ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SRH vs MI: ರೋಹಿತ್‌ ಬ್ಯಾಟಿಂಗ್‌ ಅಬ್ಬರ; ಮುಂಬೈಗೆ ‌7 ವಿಕೆಟ್‌ ಜಯ

ಪಂದ್ಯಕ್ಕೂ ಮುನ್ನ ಇತ್ತಂಡಗಳ ಆಟಗಾರರು ಮೌನ ಪ್ರಾರ್ಥನೆಯ ಮೂಲಕ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಆಟಗಾರರು, ಅಂಪೈರ್‌ಗಳು ಮತ್ತು ಎಲ್ಲ ಅಧಿಕಾರಿಗಳು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದರು.

ಹೈದರಾಬಾದ್‌: ಟ್ರೆಂಟ್‌ ಬೌಲ್ಟ್‌(26 ಕ್ಕೆ 4) ಅವರ ಘಾತಕ ಬೌಲಿಂಗ್‌ ದಾಳಿ ಮತ್ತು ರೋಹಿತ್‌ ಶರ್ಮ(70) ಅಬ್ಬರದ ಅರ್ಧಶತಕದ ನೆರವಿನಿಂದ ಬುಧವಾರದ ಐಪಿಎಲ್‌(IPL 2025) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌(SRH vs MI) ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್‌ ಪಾಂಡ್ಯ ಪಡೆ ಹಾಲಿ ಆವೃತ್ತಿಯಲ್ಲಿ ಪ್ಲೇ-ಆಫ್‌ ಅವಕಾಶ ವೃದ್ಧಿಸಿಕೊಂಡಿತು. ಅತ್ತ ಟೂರ್ನಿಯಲ್ಲಿ 6ನೇ ಸೋಲು ಕಂಡ ಪ್ಯಾಟ್‌ ಕಮಿನ್ಸ್‌ ಬಳಗದ ಪ್ಲೇ-ಆಫ್‌ ಹಾದಿ ದುರ್ಗಮಗೊಂಡಿದೆ.

ಇಲ್ಲಿನ ರಾಜೀವ್‌ ಗಾಂಧಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಟ್ರೆಂಟ್‌ ಬೌಲ್ಟ್‌ ಘಾತಕ ದಾಳಿಗೆ ನಲುಗಿ 8 ವಿಕೆಟ್‌ಗೆ 143 ರನ್‌ ಗಳಿಸಲಷ್ಟೇ ಶಕ್ತವಾಯಿತು. ಜವಾಬಿತ್ತ ಮುಂಬೈ ಇಂಡಿಯನ್ಸ್‌ ತಂಡ ಈ ಸಾಧಾರಣ ಮೊತ್ತವನ್ನು 15.4 ಓವರ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 146 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ರೋಹಿತ್‌ ಸತತ ಎರಡನೇ ಅರ್ಧಶತಕ

ಚೇಸಿಂಗ್‌ ವೇಳೆ ಮುಂಬೈ ಪರ ರೋಹಿತ್‌ ಶರ್ಮ ಅಮೋಘ ಅರ್ಧಶತಕ ಬಾರಿಸಿ ಮಿಂಚಿದರು. ಇದು ಹಾಲಿ ಆವೃತ್ತಿಯಲ್ಲಿ ರೋಹಿತ್‌ ಸಿಡಿಸಿದ ಸತತ ಎರಡನೇ ಅರ್ಧಶತಕ. ಕಳೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿಯೂ ಅಜೇಯ ಅರ್ಧಶತಕ ಬಾರಿಸಿದ್ದರು. ಅಬ್ಬರ ಬ್ಯಾಟಿಂಗ್‌ ನಡೆಸಿದ ರೋಹಿತ್‌ ಗೆಲುವಿಗೆ 14 ರನ್‌ ಇದ್ದಾಗ ವಿಕೆಟ್‌ ಕಳೆದುಕೊಂಡರು. 46 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 3 ಸಿಕ್ಸರ್‌ನೊಂದಿಗೆ 70 ರನ್‌ ಗಳಿಸಿದರು. ಅಂತಿಮವಾಗಿ ಸೂರ್ಯಕುಮಾರ್‌ ಯಾದವ್‌ 19 ಎಸೆತಗಳಿಂದ ಅಜೇಯ 40 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್(11) ಗಳಿಸಿದರು.

