ಕೊಲಂಬೊ: ಗುರುವಾರ ನಡೆದಿದ್ದ 2025ರ ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಲಂಕಾ ಕ್ರಿಕೆಟಿಗನ ಪಾಲಿಗೆ ಬರಸಿಡಿಲು ಬಡಿದಂತ ಅನುಭವವಾಗಿದೆ. ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಒಂದೇ ಓವರ್‌ನಲ್ಲಿ ಮೊಹಮ್ಮದ್ ನಬಿ ಅವರಿಂದ 5 ಎಸೆತಗಳಲ್ಲಿ 5 ಸಿಕ್ಸರ್ ಹೊಡೆಸಿಕೊಂಡರು. ಇದೇ ಸಂದರ್ಭದಲ್ಲಿ ದುನಿತ್ ವೆಲ್ಲಾಲಗೆ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ನಡೆದಿದೆ. ಶ್ರೀಲಂಕಾ ಮುಖ್ಯ ಕೋಚ್ ಸನತ್ ಜಯಸೂರ್ಯ, ಈ ವಿಷಯವನ್ನು ದುನಿತ್ ವೆಲ್ಲಾಲಗೆ ಹೇಳಿ ಸಮಾಧಾನ ಮಾಡುವ ಭಾವುಕ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯದ ಕಾಮೆಂಟ್ರಿ ಮಾಡುತ್ತಿದ್ದ ಶ್ರೀಲಂಕಾ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ದುನಿತ್ ವೆಲ್ಲಾಲಗೆ ಅವರ ತಂದೆ ಸುರಂಗ ನಿಧನಕ್ಕೆ ಕಂಬನಿ ಮಿಡಿದರು. 'ಸುರಂಗ ಕೂಡಾ ಕೆಲ ಸಮಯ ಕ್ರಿಕೆಟ್ ಆಡಿದ್ದರು. ಅವರು ಸ್ಕೂಲ್ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಪ್ರಿನ್ಸ್ ಆಫ್ ವೇಲ್ಸ್ ಕಾಲೇಜು ತಂಡದ ಕ್ಯಾಪ್ಟನ್ ಆಗಿದ್ದರು. ಆಗ ನಾನು ಸೇಂಟ್ ಪೀಟರ್ಸ್ ಸ್ಕೂಲ್ ಕ್ಯಾಪ್ಟನ್ ಆಗಿದ್ದೆ' ಎಂದು ಅರ್ನಾಲ್ಡ್ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಸುರಂಗ ನಿಧನಕ್ಕೆ ಸಂತಾಪ ಸೂಚಿಸಿದೆ.
ತವರಿಗೆ ಮರಳಿದ ವೆಲ್ಲಾಲಗೆ
ತಂದೆಯ ನಿಧನದ ಸುತ್ತಿ ತಿಳಿದ ತಕ್ಷಣ ದುನಿತ್ ವೆಲ್ಲಾಲಗೆ ತವರಿಗೆ ಮರಳಿದ್ದಾರೆ. ಅವರು ಮತ್ತೆ ಏಷ್ಯಾ ಕಪ್‌ನಲ್ಲಿ ತಂಡದ ಭಾಗವಾಗಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ.
20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ದುನಿತ್, ಕೊನೆಯ ಓವರ್‌ನಲ್ಲಿ 32 ರನ್ ಚಚ್ಚಿಸಿಕೊಂಡರು. ಮೊದಲ 3 ಓವರ್‌ನಲ್ಲಿ 17 ರನ್ ನೋಡಿ ಒಂದು ವಿಕೆಟ್ ಪಡೆದಿದ್ದ, ದುನಿತ್, ಕೊನೆಯ ಓವರ್‌ನಲ್ಲಿ ದುಬಾರಿಯಾಗಿದ್ದರು. 169 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡವು 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.