ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼಪಹಲ್ಗಾಂ ದಾಳಿ ಸಂತ್ರಸ್ತ ಕುಟುಂಬಗಳ ಬೆಂಬಲಕ್ಕೆ ನಿಲ್ಲೋಣ; ಗೆಲುವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಸೂರ್ಯಕುಮಾರ್‌

ದುಬೈ ಇಂಟರ್‌ನ್ಯಾಷನಲ್‌ ಕ್ರಕೆಟ್‌ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನ, ಬೃಹತ್‌ ಮೊತ್ತ ಪೇರಿಸುವ ಮೂಲಕ ಭಾರತಕ್ಕೆ ಒತ್ತಡ ಹೇರುವ ಯೋಜನೆಯಲ್ಲಿತ್ತು. ಆದರೆ ಚೈನಾಮನ್‌ ಕುಲ್‌ದೀಪ್‌ ಯಾದವ್‌ ಸ್ಪಿನ್‌ ದಾಳಿಗೆ ಪತರಗುಟ್ಟಿದ ಪಾಕ್‌ 9 ವಿಕೆಟ್‌ಗೆ 127 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ದುಬೈ: ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ(IND vs PAK) ವಿರುದ್ಧ ಭಾರತ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ ದುಬೈನಲ್ಲಿ ನಡೆದ ಏಷ್ಯಾಕಪ್‌ ಟಿ20 ಟೂರ್ನಿಯ ಲೀಗ್‌ ಪಂದ್ಯದಲ್ಲಿ 7 ವಿಕೆಟ್‌ ಅಂತರದ ಸೋಲುಣಿಸಿದೆ. ಈ ಗೆಲುವವನ್ನು ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ಅವರು ಸಶಸ್ತ್ರ ಪಡೆಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳಿಗೆ ಅರ್ಪಿಸಿದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಸೂರ್ಯಕುಮಾರ್‌, "ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಜತೆಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಅವರ ಕುಟುಂಬಕ್ಕೆ ಗೌರವ ಸೂಚಿಸಲು ಇದು ಪರಿಪೂರ್ಣ ಸಂದರ್ಭ. ಈ ಗೆಲುವನ್ನು ನಮ್ಮ ಎಲ್ಲಾ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಧೈರ್ಯಕ್ಕೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ನಾವು ಆಶಿಸುತ್ತೇವೆ. ಮತ್ತು ಅವರನ್ನು ನಗಿಸಲು ಅವಕಾಶ ಸಿಕ್ಕಾಗಲೆಲ್ಲಾ ನಾವು ಅದನ್ನು ಯಶಸ್ವಿಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ" ಎಂದು ಹೇಳಿದರು.



ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ರಿಕೆಟ್‌ ಆಡುವ ಬಗ್ಗೆ ಭಾರೀ ಚರ್ಚೆಯಾಗಿತ್ತು. ಪಾಕ್‌ ಜೊತೆಗಿನ ಎಲ್ಲಾ ರೀತಿ ಸಂಬಂಧ ಕಡಿದುಕೊಳ್ಳಲು ವ್ಯಾಪಕ ಒತ್ತಾಯ ಕೇಳಿಬಂದಿತ್ತು. ಭಾರತದ ಹಲವು ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲೂ ಅಭಿಯಾನ ಕೈಗೊಂಡು ಪಂದ್ಯ ವೀಕ್ಷಿಸದಂತೆ ಕರೆ ನೀಡಿದ್ದರು.

ಇದನ್ನೂ ಓದಿ IND vs PAK: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ 'ಸಿಂಧೂರ'; 7 ವಿಕೆಟ್‌ ಭರ್ಜರಿ ಜಯ

ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದ ಕಾನ್ಪುರದ ಉದ್ಯಮಿ ಶುಭಂ ದ್ವಿವೇದಿ ಅವರ ಪತ್ನಿ ಐಶಾನ್ಯ ಪಂದ್ಯದ ವಿರುದ್ಧ ಕಿಡಿಕಾರಿ ಪಾಕಿಸ್ತಾನ ವಿರುದ್ಧ ತಂಡ ಪಂದ್ಯ ಆಡುವುದು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಮಾಡುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.