ಅಗ್ರ ಕ್ರಮಾಂಕದ ಶೋಚನೀಯ ಬ್ಯಾಟಿಂಗ್‌

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ ತಂಡದ ಬ್ಯಾಟಿಂಗ್‌ ಎಷ್ಟು ಶೋಚನೀಯವಾಗಿತ್ತೆಂದರೆ ಪವರ್‌ ಪ್ಲೇ ಮುಕ್ತಾಯಕ್ಕೆ ಕೇವಲ 24 ರನ್‌ ಗಳಿಸಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಿಗ್‌ ಹಿಟ್ಟರ್‌ಗಳಾದ ಟ್ರಾವಿಸ್‌ ಹೆಡ್‌ ಶೂನ್ಯ ಸುತ್ತಿದರೆ, ಇವರ ಜತೆಗಾರ ಅಭಿಷೇಕ್‌ ಶರ್ಮ 8 ರನ್‌ಗೆ ಆಟ ಮುಗಿಸಿದರು. ಇಶಾನ್‌ ಕಿಶನ್‌ (1) ಅಂಪೈರ್‌ ಔಟ್‌ ನೀಡದಿದ್ದರೂ ತಾನೇ ಔಟ್‌ ಎಂದು ದುಡುಕಿನ ನಿರ್ಧಾರದಿಂದ ಅನಗತ್ಯವಾಗಿ ವಿಕೆಟ್‌ ಒಪ್ಪಿಸಿದರು. ಆ ಬಳಿಕ ಬಂದ ನಿತೀಶ್‌ ಕುಮಾರ್‌ ರೆಡ್ಡಿ(2) ಒಂದಂಕಿಗೆ ಸೀತರಾದರು.

ತಂಡಕ್ಕೆ ಆಸರೆಯಾದ ಕ್ಲಾಸೆನ್‌-ಮನೋಹರ್‌

ಇನ್ನೇನು ತಂಡ 50 ರೊಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ ಜತೆಯಾದ 6ನೇ ವಿಕೆಟ್‌ಗೆ ಜತೆಯಾದ ಹೆನ್ರಿಚ್‌ ಕ್ಲಾಸೆನ್‌ ಮತ್ತು ಕನ್ನಡಿಗ ಅಭಿನವ್‌ ಮನೋಹರ್‌ ದಿಟ್ಟ ಬ್ಯಾಟಿಂಗ್‌ ಹೋರಾಟವೊಂದನ್ನು ನಡೆಸಿ ತಂಡವನ್ನು ಅಪಾಯದಿಂದ ಪಾರುಮಾಡಲು ಶಕ್ತಿಮೀರಿ ಪ್ರಯತ್ನಿಸಿದರು. ಈ ಜೋಡಿ 99 ರನ್‌ಗಳ ಜತೆಯಾಟ ನಡೆಸಿದ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು. 44 ಎಸೆತ ಎದುರಿಸಿದ ಕ್ಲಾಸೆನ್‌(9 ಬೌಂಡರಿ, 2 ಸಿಕ್ಸರ್)‌ 71 ರನ್‌ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಅಭಿನವ್‌ ಮನೋಹರ್‌ 3 ಸಿಕ್ಸರ್‌ ಮತ್ತು 2 ಬೌಂಡರಿ ನೆರವಿನಿಂದ 43 ರನ್‌ ಬಾರಿಸಿದರು. ಉಳಿದಂತೆ ಅನಿಕೇತ್ ವರ್ಮಾ(12) ರನ್‌ ಗಳಿಸಿದರು. ತಂಡದ ಪರ ಈ ಮೂವರು ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು.

ಮುಂಬೈ ಪರ ಬೆಂಕಿ ಬೌಲಿಂಗ್‌ ಪ್ರದರ್ಶನ ತೋರಿದ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ 4 ಓವರ್‌ಗಳಿಂದ ಕೇವಲ 26 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ದೀಪಕ್‌ ಚಹರ್‌ 12 ರನ್‌ ವೆಚ್ಚದಲ್ಲಿ 2 ವಿಕೆಟ್‌ ಉರುಳಿಸಿದರು. ಉಳಿದಂತೆ ಜಸ್‌ಪ್ರೀತ್‌ ಬುಮ್ರಾ ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದರು.

ಕಪ್ಪು ಪಟ್ಟಿ ಧರಿಸಿದ ಆಟಗಾರರು

ಪಂದ್ಯಕ್ಕೂ ಮುನ್ನ ಇತ್ತಂಡಗಳ ಆಟಗಾರರು ಮೌನ ಪ್ರಾರ್ಥನೆಯ ಮೂಲಕ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಆಟಗಾರರು, ಅಂಪೈರ್‌ಗಳು ಮತ್ತು ಎಲ್ಲ ಅಧಿಕಾರಿಗಳು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದರು. ಜತೆಗೆ ಪಂದ್ಯದಲ್ಲಿ ಚಿಯರ್ ಲೀಡರ್ಸ್‌ಗಳ ನೃತ್ಯ ಮತ್ತು ಸಿಡಿಮದ್ದಿನ ಪ್ರದರ್ಶನವನ್ನು ಕೈಬಿಡಲಾಯಿತು.