ದುಬೈ: ಏಷ್ಯಾಕಪ್ ಟಿ20(Asia Cup 2025) ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ‘ನೋ ಶೇಕ್‌ಹ್ಯಾಂಡ್’ ವಿಚಾರವನ್ನು ಪಾಕ್, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬಳಿ ಕೊಂಡೊಯ್ದಿದ್ದು, ಇತ್ತ ಟೀಂ ಇಂಡಿಯಾ ತನ್ನ ಪ್ರತಿರೋಧವನ್ನು ಟೂರ್ನಿಯುದ್ದಕ್ಕೂ ಮುಂದುವರಿಸುವ ಲಕ್ಷಣಗಳಿವೆ. ಭಾರತ-ಪಾಕಿಸ್ತಾನ(IND vs PAK) ಭಾನುವಾರ ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ದವು.
2 ತಂಡಗಳು ಸೂಪರ್-4 ಹಂತ ಪ್ರವೇಶಿಸುವ ಸಾಧ್ಯತೆ ಹೆಚ್ಚಿದ್ದು, ಅಲ್ಲೂ ಪರಸ್ಪರ ಸೆಣಸಾಡಬಹುದು. ಬಳಿಕ ಉಭಯ ತಂಡಗಳು ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಂಭವವಿದೆ. ಸೂಪರ್-4 ಹಾಗೂ ಫೈನಲ್‌ನಲ್ಲೂ ಪಾಕಿಸ್ತಾನ ಆಟಗಾರರ ಕೈ ಕುಲುಕುವ ಸಾಧ್ಯತೆ ಇಲ್ಲ. ಆದರೆ ಫೈನಲ್‌ನಲ್ಲಿ ಭಾರತ ಗೆದ್ದರೆ ಕೊಂಚ ಸಂಕಷ್ಟಕ್ಕೆ ಸಿಲುಕಲಿದೆ.
ಹೌದು, ಒಂದು ವೇಳೆ ಭಾರತ ಟೂರ್ನಿಯಲ್ಲಿ ಚಾಂಪಿಯನ್ ಆದರೆ ಟ್ರೋಫಿ ಸ್ವೀಕರಿಸುವುದು ಯಾರಿಂದ ಎಂಬ ಕುತೂಹಲವಿದೆ. ಯಾಕೆಂದರೆ, ಎಸಿಸಿ ಮುಖ್ಯಸ್ಥರಾಗಿರುವುದು ಪಾಕ್‌ನ ಮೊಹ್ಸಿನ್ ನಖ್ವಿ. ವಿಜೇತರಿಗೆ ಮುಖ್ಯಸ್ಥರೇ ಟ್ರೋಫಿ ವಿತರಿಸುವುದು ವಾಡಿಕೆ. ಆದರೆ ಭಾರತ ಗೆದ್ದರೆ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲಿದೆಯೇ ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳಲ್ಲಿದೆ.
ಆಟಗಾರರು ಪರಸ್ಪರ ಕೈಕುಲುಕುವುದು, ಅಭಿನಂದನೆ ಸಲ್ಲಿಸುವುದು ಕ್ರೀಡಾ ವಾಡಿಕೆ. ಆದರೆ ಇದು ಕ್ರೀಡಾಸ್ಫೂರ್ತಿಯ ಭಾಗ ಮಾತ್ರವಾಗಿದ್ದು, ಕಡ್ಡಾಯವೇನಲ್ಲ ಅಂತಹ ಉಲ್ಲಂಘನೆಗಳಿಗೆ ದಂಡಗಳು ಹೇರುವ ಕ್ರಮವಿಲ್ಲ.