ನವದೆಹಲಿ: ಭಾರೀ ಕುತೂಹಲ, ಹಾಗೂ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಈ ಬಾರಿಯ ತೆಂಡುಲ್ಕರ್-ಆ್ಯಂಡರ್‌ಸನ್ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿದೆ. ಸರಣಿ ಸೋಲಿನ ಭೀತಿಯಲ್ಲಿದ್ದ ಭಾರತ ತಂಡ ಕೊನೆಗೂ ದಿಟ್ಟ ಪ್ರದರ್ಶನ ತೋರುವ ಮೂಲಕ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಇದೀಗ ಒಂದು ತಿಂಗಳ ವಿಶ್ರಾಂತಿ ಪಡೆಯಲಿರುವ ಆಟಗಾರರು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗಲಿದ್ದಾರೆ.
ಏಷ್ಯಾದ ಪ್ರತಿಷ್ಠಿತ ತಂಡಗಳ ನಡುವೆ ನಡೆಯುವ ಈ ಟೂರ್ನಿಯ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ 28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 19 ಪಂದ್ಯಗಳು ನಡೆಯಲಿದೆ.
ಭಾರತದ ಲೀಗ್ ಪಂದ್ಯಗಳು ಕ್ರಮವಾಗಿ ಸೆ. 10, 14 ಹಾಗೂ 19ರಂದು ನಿಗದಿಯಾಗಿದೆ. ಈ ದಿನಗಳಲ್ಲಿ ಯುಎಇ, ಪಾಕಿಸ್ತಾನ ಹಾಗೂ ಓಮಾನ್ ತಂಡಗಳನ್ನು ಭಾರತ ಎದುರಿಸಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ತಮ್ಮ ಗ್ರೂಪ್‌ನಲ್ಲಿ ಮೊದಲ ಎರಡು ಅಗ್ರ ತಂಡಗಳಾಗುವುದು ಬಹುತೇಕ ಖಚಿತವಾಗಿದ್ದು, ಸೂಪರ್-4 ಸ್ಟೇಜ್‌ನಲ್ಲಿ ಸೆ. 21ರಂದು ಮುಖಾಮುಖಿಯಾಗಲಿದೆ. ಭಾರತದ ಸೂಪರ್-4 ಸ್ಟೇಜ್ ಹಂತದ ಉಳಿದ ಪಂದ್ಯಗಳು ಲೀಗ್ ಹಂತದಲ್ಲಿ ತಂಡ ಯಾವ ಸ್ಥಾನ ಪಡೆಯಲಿದೆ ಎನ್ನುವ ಆಧಾರದ ಮೇಲೆ ನಿರ್ಧಾರವಾಗಲಿದೆ.
ಈ ಬಾರಿ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಕಾರಣ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಆಟ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಯುವ ಆಟಗಾರರು ಈ ಬಾರಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂಡದ ಆಯ್ಕೆ ಆಗಸ್ಟ್ ಅಂತ್ಯದ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ರಿಷಭ್ ಪಂತ್ ಗಾಯಗೊಂಡಿರುವ ಕಾರಣ ವಿಕೆಟ್ ಕೀಪಿಂಗ್ ಹೊಣೆ ಕನ್ನಡಿಗ ಕೆ.ಲ್ ರಾಹುಲ್ ಪಾಲಾಗಲಿದೆಯಾ ಅಥವಾ ಕೇರಳ ಸಂಜು ಸ್ಯಾಮ್ಸನ್‌ಗೆ ಒಲಿಯಲಿದೆಯಾ ಎಂದು ಕಾದು ನೋಡಬೇಕಿದೆ.
8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಮತ್ತು ಒಮಾನ್ ತಂಡಗಳಿದ್ದರೆ, 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮತ್ತು ಹಾಂಗ್ ಕಾಂಗ್ ಕಾಣಿಸಿಕೊಂಡಿದೆ.