ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಣ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ(Anderson-Tendulkar Trophy) ಲಾರ್ಡ್ಸ್ ಟೆಸ್ಟ್‌ನಲ್ಲಿ ಧರಿಸಿದ್ದ ಮತ್ತು ಸಹಿ ಮಾಡಲಾದ ಶುಭಮನ್ ಗಿಲ್(Gill jersey) ಅವರ ಜೆರ್ಸಿ ₹5.41 ಲಕ್ಷಕ್ಕೆ ಹರಾಜಾಗಿದೆ. ‘ರೆಡ್ ಫಾರ್ ರುತ್' (RedforRuth) ಚಾರಿಟಿ’ಗಾಗಿ ನಡೆಸಿದ ಹರಾಜಿನಲ್ಲಿ ಎರಡೂ ತಂಡಗಳ ಆಟಗಾರರು ಸಹಿ ಮಾಡಿದ ಶರ್ಟ್‌ಗಳು, ಕ್ಯಾಪ್, ಬ್ಯಾಟ್, ಭಾವಚಿತ್ರ ಸೇರಿದಂತೆ ಹಲವು ವಸ್ತುಗಳನ್ನು ಹರಾಜಿಗೆ ಇಡಲಾಗಿತ್ತು. ಈ ಪೈಕಿ ಗಿಲ್ ಜೆರ್ಸಿ ಅತ್ಯಂತ ದುಬಾರಿ ಬೆಲೆ ಪಡೆಯಿತು.
‘ರೆಡ್ ಫಾರ್ ರುಥ್’ ಎಂಬುದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರೊ ಸ್ಟ್ರಾಸ್ ಸ್ಥಾಪಿಸಿರುವ ಫೌಂಡೇಶನ್ ಆಗಿದೆ. ಕ್ಯಾನ್ಸರ್ ನಿಂದ ಮೃತಪಟ್ಟ ತನ್ನ ಪತ್ನಿ ರುಥ್ ಸ್ಟ್ರಾಸ್ ಅವರ ಸ್ಮರಣಾರ್ಥ ಫೌಂಡೇಶನ್ ವತಿಯಿಂದ ಪ್ರತೀವರ್ಷ ಲಾರ್ಡ್ಸ್ ನಲ್ಲಿ ಹರಾಜು ನಡೆಸಲಾಗುತ್ತಿದೆ.
ಹರಾಜಿನಿಂದ ಬಂದ ಹಣವನ್ನು ಕ್ಯಾನ್ಸರ್ ಜಾಗೃತಿ ಹಾಗೂ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 3,500 ಕುಟುಂಬಗಳಿಗೆ ನೆರವು ನೀಡಿರುವುದಾಗಿ, ಸಾವಿರಕ್ಕೂ ಹೆಚ್ಚು ವೃತ್ತಿಪರರಿಗೆ ತರಬೇತಿ ನೀಡಿರುವುದಾಗಿ ಫೌಂಡೇಶನ್ ತಿಳಿಸಿದೆ.
ಗಿಲ್ ಜೆರ್ಸಿ ಮಾತ್ರವಲ್ಲದೆ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜ ಅವರ ಜೆರ್ಸಿಗಳು ತಲಾ 4.94 ಲಕ್ಷ ರೂ.ಗೆ ಮಾರಾಟವಾಗಿದೆ. ಉಳಿದಂತೆ ನಾಯಕ ಬೆನ್ ಸ್ಟೋಕ್ಸ್ ಜೆರ್ಸಿ 4 ಲಕ್ಷ ರೂ. ಗಳಿಸಿದೆ. ಜೋ ರೂಟ್ ಸಹಿ ಹಾಕಿರುವ ಕ್ಯಾಪ್ ಬರೋಬ್ಬರಿ 3.52 ಲಕ್ಷ ರೂ.ಗೆ ಮಾರಾಟವಾಗಿದೆ. ರಿಷಭ್ ಪಂತ್ ಅವರ ಕ್ಯಾಪ್ 1.76 ಲಕ್ಷ ರೂ.ಗೆ ಹರಾಜಾಗಿದೆ.
ಇದನ್ನೂ ಓದಿ IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಈ ಬಾರಿಯ ಆ್ಯಂಡರ್‌ಸನ್-ತೆಂಡುಲ್ಕರ್ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿತ್ತು. ಕುತೂಹಲ, ಹೋರಾಟ, ವಿವಾದ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಪಂದ್ಯವನ್ನು ಕಣ್ತುಂಬಿಕೊಳ್ಳುವಂತೆ ಮಾಡಿತ್ತು.
ಅದರಲ್ಲೂ 5ನೇ ಪಂದ್ಯ ಭಾರೀ ಥ್ರಿಲ್ಲರ್ ಕ್ಲೈಮ್ಯಾಕ್ಸ್ ಕ್ಷಣಗಳನ್ನು ನೀಡಿತ್ತು. ಇಂಗ್ಲೆಂಡ್‌ಗೆ ಕೊನೆ ದಿನ 35 ರನ್ ಅಗತ್ಯವಿತ್ತು. ಭಾರತಕ್ಕೆ ಸರಣಿ ಸಮಬಲಗೊಳಿಸಲು 4 ವಿಕೆಟ್‌ಗಳು ಬೇಕಿತ್ತು. ಅಂತೂ ಇಂತು ಭಾರತದ ವೇಗಿಗಳು ಕರಾರುವಾಕ್ ಬೌಲಿಂಗ್ ದಾಳಿ ನಡೆಸಿ 6 ರನ್‌ಗಳ ರೋಚಕ ಜಯಭೇರಿ ಬಾರಿಸಿತ್ತು. ಇದರೊಂದಿಗೆ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾಗೊಂಡಿತ್ತು.