ನವದೆಹಲಿ: 2008ರ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯ ಸಮಯದಲ್ಲಿ ಎಂಎಸ್ ಧೋನಿ(MS Dhoni) ನನ್ನನ್ನು ತಂಡದಿಂದ ಕೈಬಿಟ್ಟಾಗ ಏಕದಿನ ನಿವೃತ್ತಿಯ ಬಗ್ಗೆ ಯೋಚಿಸಿದೆ ಎಂಬ ವಿಚಾರವನ್ನು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್(Virender Sehwag) ಬಹಿರಂಗಪಡಿಸಿದ್ದಾರೆ. 2007-08ರ ಸರಣಿಯಲ್ಲಿ, ಸೆಹ್ವಾಗ್ ಕಳಪೆ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಲ್ಲಿ 16.20 ಸರಾಸರಿಯಲ್ಲಿ ಕೇವಲ 81 ರನ್ ಗಳಿಸಿದ್ದರು. ಇದರಿಂದಾಗಿ ಧೋನಿ ಅವರನ್ನು ತಂಡದಿಂದ ಕೈಬಿಡಬೇಕಾಯಿತು.
ಅಂದಿನ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಸೆಹ್ವಾಗ್, "2007-08ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ, ನಾನು ಮೊದಲ ಮೂರು ಪಂದ್ಯಗಳನ್ನು ಆಡಿದೆ ಮತ್ತು ನಂತರ ಎಂಎಸ್ ಧೋನಿ ನನ್ನನ್ನು ತಂಡದಿಂದ ಕೈಬಿಟ್ಟರು. ಅದಾದ ನಂತರ ಸ್ವಲ್ಪ ಸಮಯದವರೆಗೆ ನನ್ನನ್ನು ಆಯ್ಕೆ ಮಾಡಲಾಗಿಲ್ಲ. ನಂತರ ನಾನು ಆಡುವ XI ನ ಭಾಗವಾಗಲು ಸಾಧ್ಯವಾಗದಿದ್ದರೆ, ನಾನು ಏಕದಿನ ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನನಗೆ ಅನಿಸಿತು" ಎಂದು ಸೆಹ್ವಾಗ್ ಹೇಳಿದರು.
ನಿವೃತ್ತಿ ನಿರ್ಧಾರ ಮಾಡಿದ ನಾನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮಾತನಾಡಲು ಹೋಗಿದ್ದೆ. ಈ ವೇಳೆ ಅವರು ತಕ್ಷಣ ನಿವೃತ್ತಿ ಹೊಂದದಂತೆ ಹೇಳಿದರು. 1999-2000ದಲ್ಲಿ ಸಚಿನ್ ಇದೇ ರೀತಿಯ ಕಷ್ಟವನ್ನು ಎದುರಿಸಿದ ಬಗ್ಗೆ ನನಗೆ ತಿಳಿಸಿದರು. ಅಲ್ಲದೆ ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳದೆ ಇನ್ನೂ ಕೆಲವು ಸರಣಿಗಳಿಗೆ ಆಡುವಂತೆ ಸಚಿನ್ ಒತ್ತಾಯಿಸಿದರು. ಅಂದು ಅವರು ಒತ್ತಾಯಿಸಿದ ಕಾರಣ ನಿವೃತ್ತಿ ಯೋಚನೆಯಿಂದ ಹಿಂದೆ ಸರಿದು 2011ರ ವಿಶ್ವಕಪ್ ಕಪ್ ಕೂಡ ಆಡುವಂತಾಯಿತು ಎಂದು ಸೆಹ್ವಾಗ್ ನೆನಪಿಸಿಕೊಂಡರು.
ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸೇರ ಹಲವು ದಾಖಲೆ ನಿರ್ಮಿಸಿದ್ದ ಸೆಹ್ವಾಗ್ 2015ರಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಸೆಹ್ವಾಗ್ 1999ರಿಂದ 2013ರವರೆಗೆ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ Virender Sehwag: 20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ವೀರೇಂದ್ರ ಸೆಹವಾಗ್ ದಂಪತಿ!
ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ
ಸೆಹ್ವಾಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಶತಕ ಮತ್ತು 32 ಅರ್ಧಶತಕಗಳೊಂದಿಗೆ 8,586 ರನ್ ಗಳಿಸಿದ್ದಾರೆ. ಅಲ್ಲದೆ 40 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಏಕದಿನದಲ್ಲಿ, 251 ಪಂದ್ಯಗಳ ಮೂಲಕ 15 ಶತಕ ಮತ್ತು 38 ಅರ್ಧಶತಕಗಳೊಂದಿಗೆ 8,273 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 96 ವಿಕೆಟ್ ಉರುಳಿಸಿದ್ದಾರೆ.