ ಮೂಲಕ 2026ರ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದುಕೊಂಡ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿಗೂ ಮೋದಿ ಶುಭಾಶಯ ತಿಳಿಸಿದ್ದಾರೆ. ‘ಅತ್ಯುತ್ತಮ ಸಾಧನೆ. ವೈಶಾಲಿ ರಮೇಶ್‌ಬಾಬು ಅವರಿಗೆ ಅಭಿನಂದನೆಗಳು. ಅವರ ಉತ್ಸಾಹ ಮತ್ತು ಸಮರ್ಪಣೆ ಅನುಕರಣೀಯ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು‘ ಎಂದು ಹೇಳಿದ್ದಾರೆ.