ಜೈಪುರ: ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ(Rajasthan Royals) ಸಂಜು ಸ್ಯಾಮ್ಸನ್(Sanju Samson) ಅವರನ್ನು ಮುಂದಿನ ಆವೃತ್ತಿಯ ಐಪಿಎಲ್(IPL 2026) ಟೂರ್ನಿಯಲ್ಲಿಯೂ ತಂಡದಲ್ಲೇ ಉಳಿಸಿಕೊಳ್ಳಲು ಮುಂದಾಗಿದ್ದರೂ ಕೂಡ ಸಂಜು ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದಷ್ಟೇ ಫ್ರಾಂಚೈಸಿ ಸದ್ಯಕ್ಕೆ ಟ್ರೇಡ್ ವಿಂಡೋ ನಿಯಮದ ಪ್ರಕಾರ ಸ್ಯಾಮ್ಸನ್ ಅವರನ್ನು ಬೇರೆ ತಂಡಕ್ಕೆ ವಿನಿಮಯ ಮಾಡಿಕೊಳ್ಳಲು ಸಿದ್ಧವಿಲ್ಲ. ಅವರು ರಾಯಲ್ಸ್ ತಂಡದ ಪ್ರಮುಖ ಭಾಗವಾಗಿದ್ದು, ತಂಡದ ನಾಯಕರಾಗಿದ್ದಾರೆ ಎಂದು ಹೇಳಿತ್ತು. ಇದೀಗ ಸಂಜುಗೆ ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ವಿಚಾರದಲ್ಲಿ ಫ್ರಾಂಚೈಸಿ ಬಗ್ಗೆ ಅಸಮಾಧನವಿದೆ. ಹೀಗಾಗಿ ಅವರು ಮುಂದಿನ ವರ್ಷ ರಾಜಸ್ಥಾನ್ ಪರ ಆಡದಿರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಸಂಜು ಅವರನ್ನು ಖರೀದಿಸಲು ಎದುರು ನೋಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಇಬ್ಬರು ಆಟಗಾರರನ್ನು ನೀಡಿದರೆ ಸಂಜು ಅವರನ್ನು ಚೆನ್ನೈಗೆ ಬಿಟ್ಟುಕೊಡಲು ರಾಜಸ್ಥಾನ್ ಸಿದ್ಧವಾಗಿದೆ ಎನ್ನಲಾಗಿದೆ. ಆದರೆ ರಾಜಸ್ಥಾನ್ ಯಾವ ಆಟಗಾರರನ್ನು ಆಯ್ಕೆ ಮಾಡಿದೆ ಎಂಬುದು ತಿಳಿದುಬಂದಿಲ್ಲ. ವ್ಯಾಪಾರ ಮಾಡಲಾಗುವ ಆಟಗಾರನು ವಿದೇಶಿ ಆಟಗಾರನಾಗಿದ್ದರೆ, ಖರೀದಿಸುವ ಫ್ರಾಂಚೈಸಿ ಸಂಬಂಧಿತ ಸಂಸ್ಥೆಯಿಂದ ಎನ್‌ಒಸಿ ಪಡೆಯಬೇಕಾಗುತ್ತದೆ.
2021 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಸ್ಯಾಮ್ಸನ್ ನೇತೃತ್ವದಲ್ಲಿ ರಾಯಲ್ಸ್ 33 ಪಂದ್ಯಗಳಲ್ಲಿ ಜಯಗಳಿಸಿದೆ ಮತ್ತು 32 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್ ಪರ ಸಂಜು 4027 ರನ್ ಗಳಿಸಿದ್ದಾರೆ. 18ನೇ ಆವೃತ್ತಿಯಲ್ಲಿ ಕೈ ಬೆರಳಿನ ಗಾಯದಿಂದ ಬಳಲಿದ್ದ ಸಂಜು ಬೆರಳೆಣಿಕೆಯ ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದರು. ಜತೆಗೆ ಕೋಚ್ ದ್ರಾವಿಡ್ ಜತೆ ಮನಸ್ತಾಪ ಮಾಡಿಕೊಂಡಿದ್ದಾಗಿಯೂ ಸುದ್ದಿಯಾಗಿತ್ತು.
2025ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಗಾಯದ ಕಾರಣದಿಂದ ಹಲವು ಪಂದ್ಯಗಳನ್ನು ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಉಸ್ತುವಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಸಂಜು ಆಡಿದ್ದ 9 ಪಂದ್ಯಗಳಲ್ಲಿ 285 ರನ್ ಗಳಿಸಿದ್ದರು.
ಇದನ್ನೂ ಓದಿ Sanju Samson: ಸಂಜು ಸ್ಯಾಮ್ಸನ್ ಖರೀದಿಗೆ ಚೆನ್ನೈ ಫ್ರಾಂಚೈಸಿ ಆಸಕ್ತಿ